ಬೆಂಗಳೂರು: ಮಾವನ ಲಕ್ಷಾಂತರ ರೂ. ಸಾಲ ತೀರಿಸಲು ಹಾಗೂ ತನ್ನ ವೈಯಕ್ತಿಕ ಜೀವನಕ್ಕಾಗಿ ಸಹೋದ್ಯೋಗಿ ಜತೆ ಸೇರಿ ವೃದ್ಧೆಗೆ ಕೋಟ್ಯಂತರ ರೂ. ವಂಚಿಸಿದ್ದ ರಾಷ್ಟ್ರೀಕೃತ ಬ್ಯಾಂಕ್‌ನ ಮಾಜಿ-ಹಾಲಿ ಉದ್ಯೋಗಿಗಳು ಸೇರಿ ನಾಲ್ವರು ಬನಶಂಕರಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಂಧಿತರು: ಬನಶಂಕರಿ ನಿವಾಸಿಗಳಾದ ಅಪೂರ್ವಯಾದವ್, ಆಕೆಯ ತಾಯಿ ವಿಶಾಲಾ, ಅಪೂರ್ವ ಸ್ನೇಹಿತೆ ಅರುಂಧತಿ ಹಾಗೂ ಈಕೆಯ ಪತಿ ರಾಕೇಶ್ ಬಂಧಿತರು.
ಆರೋಪಿಗಳು ಬನಶಂಕರಿಯ 3ನೇ ಹಂತದ ಪಿ.ಎನ್.ಶಾಂತಾ(65)ರಿಗೆ 3.50 ಕೋಟಿ ರೂ. ವಂಚಿಸಿದ್ದ ಸಂಬಂಧ ಆರೋಪಿಗಳನ್ನು ಬಂಧಿಸ ಲಾಗಿದೆ. ಪ್ರಕರಣದಲ್ಲಿ ಅಪೂರ್ವ ಮಾವ ಸಂಜೀವಪ್ಪ ಮತ್ತು ಅರುಂಧತಿ ತಾಯಿ ಪರಿ ಮಳಾ ನಾಪತ್ತೆಯಾಗಿದ್ದು, ಶೋಧ ನಡೆಯುತ್ತಿದೆ. ಈ ಪೈಕಿ ಸಂಜೀವಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ ಎಂದು ಪೊಲೀಸರು ಹೇಳಿದರು.
ವಾಸ್ತುದೋಷ: ಶಾಂತಾ ತನ್ನ ಮಗಳ ಜತೆ ಬನಶಂಕರಿಯಲ್ಲಿ ವಾಸವಾಗಿದ್ದು, ನಗರದ 3-4 ಬ್ಯಾಂಕ್ ಖಾತೆ ಹೊಂದಿದ್ದಾರೆ. ಜತೆಗೆ ಬ್ಯಾಂಕ್‌ವೊಂದರಲ್ಲಿ 1.90 ಕೋಟಿ ರೂ. ಮೌಲ್ಯದ 2 ಎಫ್ಡಿ ಖಾತೆ ಇದೆ. ಈ ಮಧ್ಯೆ ಶಾಂತಾ ಖಾತೆ ಹೊಂದಿರುವ ಬ್ಯಾಂಕ್‌ನಲ್ಲಿ ಅಪೂರ್ವ ಮತ್ತು ಅರುಂಧತಿ ಕೆಲಸ ಮಾಡು ತ್ತಿದ್ದು, ಆಗ ಶಾಂತಾರ ಪರಿಚಯವಾಗಿದೆ. ಈ ವೇಳೆ ಆರೋಪಿಗಳು ವಿಮೆಯ ಸೋಗಿನಲ್ಲಿ ದೂರುದಾರರ ಮನೆಗೆ ಹೋಗುತ್ತಿದ್ದರು.
