ಜೆಮ್ ಶೆಡ್ ಪುರ್: ದೇಶದ ಪ್ರತಿಷ್ಠಿತ ಟಾಟಾ ಸ್ಟೀಲ್ ಪ್ಲ್ಯಾಂಟ್ ನಲ್ಲಿ ಗ್ಯಾಸ್ ಪೈಪ್ ಲೈನ್ ಸ್ಫೋಟಗೊಂಡ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಶನಿವಾರ (ಮೇ 07) ನಡೆದಿರುವುದಾಗಿ ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಭೀಕರ ಅಪಘಾತ : ಮೂವರು ಮಹಿಳೆಯರು ಸೇರಿ ಏಳು ಮಂದಿ ಸ್ಥಳದಲ್ಲೇ ಸಾವು
ಪ್ಲ್ಯಾಂಟ್ ನಲ್ಲಿ ಮಧ್ಯಾಹ್ನ ಸ್ಫೋಟ ಸಂಭವಿಸಿದ್ದು, ಗಾಯಗೊಂಡ ಉದ್ಯೋಗಿಗಳನ್ನು ಟಾಟಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಮ್ ಶೆಡ್ ಪುರದ ಟಾಟಾ ಸ್ಟೀಲ್ ಫ್ಯಾಕ್ಟರಿಯಲ್ಲಿನ ಕೋಕ್ ಘಟಕದಲ್ಲಿ ಗ್ಯಾಸ್ ಪೈಪ್ ಲೈನ್ ಮತ್ತು ಬ್ಯಾಟರಿ ಸ್ಫೋಟಗೊಂಡಿತ್ತು.
ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಸ್ಥಳಕ್ಕೆ ಐದು ಅಗ್ನಿಶಾಮಕ ದಳ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಕೋಕ್ ಪ್ಲ್ಯಾಂಟ್ ನ 6ನೇ ಘಟಕದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಕೋಕ್ ಘಟಕದೊಳಗೆ ಏಕಾಏಕಿ ಸ್ಫೋಟ ಸಂಭವಿಸಿದ ಪರಿಣಾಮ ಭಯದಿಂದ ಉದ್ಯೋಗಿಗಳು ದಿಕ್ಕಾಪಾಲಾಗಿ ಓಡತೊಡಗಿದ್ದರು. ಇದರ ಪರಿಣಾಮ ಮೂವರು ಕೆಳಕ್ಕೆ ಬಿದ್ದು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.