Advertisement

3-5 ಕಿಮೀ ವ್ಯಾಪ್ತಿಗೊಂದು ಪೊಲೀಸ್‌ ಠಾಣೆ

12:31 PM Feb 28, 2017 | Team Udayavani |

ಬೆಂಗಳೂರು: ಜನರ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪ್ರತಿ 3 ರಿಂದ 5 ಕಿ.ಮೀ. ವ್ಯಾಪ್ತಿಯೊಳಗೆ ಹೊಸ ಪೊಲೀಸ್‌ ಠಾಣೆಗಳನ್ನು ತೆರಯಲಾಗುತ್ತದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಹೇಳಿದ್ದಾರೆ. 

Advertisement

ನಗರದ ಗುರಪ್ಪನಪಾಳ್ಯದಲ್ಲಿ ನೂತನ ಪೊಲೀಸ್‌ ಠಾಣೆ ಉದ್ಘಾಟಿಸಿ ಮಾತನಾಡಿದ ಅವರು, “ಈ ಮೊದಲು 10 ರಿಂದ 15 ಕಿ.ಮೀ. ವ್ಯಾಪ್ತಿಯಲ್ಲಿ ಒಂದು ಪೊಲೀಸ್‌ ಠಾಣೆ ಇತ್ತು. ಇದರಿಂದ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಳೆದ ಒಂದು ವರ್ಷದಿಂದ ಠಾಣೆಗಳ ಪುನರ್‌ ವಿಂಗಡಣೆ ನಡೆಯುತ್ತಿದೆ. ಈಗಾಗಲೇ 8 ಹೊಸ ಪೊಲೀಸ್‌ ಠಾಣೆಗಳು, ಒಂದು ಹೆಚ್ಚುವರಿ ಉಪವಲಯವನ್ನು ಸ್ಥಾಪಿಸಲಾಗಿದೆ,” ಎಂದರು. 

“ಪ್ರತಿ ಠಾಣೆಯಲ್ಲಿ 300ರಿಂದ 400 ಪ್ರಕರಣಗಳಿದ್ದು, ಅದಕ್ಕಿಂತ ಹೆಚ್ಚುಪ್ರಕರಣಗಳು ದಾಖಲಾದರೆ ಅಂತಹ ಠಾಣೆಗಳನ್ನು ವಿಭಜಿಸಲಾಗುತ್ತಿದೆ. ಅಗತ್ಯಕ್ಕೆ ಅನುಗುಣವಾಗಿ ಮಾನವ ಸಂಪನ್ಮೂಲವನ್ನು ಒದಗಿಸಲಾಗುತ್ತಿದೆ. ಈಗಾಗಲೇ 12 ಸಾವಿರ ಪೊಲೀಸರನ್ನು ನೇಮಿಸಲಾಗಿದ್ದು, ಪ್ರತಿ ವರ್ಷ 4ರಿಂದ 5ಸಾವಿರ ಸಿಬ್ಬಂದಿ ನೇಮಿಸಲು ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಪೊಲೀಸ್‌ ಠಾಣೆಗಳಲ್ಲೂ ಸಿಬ್ಬಂದಿಯ ಕೊರತೆ ಇಲ್ಲದಂತೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ನಗರದ ಆಗ್ನೇಯ ವಿಭಾಗದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ನೂತನ ಬಂಡೇಪಾಳ್ಯ ಪೊಲೀಸ್‌ ಠಾಣೆ, ಬೇಗೂರು ಪೊಲೀಸ್‌ ಠಾಣೆ ಹಾಗೂ ಗುರಪ್ಪನಪಾಳ್ಯ ಪಾಳ್ಯ ಪೊಲೀಸ್‌ ಠಾಣೆಗಳನ್ನು ಉದ್ಘಾಟಿಸಿದರು. ಈ ವೇಳೆ ಸಚಿವ ರಾಮಲಿಂಗಾರೆಡ್ಡಿ, ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌, ಆಗ್ನೇಯ ಡಿಸಿಪಿ ಬೋರಲಿಂಗಯ್ಯ ಇತರರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next