ಕಲಬುರಗಿ:
ಕೊರೊನಾ ಸೋಂಕಿನಿಂದಾಗಿ ಮೃತಪಟ್ಟ ಕಲುಬುರಗಿಯ ವ್ಯಕ್ತಿಯ ಮಗನ ಸಂದರ್ಶನ ನಡೆಸಿದ್ದ ಪತ್ರಕರ್ತರ ಮೇಲೂ ನಿಗಾ ಇಡಲಾಗುವುದು ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ ಹೇಳಿದರು.
ಇಂದು ಸುದ್ದಿಗೋಷ್ಟಿ ನಡೆಸಿದ ಅವರು ಜಿಲ್ಲೆಯ ಕೊರೊನಾ ವಿರುದ್ಧ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸೋಂಕಿತನ ಮಗನ ಸಂದರ್ಶನ ನಡೆಸಿದ ಇಬ್ಬರು ವರದಿಗಾರರು ಮತ್ತು ಕ್ಯಾಮೆರಾಮನ್ ಅವರನ್ನು ಸುದ್ದಿಗೋಷ್ಠಿಯಲ್ಲಿ ಪ್ರತ್ಯೇಕವಾಗಿ ಕುಳಿತುಕೊಳ್ಳಲು ಸೂಚಿಸಿದರು. ನಂತರದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳ ಮೂಲಕ ತಪಾಸಣೆ ನಡೆಸಿ, ಮನೆಯಲ್ಲಿ ನಿಗಾವಣೆಯಲ್ಲಿ ಇರುವಂತೆ ಹೇಳಿದರು.
ಓರ್ವ ಸ್ಥಳೀಯ ಚಾನೆಲ್ ವರದಿಗಾರ, ಓರ್ವ ರಾಜ್ಯ ಮಟ್ಟದ ಚಾನೆಲ್ ವರದಿಗಾರ ಮತ್ತು ಕ್ಯಾಮರಾಮನ್ ಸಂದರ್ಶನ ನಡೆಸಿದ್ದರು. ಇವರಿಗೆ 14 ದಿನಗಳ ಕಾಲ ಮನೆಯಲ್ಲಿಯೂ ಪ್ರತ್ಯೇಕವಾಗಿ ಇರುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಕೊರೊನಾ ಸೋಂಕು ಗಾಳಿಯಿಂದ ಹರಡುವುದಿಲ್ಲ. ಆದ್ದರಿಂದ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮನೆಯ ಸುತ್ತ-ಮುತ್ತಲಿನ ನಿವಾಸಿಗಳು ಅನಗತ್ಯವಾಗಿ ಆತಂಕಕ್ಕೆ ಒಳಗಾಗಬಾರದು ಎಂದೂ ಅವರು ಮನವಿ ಮಾಡಿದರು.