Advertisement

ನಗರದ ಕೆರೆಗಳ ಅಭಿವೃದ್ಧಿಗೆ 3.65 ಕೋ.ರೂ.: ವೇದವ್ಯಾಸ ಕಾಮತ್‌

10:15 PM Dec 13, 2019 | mahesh |

ಮಹಾನಗರ: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ 8 ಕೆರೆಗಳ ಅಭಿವೃದ್ಧಿಗಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಡಿ 3.65 ಕೋ.ರೂ. ಬಿಡುಗಡೆ ಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

792.42 ಕೋ.ರೂ. ಕುಡಿಯುವ ನೀರು ಯೋಜನೆ
ಪಾಲಿಕೆ ವ್ಯಾಪ್ತಿಯಲ್ಲಿ 792.42 ಕೋ.ರೂ. ವೆಚ್ಚದಲ್ಲಿ 24ಗಿ7 ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಉನ್ನತೀಕರಣಗೊಳಿಸಲು ರಾಜ್ಯ ಸರಕಾರ ಅನುಮೋದನೆ ನೀಡಿದ್ದು ಮುಂದಿನ 30 ವರ್ಷಗಳ ಅಗತ್ಯ ಪರಿಗಣಿಸಿ ಎಡಿಬಿ ನೆರವಿನ 2ನೇ ಹಂತದ “ಜಲಸಿರಿ’ ಯೋಜನೆಯಡಿ ಈ ಕಾಮಗಾರಿ ಅನುಷ್ಠಾನಗೊಳ್ಳಲಿದೆ. ಮೇಲ್ಮಟ್ಟದ ಜಲ ಸಂಗ್ರಹಾಗಾರಗಳ ನಿರ್ಮಾಣ, 2 ಹೆಚ್ಚುವರಿ ವಿವಿಧ ಸಾಮರ್ಥ್ಯಗಳ ನೆಲ ಮಟ್ಟದ ಜಲ ಸಂಗ್ರಹಾಗಾರಗಳ ನಿರ್ಮಾಣ, 8 ಬೂಸ್ಟಿಂಗ್‌ ಪಂಪ್‌ಹೌಸ್‌ಗಳ ನಿರ್ಮಾಣ, ರಾಮಲಕಟ್ಟೆಯಲ್ಲಿ 18 ಎಂಜಿಡಿ ಸಾಮರ್ಥ್ಯದ ಶುದ್ಧೀಕರಣ ಗಾರದ ಬಳಿ ಹೊಸದಾಗಿ ಶುದ್ಧೀಕರಣ ಘಟಕ, 65 ಕಿ.ಮೀ. ಕೊಳವೆ ಮಾರ್ಗ ಬದಲಾವಣೆ, ಹೊಸ ಕೊಳವೆಗಳ ಅಳವ ಡಿಕೆ, ವಿತರಣ ಜಾಲದ ಅಳವಡಿಕೆ, ಪ್ರತಿ ಮನೆಗೆ ಹೊಸದಾದ ಕ್ಲಾಸ್‌ ಬಿ ಮಲ್ಟಿಜೆಟ್‌ ವಾಟರ್‌ ಮೀಟರ್‌ ಅಳವಡಿಕೆ, ತುಂಬೆಯ ನೀರು ಶುದ್ಧೀಕರಣ ಘಟಕದಿಂದ ಎಲ್ಲ ಜಲ ಸಂಗ್ರಹಾಗಾರದವರೆಗೆ ಸ್ಕಾಡಾ ತಂತ್ರಜ್ಞಾನ ಅಳವಡಿಕೆ ಮೊದಲಾದವು ಈ ಯೋಜನೆಯಲ್ಲಿ ಒಳಗೊಂಡಿವೆ. ಈಗ ತುಂಬೆಯಿಂದ 160ರಿಂದ 170 ಎಂಎಲ್‌ಡಿ ನೀರು ಪಂಪ್‌ ಆಗುತ್ತಿದೆ. ಆದರೆ ಇದರಲ್ಲಿ 70 ಎಂಎಲ್‌ಡಿಯಷ್ಟು ನೀರು ಸೋರಿಕೆ/ ಅಕ್ರಮ ಬಳಕೆಯಾಗುತ್ತಿದೆ. ಇದರಿಂದ ಪಾಲಿಕೆಗೆ ನಷ್ಟವಾಗುತ್ತಿದೆ. ಹೊಸ ಯೋಜನೆಯಿಂದ ಇಂತಹ ನಷ್ಟ ಕೂಡ ತಪ್ಪಿಸಬಹುದಾಗಿದೆ ಎಂದರು.

