ಇಸ್ಲಾಮಾಬಾದ್ : ಅಫ್ಘಾನ್ ಪಡೆಗಳು ಇಂದು ಪ್ರಕ್ಷುಬ್ಧ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ಪಾಕ್ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ ಓರ್ವ ಮಹಿಳೆ ಸಹಿತ ಕನಿಷ್ಠ ಮೂವರು ಮೃತಪಟ್ಟು, ಇತರ 17 ಮಂದಿ ಗಾಯಗೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಲೂಚಿಸ್ಥಾನದ ಚಮನ್ ಜಿಲ್ಲೆಯ ಕಾಲಿ ಲಕ್‌ಮನ್ ಮತ್ತು ಕಾಲಿ ಜಹಾಂಗೀರ್ ಪ್ರದೇಶದಲ್ಲಿ ಅಫ್ಘಾನ್ ಪಡೆಗಳು ಶೆಲ್ಲಿಂಗ್ ನಡೆಸಿದವು. ಅಫ್ಘಾನ್ ಭದ್ರತಾ ಅಧಿಕಾರಿಗಳು ಹೇಳಿರುವ ಪ್ರಕಾರ ಈ ಗುಂಡಿನ ದಾಳಿಯು ಈ ಪ್ರದೇಶದಲ್ಲಿನ ಪಾಕ್ ಚೆಕ್ ಪೋಸ್ಟ್‌ಗಳನ್ನು ಗುರಿ ಇರಿಸಿ ನಡೆಸಲಾಗಿದೆ.
ಅಫ್ಘಾನ್ ಪಡೆಗಳ ಈ ದಾಳಿಗೆ ಪಾಕ್ ಪಡೆಗಳು ಗುಂಡಿನ ಉತ್ತರ ನೀಡಿರುವುದಾಗಿ ತಿಳಿದುಬಂದಿದೆ.
ಅಫ್ಘಾನ್ ಕಡೆಯಿಂದ ನಡೆದಿರುವ ಗುಂಡಿನ ದಾಳಿಗೆ ಓರ್ವ ಮಹಿಳೆ ಸಹಿತ ಮೂವರು ಮೃತಪಟ್ಟಿದ್ದು ಇತರ 17 ಮಂದಿ ಗಾಯಗೊಂಡಿರುವುದನ್ನು ಚಮನ್ ಸರಕಾರಿ ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಂಟ್ ಅಖ್‌ತರ್ ದೃಢಪಡಿಸಿದ್ದಾರೆ.
ಚಮನ್ ನಲ್ಲಿನ ಸೆನ್ಸಸ್ ತಂಡಕ್ಕೆ ಭದ್ರತೆ ನೀಡುತಿತದ್ದ ಪಾಕ್ ಫ್ರಾಂಟಿಯರ್ ಪಡೆಯ ಸಿಬಂದಿಗಳ ಮೇಲೆ ಅಫ್ಘಾನ್ ಗಡಿ ರಕ್ಷಣಾ ಪೊಲೀಸರು ಗುಂಡಿನ ದಾಳಿ ನಡೆಸಿದರೆಂದು ಪಾಕ್ ಸೇನೆಯ ಮಾಧ್ಯಮ ವಿಭಾಗವಾಗಿರುವ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.