ಆಗ ಅವರ ಬಳಿ ಕೋಟ್ಯಂತರ ರೂ. ಇರುವ ಮಾಹಿತಿ ಪಡೆದು, ಮನೆ ಮಾರಾಟಕ್ಕೆ ಸಂಚು ರೂಪಿಸಿದ್ದರು. ಬಳಿಕ ಈ ಮನೆಯಲ್ಲಿ ವಾಸ್ತು ದೋಷ ಇದೆ. ಮಾರಾಟ ಮಾಡಿ ಎಂದು ಮಧ್ಯವರ್ತಿಯನ್ನು ಕರೆಸಿ ಮಾರಾಟ ಮಾಡಿ ಸಿದ್ದು, 2.5 ಕೋಟಿ ರೂ. ಶಾಂತಾ ಖಾತೆಗೆ ಜಮೆಯಾಗಿತ್ತು. ಅದನ್ನು ತಿಳಿದ ಆರೋಪಿಗಳು ಶಾಂತಾರ ಮನೆಗೆ ಬಂದು ವಿಮೆ ಮಾಡಿಸುವುದಾಗಿ 5-6 ಖಾಲಿ ಚೆಕ್‌ಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ. ಆ ಚೆಕ್‌ಗೆ ತಮ್ಮ ಹೆಸರು ಬರೆದುಕೊಂಡು ಡ್ರಾ ಮಾಡಿದ್ದರು. ಅಲ್ಲದೆ, ಪತಿಯ ಷೇರು ಹಣ ಪಡೆಯಲು ಎಫ್ಡಿ ಖಾತೆ ಕ್ಲೋಸ್ ಮಾಡಿಸಬೇಕು ಎಂದು 1.90 ಕೋಟಿ ರೂ. ಮೌಲ್ಯದ 2ಎಫ್ಡಿ ಖಾತೆ ಕ್ಲೋಸ್ ಮಾಡಿಸಿ, ಈ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.
ಸಂಬಂಧಿಕರಿಗೆ ವರ್ಗಾವಣೆ: ಆರೋಪಿ ಅಪೂರ್ವ ಯಾದವ್ 3.5 ಕೋಟಿ ರೂ. ಅನ್ನು ತನ್ನ ತಾಯಿ ವಿಶಾಲಾ ಖಾತೆಗೆ ವರ್ಗಾವಣೆ ಮಾಡಿದ್ದಳು. ಬಳಿಕ ಅರುಂಧತಿ, ಅಪೂರ್ವ ತಲಾ 1.75 ಕೋಟಿ ರೂ. ಹಂಚಿಕೊಂಡಿದ್ದರು. ಅಪೂರ್ವ ಮಾವ ಸಂಜೀವಪ್ಪ ಶಿವಮೊಗ್ಗದಲ್ಲಿ ರೆಸಾರ್ಟ್ ಮಾಡಿದ್ದು ಬ್ಯಾಂಕ್‌ನಲ್ಲಿ ಮಾಡಿದ್ದ ಸಾಲ ತೀರಿಸಲು ತನ್ನ ಮಾವನ ಖಾತೆಗೆ 45 ಲಕ್ಷ ರೂ. ಹಾಕಿದ್ದಳು. ನಂತರ, ತನ್ನ ಮಾಜಿ ಪ್ರಿಯಕರನ ಖಾತೆಗೂ 2 ಲಕ್ಷ ರೂ. ವರ್ಗಾವಣೆ ಮಾಡಿದ್ದಾಳೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಎಸ್‌ಎಂಎಸ್ ಬ್ಲಾಕ್ ಮಾಡಿದ್ದರು! ಇನ್ನು ಶಾಂತಾರ ಬ್ಯಾಂಕ್ ವ್ಯವಹಾರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದ ಅರುಂಧತಿ ಮತ್ತು ಅಪೂರ್ವ, ಶಾಂತಾರ ಮೊಬೈಲ್‌ಗೆ ಬ್ಯಾಂಕ್‌ನ ಯಾವುದೇ ಎಸ್‌ಎಂಎಸ್ ಬಾರದಂತೆ ಎಚ್ಚರ ವಹಿಸಿದ್ದರು. ಕೆಲವೊಮ್ಮೆ ಮನೆಗೆ ಬಂದಾಗ ಶಾಂತಾರ ಮೊಬೈಲ್‌ನಲ್ಲಿದ್ದ ಸಂದೇಶ ಡಿಲೀಟ್ ಮಾಡುತ್ತಿದ್ದರು. ಹೀಗಾಗಿ ಆರೋಪಿಗಳು ತಮ್ಮ ಸಂಬಂಧಿಕರಿಗೆ ವರ್ಗಾವಣೆ ಮಾಡಿರುವ ಹಣ ಹಿಂಪಡೆಯುವಂತೆ ಬ್ಯಾಂಕ್‌ನ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.