ಕೊಲ್ಲಂ: ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಗೆ ಹಣ ಸಂಗ್ರಹಿಸಲು ತರಕಾರಿ ವ್ಯಾಪಾರಿಯ ಬಳಿ ಕಾರ್ಯಕರ್ತರು ಗೂಂಡಾಗಿರಿ ತೋರಿದ ವಿಡಿಯೋ ವೈರಲ್ ಆಗಿದೆ. ಕೇರಳದ ಕೊಲ್ಲಂನಲ್ಲಿ ಈ ಘಟನೆ ನಡೆದಿದ್ದು, ದೇಣಿಗೆ ನೀಡದ ವ್ಯಾಪಾರಿಯ ಅಂಗಡಿಯನ್ನು ಅವರು ದೋಚಿದ್ದಾರೆ. ಕಾಂಗ್ರೆಸ್ ಪಕ್ಷವು ಈ ಘಟನೆಯನ್ನು ಖಂಡಿಸಿದ್ದು, ಕಾರ್ಯಕರ್ತರನ್ನು ಪಕ್ಷದಿಂದ ಅಮಾನತು ಮಾಡಿದೆ.
“ಅವರು ನಮ್ಮ ಸಿದ್ಧಾಂತವನ್ನು ಪ್ರತಿನಿಧಿಸುವುದಿಲ್ಲ. ಅಂತಹ ನಡವಳಿಕೆಯು ಕ್ಷಮಿಸಲಾಗದು” ಎಂದು ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ. ಸುಧಾಕರನ್ ಟ್ವೀಟ್ ಮಾಡಿದ್ದಾರೆ.
ಭಾರತ್ ಜೋಡೊ ಯಾತ್ರೆಯ ಪೋಸ್ಟರ್ ಹಿಡಿದುಕೊಂಡಿರುವ ಜನರ ಗುಂಪೊಂದು ತರಕಾರಿ ವ್ಯಾಪಾರಿಯ ಬಳಿ ಹೋಗಿ ಗಲಾಟೆ ಮಾಡಿದೆ. ಅಲ್ಲದೆ ಆತನ ಅಂಗಡಿಯಲ್ಲಿದ್ದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದು, ಅಲ್ಲದ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ.
ಅವರಲ್ಲಿ ಒಬ್ಬರು ತರಕಾರಿಗಳನ್ನು ಎಸೆದು ಅಂಗಡಿಯಲ್ಲಿ ಗಲಾಟೆ ಸೃಷ್ಟಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಹಣ ಕೇಳುತ್ತಿದ್ದ ಕಾರ್ಯಕರ್ತರು ತರಕಾರಿ ವ್ಯಾಪಾರಿಯ ಬಳಿ 2,000 ರೂ. ಬೇಡಿಕೆ ಇಟ್ಟಿದ್ದರು ಎಂದು ವರದಿಯಾಗಿದೆ. ಆದರೆ ಆತ 500 ರೂ ನೀಡಿದ್ದಾನೆ. ನಾವು ಕೇಳಿದಷ್ಟು ಹಣ ನೀಡದಿದ್ದರೆ ಬದುಕಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದರು.
ಇದನ್ನೂ ಓದಿ:ರಾತ್ರಿ ವೇಳೆ ಶಂಕಾಸ್ಪದ ವ್ಯಕ್ತಿಗಳ ಬೆರಳಚ್ಚು ಸಂಗ್ರಹ ಕಾರ್ಯಾಚರಣೆ
ಐವರ ಗುಂಪಿನಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್ ಅನೀಶ್ ಖಾನ್ ಸೇರಿದಂತೆ ಐವರಿದ್ದರು. ಅಂಗಡಿ ಮಾಲೀಕ ಎಸ್ ಫವಾಝ್ ಅವರು ಕುನ್ನಿಕೋಡ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಂಗ್ರೆಸ್ ನ ಮಹತ್ವದ 150 ದಿನಗಳ ಭಾರತ್ ಜೋಡೊ ಯಾತ್ರೆ ಇದಿಗ ಎಂಟು ದಿನಗಳನ್ನು ನಡೆಸಿದೆ. ಸೆ.7ರಂದು ಯಾತ್ರೆ ಕನ್ಯಾಕುಮಾರಿಯಲ್ಲಿ ಆರಂಭವಾಗಿದ್ದು, ಕೇರಳದಲ್ಲಿ ಮುಂದಿನ 18 ದಿನಗಳ ಕಾಲ ಸಂಚರಿಸಲಿದೆ.