Advertisement
ಮೇಯರ್ ಗಂಗಾಂಬಿಕೆ, ಉಪಮೇಯರ್ ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್, ಆಡಳಿತ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳ ಮೂಲಕ ಯಶವಂತಪುರ ಎಪಿಎಂಸಿ ಯಾರ್ಡ್, ಜಯನಗರ ಮಾರುಕಟ್ಟೆ, ಶಿವಾಜಿನಗರ ರಸೆಲ್ ಮಾರುಕಟ್ಟೆ, ಶಾಂತಿನಗರದ ಜಾನ್ಸನ್ ಮಾರುಕಟ್ಟೆ ಮತ್ತು ಆಸ್ಟಿನ್ ಟೌನ್‌ನಲ್ಲಿರುವ ಬಿಡಿಎ ಕಾಂಪ್ಲೆಕ್ಸ್, ವಿಜಯನಗರ ಮಾರುಕಟ್ಟೆ ಹಾಗೂ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ಗಳಿಗೆ ಸೋಮವಾರ ಅನಿರೀಕ್ಷಿತವಾಗಿ ಭೇಟಿ ನೀಡಿ ತಪಾಸಣೆ ನಡೆಸಲಾಯಿತು.
Related Articles
Advertisement
ಪ್ಲಾಸ್ಟಿಕ್ ಕವರ್ ಬದಲು ಬಟ್ಟೆ ಹಾಗೂ ಪೇಪರ್ ಬ್ಯಾಗಗಳನ್ನು ಬಳಸಬೇಕು. ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಮಾಡುವ ಉದ್ದೇಶದಿಂದ ನಗರದೆಲ್ಲೆಡೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಪಾಲಿಕೆ ಆರೋಗ್ಯಾಧಿಕಾರಿಗಳು ಇದೇ ರೀತಿ ಒಂದು ವಾರಗಳ ಕಾಲ ಎಲ್ಲ 198 ವಾರ್ಡ್‌ಗಳ ಪ್ರಮುಖ ಸ್ಥಳಗಳಲ್ಲಿ ದಾಳಿ ನಡೆಸಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸುವ ಜೊತೆಗೆ ಕಂಡುಬರುವ ಪ್ಲಾಸ್ಟಿಕ್ ಜಪ್ತಿ ಮಾಡಲಿದ್ದಾರೆ.
ಒಂದು ವಾರದ ಬಳಿಕವೂ ಪ್ಲಾಸ್ಟಿಕ್ ಬಳಕೆ ಮಾಡಿದರೆ ಪ್ಲಾಸ್ಟಿಕ್ ಜಪ್ತಿ ಮಾಡುವುದರ ಜೊತೆಗೆ ದಂಡ ವಿಧಿಸಲಾಗುವುದು. ದಂಡವಿಧಿಸಿದ ನಂತರವೂ ಪ್ಲಾಸ್ಟಿಕ್ ಬಳಕೆ ಮುಂದುವರಿದಲ್ಲಿ ಮಳಿಗೆಗಳ ಪರವಾನಗಿ ರದ್ದುಗೊಳಿಸಿ ಬೀಗ ಮುದ್ರೆ ಜಡಿಯಲಾಗುವುದು’ ಎಂದು ಎಚ್ಚರಿಕೆ ನೀಡಿದರು.
“ಸೋಮವಾರ ಒಟ್ಟು ಐದು ತಂಡವಾಗಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಗಳವಾರದಿಂದ ವಲಯಕ್ಕೆ ಎರಡು ತಂಡಗಳಂತೆ 16 ತಂಡಗಳು ಕಾರ್ಯಾಚರಣೆ ನಡೆಸಲಿವೆ’ ಎಂದು ಪಾಲಿಕೆ ಆರೋಗ್ಯಾಧಿಕಾರಿ ಮನೋರಂಜನ್ ಹೆಗ್ಡೆ ಹೇಳಿದ್ದಾರೆ.
ದಾಳಿ ಮಾಹಿತಿ ನೀಡಿದ ಅಧಿಕಾರಿ ವಿರುದ್ಧ ಕ್ರಮ: ನಗರದ ವಿವಿಧೆಡೆ ಪ್ಲಾಸ್ಟಿಕ್ ಬಳಸುವ ವ್ಯಾಪಾರಿಗಳ ಮೇಲೆ ದಾಳಿ ಮಾಡುವ ವಿಚಾರವನ್ನು ಅತ್ಯಂತ ಗೌಪ್ಯವಾಗಿ ಇರಿಸಲಾಗಿತ್ತು. ಆದರೆ, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ನಲ್ಲಿ ವ್ಯಾಪಾರಿಗಳ ಬಳಿ ಮೇಯರ್ “ಪ್ಲಾಸ್ಟಿಕ್ ಕೈಚೀಲ ಕೊಡಿ’ ಎಂದು ಕೇಳಿದರು. ಆದರೆ, ಯಾರ ಬಳಿಯೂ ಪ್ಲಾಸ್ಟಿಕ್ ಚೀಲ ಇರಲಿಲ್ಲ. ಇದನ್ನು ಗಮನಿಸಿದ ಮೇಯರ್, ಅನಿರೀಕ್ಷಿತ ದಾಳಿಯ ಬಗ್ಗೆ ವರ್ತಕರಿಗೆ ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಗರಂ ಆದರು.
