ಬೆಂಗಳೂರು: ಕೊರೊನಾ ನಿಯಂತ್ರಿಸಲು ಸರ್ಕಾರಗಳು ಕಸರತ್ತು ನಡೆಸುತ್ತಿರುವಂತೆಯೇ, ಕೊರೊನಾಗೆ ಪರಿಣಾಮಕಾರಿ ಔಷಧಿಯಾದ “ರೆಮ್ ಡೆಸಿವಿಯರ್’ ಚುಚ್ಚು ಮದ್ದಿನ ಅಭಾವ ಸೃಷ್ಟಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಕಳೆದೆರಡು ದಿನಗಳಿಂದ ಚುಚ್ಚುಮದ್ದಿನ ಅಭಾವ ಸೃಷ್ಟಿಸಲು ಮುಂದಾಗಿರುವವರಿಗೆ ಪೊಲೀಸರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಜತೆಗೆ, ಚುಚ್ಚಮದ್ದನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು, ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವ ಔಷಧಿ ಅಂಗಡಿ ಮಾಲೀಕರ ವಿರುದ್ಧ ರಾಜ್ಯ ಪೊಲೀಸ್ ಇಲಾಖೆಗೆ ಕಾನೂನು ಕ್ರಮಕ್ಕೆ ಮುಂದಾಗಿದೆ.
ಸುದ್ದಗುಂಟೆಪಾಳ್ಯದ ಗುರುಶ್ರೀ ಮೆಡಿಕಲ್ ಸ್ಟೋರ್ ಮಾಲೀಕ ರಾಜೇಶ್ ಮತ್ತು ಸಾಕೀಬ್ ಹಾಗೂ ಸೊಹೈಲ್ ಬಂಧಿತರು. ಆರೋಪಿಗಳಿಂದ 11 ರೆಮಿಡಿಸಿವಿಯರ್ ಚುಚ್ಚುಮದ್ದು ವಶಕ್ಕೆ ಪಡೆಯಲಾಗಿದೆ. ಇವರಿಗೆ ಯಾವ ಸಗಟು ವ್ಯಾಪಾರಿ ಚುಚ್ಚು ಮದ್ದು ಪೂರೈಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.
ಇದನ್ನೂ ಓದಿ :ಅಸ್ಸಾಂ ಮಾಜಿ ಮುಖ್ಯಮಂತ್ರಿ ಭೂಮಿಧರ್ ಬರ್ಮನ್ ನಿಧನ
ಡಿಜಿಪಿ ಸೂಚನೆ ಮೇರೆಗೆ ಕಾರ್ಯಾಚರಣೆಗಿಳಿದ ಸಿಸಿಬಿ ಪೊಲೀಸರು, ಗುರುಶ್ರೀ ಮೆಡಿಕಲ್ ಶಾಪ್‌ನಲ್ಲಿ ಹೆಚ್ಚಿನ ಬೆಲೆಗೆ ಚುಚ್ಚು ಮದ್ದು ಮಾರಾಟ ಮಾಡುತ್ತಿದ್ದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಬಳಿಕ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ, ಗ್ರಾಹಕರ ಸೋಗಿನಲ್ಲಿ ತೆರಳಿ ರೆಮಿಡಿಸಿವಿಯರ್ ಇಂಜೆಕ್ಷನ್ ಖರೀದಿಗೆ ಹೋದಾಗ ಮುಖ ಬೆಲೆಗಿಂತ ಹೆಚ್ಚಿನ ಹಣ ಕೇಳಿದಾಗ ಆರೋಪಿಗಳನ್ನು ಮಾಲು ಸಮೇತ ಬಂಧಿಸಲಾಗಿದೆ. ಸದ್ಯ 11 ಚುಚ್ಚು ಮದ್ದು ವಶಕ್ಕೆ ಪಡೆಯಲಾಗಿದೆ. ಈವರೆಗೆ ಎಷ್ಟು ಇಂಜೆಕ್ಷನ್‌ಗಳನ್ನು ಮಾರಾಟ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.