ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳು ಮತ್ತು ಉಗ್ರರೊಂದಿಗೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಕ್ಯಾಪ್ಟನ್‌ಗಳು ಸೇರಿದಂತೆ ನಾಲ್ವರು ಸೇನಾ ಸಿಬಂದಿಗಳು ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ಇಬ್ಬರು ಭಯೋತ್ಪಾದಕರು ಕಂಡುಬಂದಿದ್ದು ಆ ಬಳಿಕ ಭೀಕರ ಗುಂಡಿನ ಚಕಮಕಿ ಆರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಡನ್ ಮತ್ತು ಸರ್ಚ್ ಕಾರ್ಯಾಚರಣೆಯ ನಂತರ ಧರ್ಮಸಾಲ್‌ನ ಬಾಜಿಮಾಲ್ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ಸೇನೆಯ ಜಂಟಿ ಪಡೆಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎನ್‌ಕೌಂಟರ್ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್‌ಕೌಂಟರ್‌ನಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
“ಕಾರ್ಯಾಚರಣೆಯ ಕಾರಣದಿಂದಾಗಿ ಜನರನ್ನು ಮನೆಯಲ್ಲಿಯೇ ಇರಲು ಮತ್ತು ಹೊರಗೆ ಹೋಗದಂತೆ ಸೂಚನೆ ನೀಡಲಾಗಿತ್ತು. ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲೇ ಉಳಿದಿದ್ದರು. ಗ್ರಾಮಕ್ಕೆ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ.
ಬಾಜಿಮಾಲ್‌ನ ಎನ್‌ಕೌಂಟರ್ ಸ್ಥಳದಲ್ಲಿರುವ ಇಬ್ಬರು ಭಯೋತ್ಪಾದಕರು ವಿದೇಶಿ ಪ್ರಜೆಗಳೆಂದು ತೋರುತ್ತಿದ್ದು, ಭಾನುವಾರದಿಂದ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.