ನಗರಕ್ಕೆ ಬೃಹತ್‌ ಮೊತ್ತದ ಕಾಮ ಗಾರಿಗೆ ಅನುಮೋದನೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಸಹಕರಿಸಿದ ಸಂಸದ ನಳಿನ್‌ ಕುಮಾರ್‌ ಕಟೀಲು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಡಾ| ಭರತ್‌ ಶೆಟ್ಟಿ ಅವರಿಗೆ ಶಾಸಕರು ಕೃತಜ್ಞತೆ ಸಲ್ಲಿಸಿದರು.

70 ಲ. ರೂ. ಅಗತ್ಯ
ಕದ್ರಿ ಕೈಬಟ್ಟಲು ಕೆರೆ ಅಭಿವೃದ್ಧಿಗೆ 90 ಲ.ರೂ., ಜೋಗಿಮಠ ಕೆರೆ ಅಭಿವೃದ್ಧಿಗೆ 80 ಲ.ರೂ., ಕುಲಶೇಖರ ಕೆರೆ ಅಭಿವೃದ್ಧಿಗೆ 70 ಲ.ರೂ., ಜಪ್ಪಿನಮೊಗರು ಕಂರ್ಬಿಸ್ಥಾನ ಶ್ರೀ ವೈದ್ಯನಾಥ ದೇವಸ್ಥಾನದ ಕೆರೆ ಅಭಿವೃದ್ಧಿಗೆ 25 ಲ.ರೂ., ಜಲ್ಲಿಗುಡ್ಡ ಕೆರೆ ಅಭಿವೃದ್ಧಿಗೆ 65 ಲ.ರೂ., ಕುದ್ರೋಳಿ ನಡುಪಳ್ಳಿ ಜುಮ್ಮಾ ಮಸೀದಿ ವಠಾರದ ಕೆರೆ ಅಭಿವೃದ್ಧಿಗೆ 25 ಲ.ರೂ., ಬಜಾಲು ಗ್ರಾಮದ ಕುಂದೋಡಿಯಲ್ಲಿರುವ ಕೆರೆ ಅಭಿವೃದ್ಧಿಗೆ 10 ಲ.ರೂ. ಬಿಡುಗಡೆಯಾಗಿದೆ. ಬೈರಾಡಿಕೆರೆ ಅಭಿವೃದ್ಧಿ ಕಾಮಗಾರಿಗೆ 1.30 ಕೋ. ರೂ. ಬಿಡುಗಡೆಯಾಗಿ ಕಾಮಗಾರಿ ಚಾಲನೆಯಲ್ಲಿದ್ದು ಮುಂದೆ ಹೆಚ್ಚುವರಿಯಾಗಿ ಸುಮಾರು 70 ಲ.ರೂ. ಅಗತ್ಯವಿದೆ. ಅದನ್ನು ಒದಗಿಸಿಕೊಡಲಾಗುವುದು. ಗುಜ್ಜರಕೆರೆಯನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ 4 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಅನುಮೋದನೆ ದೊರೆತಿದೆ ಎಂದರು.

ಪಾಲಿಕೆ ಜತೆ 8 ವರ್ಷ ನಿರ್ವಹಣೆ
ಕುಡಿಯುವ ನೀರು ಯೋಜನೆಯಲ್ಲಿ 587.67 ಕೋ.ರೂ. ಕಾಮಗಾರಿಗೆ, 204.75 ಕೋ.ರೂ. ನಿರ್ವಹಣೆ ವೆಚ್ಚಕ್ಕೆ ನಿಗದಿಪಡಿಸಲಾಗಿದೆ. ಕಾಮಗಾರಿ ಗುತ್ತಿಗೆ ಪಡೆದಿರುವ ಸೂಯೆಝ್ ಸಂಸ್ಥೆಯು ಪಾಲಿಕೆ ಜತೆ 8 ವರ್ಷಗಳವರೆಗೆ ನಿರ್ವಹಣೆ ಮಾಡಲಿದೆ. ಅನಂತರ ಮಂಗಳೂರು ಮಹಾನಗರ ಪಾಲಿಕೆಯೇ ನಿರ್ವಹಣೆ ಮಾಡಲಿದೆ. 6 ತಿಂಗಳ ಸಮೀಕ್ಷೆಯ ಅನಂತರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next