Advertisement

3 DCM ಚರ್ಚೆ ಮತ್ತೆ ಮುನ್ನೆಲೆಗೆ: ಜಾರಕಿಹೊಳಿ ನಿವಾಸದಲ್ಲಿ ಮಾತುಕತೆ?

01:14 AM Jan 06, 2024 | Team Udayavani |

ಬೆಂಗಳೂರು: ಕಾಂಗ್ರೆಸ್‌ ಸರಕಾರಕ್ಕೆ ಡಿಸಿಎಂ ಹುದ್ದೆ ಸೃಷ್ಟಿಯ ತಲೆನೋವು ಹೆಚ್ಚಾಗುತ್ತಿದ್ದು, ಪ್ರಮುಖ ಸಮುದಾಯಕ್ಕೊಂದು ಡಿಸಿಎಂ ಹುದ್ದೆ ಬೇಕೇಬೇಕೆಂದು ಹೈಕಮಾಂಡ್‌ ಮುಂದೆ ಬೇಡಿಕೆ ಮಂಡಿಸಲು ಸಮಾನ ಮನಸ್ಕ ಸಚಿವರು ಅಣಿಯಾಗಿದ್ದಾರೆ. ಯಾವುದೇ ಕಾರಣಕ್ಕೂ ಒಂದಕ್ಕಿಂತ ಹೆಚ್ಚು ಡಿಸಿಎಂ ಹುದ್ದೆ ಸೃಷ್ಟಿ ಯಾಗಬಾರದು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಸರಕಾರ ರಚನೆ ಸಂದರ್ಭದಲ್ಲೇ ಹೈಕಮಾಂಡ್‌ಗೆ ಷರತ್ತು ವಿಧಿಸಿದ್ದರು. ಆದರೆ ಇದಕ್ಕೆ ಸೆಡ್ಡು ಹೊಡೆಯಲು ಸಜ್ಜಾಗಿರುವ ಸಚಿವರು ಪಟ್ಟು ಸಡಿಲಿಸದಿರಲು ನಿರ್ಧರಿಸಿದ್ದಾರೆ.
ಲೋಕಸಭೆ ಚುನಾವಣೆ ಹಾಗೂ ಪ್ರಣಾಳಿಕೆ ತಯಾರಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್‌ ದಿಲ್ಲಿಗೆ ಹೋಗಿದ್ದರು. ಇದೇ ವೇಳೆಗೆ ಇತ್ತ ಸಚಿವ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಭೋಜನ ಕೂಟ ನಡೆಸಿದ ಐದಾರು ಸಚಿವರು ಡಿಸಿಎಂ ಹುದ್ದೆಯ ಬಗ್ಗೆ ಸುಮಾರು ಒಂದು ತಾಸು ಕಾಲ ಸಮಾ ಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

Advertisement

ಊಟಕ್ಕೆ ಸೇರಿದ್ದೆವು ಎಂದಿರುವ ಕೆಲವರು ಹಲವು ಬಗೆಯ ಚರ್ಚೆ ಮಾಡಿದ್ದೇವೆ, ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ಸಭೆಯೊಳಗೆ ಡಿಸಿಎಂ ಹುದ್ದೆಯ ಬಗ್ಗೆ ಚರ್ಚೆಯಾಗಿರುವ ಸುಳಿವನ್ನು ಕೆಲವು ಸಚಿವರು ಬಿಟ್ಟುಕೊಟ್ಟಿದ್ದಾರೆ.

ಭೋಜನ ಕೂಟ ರಾಜಕೀಯ
ಈ ಹಿಂದೆ ದಸರಾ ನೆಪದಲ್ಲಿ ಶಾಸಕರನ್ನು ಮೈಸೂರಿಗೆ ಕರೆದೊಯ್ದು ಅಲ್ಲಿಂದ ವಿದೇಶ ಪ್ರವಾಸ ಕೈಗೊಳ್ಳಲು ತಯಾ
ರಾಗಿದ್ದ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಹೈಕ
ಮಾಂಡ್‌ ತಡೆ ಹಾಕಿತ್ತು. ಇದಾದ ಬಳಿಕ ಡಾ| ಪರಮೇಶ್ವರ್‌ ನಿವಾಸದಲ್ಲಿ ಭೋಜನ ಕೂಟ ಏರ್ಪಡಿಸಲಾಗಿತ್ತು. ವಿಶೇಷವೆಂದರೆ ಅಂದಿನ ಸಭೆಯಲ್ಲಿ ಸಿಎಂ ಸಿದ್ದು ಕೂಡ ಇದ್ದರು. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಆಹ್ವಾನವೇ ಇರಲಿಲ್ಲ. ಈಗ ಸಿಎಂ, ಡಿಸಿಎಂ ಇಲ್ಲದ ಸಂದರ್ಭ ನೋಡಿಕೊಂಡು ಸಚಿವ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಭೋಜನ ಕೂಟ ಏರ್ಪಾಡಾಗಿದೆ.

ನಡೆದದ್ದೇನು?
ಡಿಕೆಶಿ, ಸಿದ್ದರಾಮಯ್ಯ ದಿಲ್ಲಿಗೆ ಹೋಗಿದ್ದಾಗಲೇ ಸಚಿವ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಪ್ರಮುಖರ ಸಭೆ
ಪ್ರಮುಖ ಸಮುದಾಯಗಳಿಗೆ ಡಿಸಿಎಂ ಸ್ಥಾನ ಬೇಕು: ಪಟ್ಟು ಸಡಿಲಿಸದಿರಲು ಸಚಿವರ ನಿರ್ಧಾರ
ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಬೇಡ: ಈ ಮುಂಚೆಯೇ ಡಿಕೆಶಿ ಸಲ್ಲಿಸಿದ್ದ ಷರತ್ತು ಕಡೆಗಣನೆ

ಊಟಕ್ಕೆ ಕರೆದಿದ್ದರು, ಹೋಗಿದ್ದೆವು. ಸ್ನೇಹಿತರು ಒಂದೆಡೆ ಸೇರಿದ ಮೇಲೆ ಪ್ರಸ್ತುತ ರಾಜಕಾರಣ, ನಮ್ಮ ಪಕ್ಷದ ವಿಚಾರ, ಇತರ ಪಕ್ಷಗಳ ವಿಚಾರ ಸಹಿತ ಅನೇಕ ವಿಷಯ ಚರ್ಚಿಸಿರುತ್ತೇವೆ. ಅದೊಂದು ಫ್ರೆಂಡ್ಲಿ ಡಿನ್ನರ್‌ ಆಗಿತ್ತು. ಡಿ. 10ರಂದು ಸುಜೇìವಾಲಾ ಅವರು ಬರುತ್ತಾರೆ, ಅಲ್ಲಿ ಚರ್ಚಿಸುತ್ತೇವೆ.
-ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next