“ಭಾನುವಾರ ನಾನು ಇಲ್ಲಿಗೆ ಭೇಟಿ ನೀಡಿದಾಗ ಪ್ಲಾಸ್ಟಿಕ್ ಕವರ್‌ಗಳನ್ನು ಬಳಸಲಾಗುತ್ತಿತ್ತು. ಆದರೆ, ಇಂದು ಒಂದು ಅಂಗಡಿಯಲ್ಲಿ ಕೂಡಾ ಪ್ಲಾಸ್ಟಿಕ್ ಸಿಗುತ್ತಿಲ್ಲ. ಇಲ್ಲಿನ ಆರೋಗ್ಯಾಧಿಕಾರಿಗಳು ನಾವು ಬರುವ ಬಗ್ಗೆ ಮೊದಲೇ ಮಾಹಿತಿ ನೀಡಿದ್ದಾರೆ. ಹೀಗಾಗಿ, ಪ್ಲಾಸ್ಟಿಕ್ ಬಳಕೆ ಮಾಡುತ್ತಿಲ್ಲ. ಸಂಬಂಧಪಟ್ಟ ಆರೋಗ್ಯಾಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಿ’ ಎಂದು ವಿಶೇಷ ಆಯುಕ್ತ ರಂದೀಪ್ ಅವರಿಗೆ ಮೇಯರ್ ಸೂಚನೆ ನೀಡಿದರು.
ಶುಕ್ರವಾರ ಸಭೆ: ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್ ವಿತರಕರು, ಪ್ಯಾಕರ್ಸ್ ಹಾಗೂ ಸಗಟು ವ್ಯಾಪಾರಿಗಳ ಜೊತೆ ಶುಕ್ರವಾರ(ಜು.19)ರಂದು ಟೌನ್ ಹಾಲ್‌ನಲ್ಲಿ ಸಭೆನಡೆಸಿ, ಪ್ಲಾಸ್ಟಿಕ್ ಬಳಕೆ ಮಾಡದಂತೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.
ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿರುವ ಬಗ್ಗೆ ಅಂಗಡಿ ಮಾಲೀಕರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸೋಮವಾರ ಪೂಜ್ಯ ಮಹಾಪೌರರ ಅಧ್ಯಕ್ಷತೆಯಲ್ಲಿ ನಗರದ ಪ್ರಮುಖ ಮಾರುಕಟ್ಟೆ ಹಾಗೂ ಕಾಂಪ್ಲೆಕ್ಸ್‌ಗಳಿಗೆ ಅನಿರೀಕ್ಷಿತ ಭೇಟಿ ತಪಾಸಣೆ ನಡೆಸಲಾಯಿತು.
ಪೊಲೀಸ್ ಭದ್ರತೆಯಲ್ಲಿ ದಾಳಿ: ಜಯನಗರ ಮಾರುಕಟ್ಟೆಗೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳ ತಂಡ ಅನಿರೀಕ್ಷಿತ ದಾಳಿ ನಡೆಸಿ ವ್ಯಾಪಾರಿ ಮಳಿಗೆಗಳನ್ನು ತಪಾಸಣೆ ನಡೆಸಿದ ವೇಳೆ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ವಶಕ್ಕೆ ಪಡೆದ ಅಧಿಕಾರಿಗಳು ಅಂಗಡಿ ಮಾಲೀಕರಿಗೆ ದಂಡ ವಿಧಿಸಿ ನೋಟಿಸ್ ಜಾರಿದ್ದಕ್ಕೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದರು. ಇದು ಅಧಿಕಾರಿಗಳು ಮತ್ತು ವ್ಯಾಪಾರಿಗಳ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು. ಇದಾದ ನಂತರ ಪೊಲೀಸ್ ಭದ್ರತೆಯಲ್ಲಿ ತಪಾಸಣೆ ಮುಂದುವರಿಸಲಾಗಿದೆ.
ಪ್ಲಾಸ್ಟಿಕ್ ದಾಳಿ ನಡೆಸಿದ ವಿವರಸ್ಥಳ ಅಂಗಡಿಗಳ ಸಂಖ್ಯೆ ನೋಟಿಸ್ ಜಾರಿ ಪ್ಲಾಸ್ಟಿಕ್ ಜಪ್ತಿ(ಕೆ.ಜಿಗಳಲ್ಲಿ) ದಂಡ(ಲಕ್ಷರೂ. ಗಳಲ್ಲಿ)
ಜಯನಗರ ಮಾರುಕಟ್ಟೆ 200 48 250 1,70,000
ಯಶವಂತಪುರ ಎಪಿಎಂಸಿ ಯಾರ್ಡ್ 40 20 150 75,000
ಶಿವಾಜಿನಗರ ರಸೆಲ್ ಮಾರುಕಟ್ಟೆ 150 06 100 25,000
ಶಾಂತಿ ನಗರ (ಜಾನ್ಸನ್ ಮಾರುಕಟ್ಟೆ, ಆಸ್ಟಿನ್ ಟೌನ್, ಬಿಡಿಎ ಕಾಂಪ್ಲೆಕ್ಸ್) 50 06 70 20,000
ವಿಜಯನಗರ ಮಾರುಕಟ್ಟೆ 20 01 20 5,000
ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ 15 00 10 00
ಒಟ್ಟು 475 81 600 3,05,000