ಲಕ್ನೋ(ಉತ್ತರಪ್ರದೇಶ): ಪಂಜಾಬ್ ನ ಗುರುದಾಸ್ ಪುರ್ ಪೊಲೀಸ್ ಚೆಕ್ ಪಾಯಿಂಟ್ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಭಯೋ*ತ್ಪಾದಕರನ್ನು ಉತ್ತರಪ್ರದೇಶದ ಪಿಲಿಭಿಟ್ ಪೊಲೀಸರು ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಕಳೆದ ತಡರಾತ್ರಿ ಉತ್ತಪ್ರದೇಶ ಪೊಲೀಸರು ಮತ್ತು ಪಂಜಾಬ್ ಪೊಲೀಸರ ಜಂಟಿ ತಂಡ ಹಾಗೂ ಮೂವರು ಖಲಿಸ್ತಾನಿ ಭಯೋ*ತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಪೊಲೀಸರು ಮೂವರನ್ನು ಬಂಧಿಸಲು ಯತ್ನಿಸಿದ್ದರು, ಆದರೆ ಈ ಸಂದರ್ಭದಲ್ಲಿ ಖಲಿಸ್ತಾನಿಗಳು ಗುಂಡಿನ ದಾಳಿ ನಡೆಸಿದ್ದರು.
ಅದಕ್ಕೆ ಉತ್ತರಪ್ರದೇಶ ಮತ್ತು ಪಂಜಾಬ್ ಪೊಲೀಸರು ಪ್ರತಿದಾಳಿ ನಡೆಸಿದ್ದು, ಗುರ್ವಿಂದರ್ ಸಿಂಗ್, ವೀರೇಂದ್ರ ಸಿಂಗ್ ಮತು ಜಸನ್ ಪ್ರೀತ್ ಸಿಂಗ್ ಎನ್ ಕೌಂಟರ್ ನಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಸಂದರ್ಭದಲ್ಲಿ ಎರಡು ಎಕೆ 47 ರೈಫಲ್ಸ್ ಹಾಗೂ ಹಲವು ಗ್ಲೋಕ್ ಪಿಸ್ತೂಲ್ಸ್ ವಶಪಡಿಸಿಕೊಳ್ಳಲಾಗಿದೆ. ಈ ಮೂವರು ಪಾಕಿಸ್ತಾನ ಪ್ರಾಯೋಜಿತ ಖಲಿಸ್ತಾನ್ ಜಿಂದಾಬಾದ್ ಪಡೆಯ ಸದಸ್ಯರಾಗಿರುವುದಾಗಿ ವರದಿ ತಿಳಿಸಿದೆ.
ಪಂಜಾಬ್ ಗಡಿಭಾಗದ ಚೆಕ್ ಪೋಸ್ಟ್ ಮೇಲೆ ಈ ಮೂವರು ಗ್ರೆನೇಡ್ ದಾಳಿ ನಡೆಸಿದ ಘಟನೆಯಲ್ಲಿ ಶಾಮೀಲಾಗಿದ್ದರು ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಎಕ್ಸ್ ನಲ್ಲಿ ತಿಳಿಸಿದ್ದಾರೆ.