– 30 ಅನಿವಾಸಿ ಭಾರತೀಯ ಸಾಧಕರಿಗೆ ಸನ್ಮಾನ
Advertisement
ಬೆಂಗಳೂರು: ರಾಜಧಾನಿಯಲ್ಲಿ ನಡೆದ ಮೂರು ದಿನಗಳ ಪ್ರವಾಸಿ ಭಾರತೀಯ ದಿವಸ ಸಮಾವೇಶಕ್ಕೆ ಸೋಮವಾರ ತೆರೆ ಬಿದ್ದಿದ್ದು, ಜಗತ್ತಿನ ವಿವಿಧೆಡೆ ನೆಲೆಸಿರುವ ಅನಿವಾಸಿ ಭಾರತಿಯರ ಸಮಾಗಮಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.
Related Articles
Advertisement
ಸಮಾವೇಶದಲ್ಲಿ ಭಾಗವಹಿಸಿದ್ದ ಅನಿವಾಸಿ ಭಾರತೀಯ ಸಮುದಾಯವು ಸಹ ತಾವಿರುವ ಕಡೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗೋಷ್ಠಿಗಳಲ್ಲಿ ವಿವರಿಸಿ ಕೇಂದ್ರ ಸರ್ಕಾರದಿಂದ ಅಗಬೇಕಿರುವ ಕ್ರಮಗಳ ಬಗ್ಗೆ ಪ್ರಸ್ತಾಪಿಸಿತು. ಅರಬ್ ರಾಷ್ಟ್ರಗಳಲ್ಲಿ ಉದ್ಯೋಗ ಕಡಿತ, ಪಾಸ್‌ಪೋರ್ಟ್ ಮತ್ತು ವೀಸಾ ಸಮಸ್ಯೆ, ಪಿಐಒ ಕಾರ್ಡ್‌ನಿಂದ ಐಓಸಿ ಕಾರ್ಡ್‌ಗೆ ಪರಿವರ್ತನೆ, ಬಂಡವಾಳ ಹೂಡಿಕೆಗೆ ಇರುವ ಅಡೆ-ತಡೆ, ನಿಯಮಾವಳಿ ಅಡ್ಡಿ, ಭಾರತದಲ್ಲಿ ವಿದ್ಯಾಭ್ಯಾಸಕ್ಕೆ ಬರುವ ತಮ್ಮ ಮಕ್ಕಳು ಎದುರಿಸುವ ಸಮಸ್ಯೆ, ತಮ್ಮ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಲ್ಲಿನ ಸೇವೆ ಮತ್ತು ಅಗತ್ಯತೆ ಬಗ್ಗೆ ವಿವರಿಸಿದರು.
ಒಟ್ಟಾರೆ ಮೂರು ದಿನಗಳಲ್ಲಿ 14ಕ್ಕೂ ಹೆಚ್ಚು ಗೋಷ್ಠಿಗಳು ನಡೆದವು. ಅನಾರೋಗ್ಯ ಕಾರಣ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಮಾವೇಶಕ್ಕೆ ಗೈರಾದರೂ ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿ.ಕೆ. ಸಿಂಗ್ ಮೂರು ದಿನಗಳ ಕಾಲ ಸಮಾವೇಶದ ಸ್ಥಳದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಹಾಜರಿದ್ದು ಉಸ್ತುವಾರಿ ವಹಿಸಿದ್ದರು.
ಪ್ರವಾಸೋದ್ಯಮ ಮತ್ತು ಬಂಡವಾಳ ಹೂಡಿಕೆಯಲ್ಲಿ ತಮ್ಮ ತಮ್ಮ ರಾಜ್ಯಗಳಲ್ಲಿರುವ ಅವಕಾಶಗಳ ಬಗ್ಗೆ ಐವರು ಮುಖ್ಯಮಂತ್ರಿಗಳು ಸಂವಾದದಲ್ಲಿ ಭಾಗವಹಿಸಿ ಬಂಡವಾಳ ಹೂಡಿಕೆಗೆ ಇರುವ ವಿಪುಲ ಅವಕಾಶ ಮತ್ತು ಸರ್ಕಾರದ ವತಿಯಿಂದ ನೀಡಲಾಗುವ ರಿಯಾಯಿತಿ, ವಿನಾಯಿತಿಗಳ ವಿವರ ನೀಡಿ ಉದ್ಯಮಿಗಳಿಗೆ ಅಹ್ವಾನ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ದಿನ ಹಾಗೂ ಮೂರನೇ ದಿನದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಭಾಗವಹಿಸಿದ್ದರು. ಉಳಿದಂತೆ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಮೂರೂ ದಿನದ ಸಮಾವೇಶದ ಹೊಣೆಗಾರಿಕೆ ನಿಭಾಯಿಸಿದರು. ದೇಶಪಾಂಡೆ, ಪ್ರಿಯಾಂಕ ಖರ್ಗೆ, ಕೃಷ್ಣ ಬೈರೇಗೌಡ ಹೊರತುಪಡಿಸಿದರೆ ರಾಜ್ಯ ಸಚಿವ ಸಂಪುಟದ ಇತರೆ ಯಾವ ಸಚಿವರೂ ಸಮಾವೇಶದತ್ತ ಸುಳಿಯಲೇ ಇಲ್ಲ.
ಸಂತಸ:ಸಮಾವೇಶ ಕುರಿತು ಅಂತಿಮ ದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ವಿ.ಕೆ.ಸಿಂಗ್, ಮೂರು ದಿನಗಳ ಸಮಾವೇಶ ಯಶಸ್ವಿಯಾಗಿದೆ. ಅನಿವಾಸಿ ಭಾರತೀಯ ಸಮುದಾಯದಲ್ಲಿ ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಸಮಾವೇಶದ ಅತಿಥ್ಯ ವಹಿಸಿದ ಕರ್ನಾಟಕ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. ವಿಶ್ವದೆಲ್ಲೆಡೆ 3.17 ಕೋಟಿ ಭಾರತೀಯರು ನೆಲೆಸಿದ್ದು, ಆ ಪೈಕಿ 1.78 ಕೋಟಿ ಮಂದಿ ಅನಿವಾಸಿ ಭಾರತೀಯರಾಗಿದ್ದಾರೆ. ಈ ಬಾರಿಯ ಪ್ರವಾಸಿ ಭಾರತೀಯ ದಿವಸ ಸಮಾವೇಶಕ್ಕೆ 2 ಸಾವಿರ ಅನಿವಾಸಿ ಭಾರತೀಯರು ಸೇರಿ 7000 ಪ್ರತಿನಿಧಿಗಳು ಆಗಮಿಸಿದ್ದರು. 72 ರಾಷ್ಟ್ರಗಳು ಹಾಗೂ 24 ರಾಜ್ಯಗಳಿಂದ ಪ್ರತಿನಿಧಿಗಳು ಭಾಗಿಯಾಗಿದ್ದರು. ಇದೊಂದು ಯಶಸ್ವಿ ಸಮ್ಮೇಳನವಾಗಿದೆ ಎಂದು ತಿಳಿಸಿದರು.