Advertisement

3.97 ಲ.ಕೋ.ರೂ. ಸಾಲ ವಿತರಣೆ ಗುರಿ- ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 1.85 ಲಕ್ಷ ಕೋಟಿ ರೂ.

11:58 PM Jan 30, 2024 | Team Udayavani |

ಬೆಂಗಳೂರು: ರಾಜ್ಯದ ವಿವಿಧ ಬ್ಯಾಂಕ್‌ಗಳ ಮೂಲಕ 2024-25ನೇ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) 3.97 ಲಕ್ಷ ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಿದ್ದು, ಈ ಪೈಕಿ ಶೇ. 47ರಷ್ಟು ಕೃಷಿ ವಲಯಕ್ಕೆ ನಿಗದಿಪಡಿಸಿದೆ.

Advertisement

ಕಳೆದ ವರ್ಷ 3.58 ಲಕ್ಷ ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಲಾಗಿತ್ತು. ಇದಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಶೇ. 11ರಷ್ಟು ಏರಿಕೆಯಾಗಿದೆ. ಒಟ್ಟಾರೆ 3.97 ಲಕ್ಷ ಕೋಟಿ ಮೊತ್ತದಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗಾಗಿ 1.85 ಲಕ್ಷ ಕೋಟಿ ನಿಗದಿಪಡಿಸಲಾಗಿದ್ದು, ಬೆಳೆ ಸಾಲಕ್ಕಾಗಿಯೇ 1.10 ಲಕ್ಷ ಕೋಟಿ ಮೀಸಲಿಡಲಾಗಿದೆ. ಈ ವರ್ಷ ಭೀಕರ ಬರಗಾಲದಿಂದ ತತ್ತರಿಸಿರುವ ರೈತರಿಗೆ ಇದು ಅನುಕೂಲ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

ರಾಜ್ಯದಲ್ಲಿ ಇದುವರೆಗಿನ 3ನೇ ಅತೀ ಕಡಿಮೆ ಮಳೆ ದಾಖಲಾಗಿದ್ದು, 42 ಲಕ್ಷ ಹೆಕ್ಟೇರ್‌ ಬೆಳೆಹಾನಿಯಾಗಿದೆ. ಇದರಿಂದ ರೈತರಿಗೆ 32 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಇದೆಲ್ಲವನ್ನೂ ಪರಿಗಣಿಸಿ ಸಾಲ ವಿತರಣೆಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲೆಗಳ ಸಮಗ್ರ ಮಾಹಿತಿ ಸಂಗ್ರಹಿಸಿ, ಅಧ್ಯಯನ ನಡೆಸಿ ಸಾಲದ ಪ್ರಮಾಣ ನಿಗದಿಪಡಿಸಲಾಗಿದೆ ಎಂದು ನಬಾರ್ಡ್‌ ಮುಖ್ಯ ಪ್ರಧಾನ ವ್ಯವಸ್ಥಾಪಕ (ಸಿಜಿಎಂ) ಟಿ. ರಮೇಶ್‌ ತಿಳಿಸಿದ್ದಾರೆ.

ಸರಕಾರಕ್ಕೆ ನೆರವು
ನಬಾರ್ಡ್‌ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಸ್ಟೇಟ್‌ ಫೋಕಸ್‌ ಪೇಪರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರಕಾರದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಬಾರ್ಡ್‌ ಕಾರ್ಯನಿರ್ವಹಿಸುತ್ತಿದೆ. ಕಳೆದ 20 ವರ್ಷಗಳಲ್ಲಿ ರಾಜ್ಯದ 119 ನೀರಾವರಿ ಯೋಜನೆಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೈಜೋಡಿಸಲಾಗಿದ್ದು, ಸಾವಿರ ಕೋಟಿ ರೂ. ನೆರವು ನೀಡಲಾಗಿದೆ. ಅಷ್ಟೇ ಅಲ್ಲ, ಗ್ರಾಮೀಣ ಭಾಗದ ರಸ್ತೆ, ಸೇತುವೆ ಮತ್ತಿತರ ಮೂಲಸೌಲಭ್ಯಗಳ ಅಭಿವೃದ್ಧಿಗೂ ನೆರವು ನೀಡಲಾಗಿದೆ ಎಂದರು.

ಸಮಗ್ರ ಕೃಷಿ ರೈತರಿಗೂ ಸಿಗಲಿ ಸಾಲ
ಫೋಕಸ್‌ ಪೇಪರ್‌ ಬಿಡುಗಡೆಗೊಳಿಸಿ ಮಾತನಾಡಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌, ನಬಾರ್ಡ್‌ ಮತ್ತು ಬ್ಯಾಂಕ್‌ಗಳು ನೀಡುವ ಕೃಷಿ ಸಾಲಗಳು ಬರೀ ಅಡಿಕೆ, ಬಾಳೆ ಮತ್ತಿತರ ಬೆಳೆಗಳಿಗೆ ಸೀಮಿತವಾಗುವುದು ಸರಿ ಅಲ್ಲ. ಸಮಗ್ರ ಕೃಷಿ ಮಾಡುವ ರೈತರಿಗೂ ಆದ್ಯತೆ ನೀಡಬೇಕು. ಇದಕ್ಕಾಗಿ ಸಮಗ್ರ ಕೃಷಿ ಸಾಲ ಯೋಜನೆ ರೂಪಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

Advertisement

ಆರ್‌ಬಿಐ ಸಿಜಿಎಂ ಪಿ.ಎನ್‌. ರಘುನಾಥ್‌, ಕೆನರಾ ಬ್ಯಾಂಕ್‌ ಕಾರ್ಯನಿರ್ವಹಣ ನಿರ್ದೇಶಕ ಹದೀìಪ್‌ಸಿಂಗ್‌ ಅಹ್ಲುವಾಲಿಯಾ, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಸಿಜಿಎಂ ಕೃಷ್ಣನ್‌ ಶರ್ಮ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next