Advertisement

3.31 ಕೋಟಿ ರೂ. ಗ್ರಂಥಾಲಯ ಕರ ಬಾಕಿ

05:15 PM Jul 19, 2019 | Team Udayavani |

ಕೋಲಾರ: ಸ್ಥಳೀಯ ಸಂಸ್ಥೆಗಳು ಗ್ರಂಥಾಲಯ ಕರವನ್ನು ಕಾಲಕಾಲಕ್ಕೆ ಪಾವತಿಸಬೇಕೆಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸೂಚಿಸಿದರು.

Advertisement

ನಗರದ ಡೀಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ 63 ನೇ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಕಾರ್ಯಸೂಚಿ ಕುರಿತಂತೆ ಮಾತನಾಡಿದರು. ಜಿಲ್ಲೆಯಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳಿಂದ 3.31 ಕೋಟಿ ರೂ., ಗ್ರಂಥಾಲಯ ಕರ ಬಾಕಿ ಇದ್ದು, ಇದನ್ನು ಶೀಘ್ರವಾಗಿ ಪಾವತಿಸಬೇಕೆಂದು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಿದರು.

ಹಲವು ವಿಚಾರಗಳ ಬಗ್ಗೆ ಚರ್ಚೆ: ಕೋಲಾರ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಅತ್ಯಾಧುನಿಕ ಹೊಸ ಕಟ್ಟಡ, ಡಿಜಿಟಲ್ ಗ್ರಂಥಾಲಯ, ಖಾಲಿ ಇರುವ ಗ್ರಂಥಾಲಯ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಬಾಡಿಗೆ ಮೂಲಕ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸುವುದು ಇತ್ಯಾದಿ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಹಿಂದೆ ಡೀಸಿ ಡಿ.ಕೆ.ರವಿ ಅವಧಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನಡೆಯುತ್ತಿದ್ದ ರೀತಿಯಲ್ಲಿಯೇ ವಿವಿಧ ಇಲಾಖೆಗಳು ಮತ್ತು ಕೈಗಾರಿಕೆಗಳ ಸಮುದಾಯ ಅಭಿವೃದ್ಧಿ ನಿಧಿ ಬಳಸಿಕೊಂಡು ತರಬೇತಿ ಆರಂಭಿಸುವ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಇದೇ ಸಭೆಯಲ್ಲಿ ಮುಂದಿನ ಸಾಲಿನ ಆಯವ್ಯಯಕ್ಕೆ ಅನುಮೋದನೆ ನೀಡಲಾಯಿತು. 10.92 ಲಕ್ಷ ರೂ.ಗಳ ಪ್ರಾರಂಭಿಕ ಶಿಲ್ಕು, 1.32 ಕೋಟಿ ರೂ.ಗಳ ಆಯ ಸೇರಿ ಒಟ್ಟು 1.43 ಕೋಟಿ ರೂ.ಗಳ ಆದಾಯ ಮತ್ತು ಇದೇ ಸಾಲಿನಲ್ಲಿ 1.15 ಕೋಟಿ ರೂ.ಗಳ ವೆಚ್ಚ ನಿರೀಕ್ಷಿಸಲಾಗುತ್ತಿದೆ. ಇದರಿಂದ 28.17 ಲಕ್ಷ ರೂ.ಗಳ ಉಳಿತಾಯ ನಿರೀಕ್ಷಿಸಲಾಗುತ್ತಿದೆ.

ಜಿಲ್ಲಾ ಗ್ರಂಥಾಲಯದಲ್ಲಿ ವೋಚರ್‌ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಶುಚಿಗಾರರು, ಕಂಪ್ಯೂಟರ್‌ ಆಪರೇಟರ್‌ಗಳ ಗೌರವ ಧನವನ್ನು 5 ಸಾವಿರ ರೂ.ಗಳಿಂದ ತಲಾ ಒಂದು ಸಾವಿರ ಹೆಚ್ಚಿಸಲು ತೀರ್ಮಾನಿಸಲಾಯಿತು. ಈ ಕುರಿತು ಕನಿಷ್ಠ ವೇತನಕ್ಕೆ ಆಗ್ರಹಿಸಿ ಕೆಲಸಗಾರರು ಕೋರ್ಟ್‌ ಮೆಟ್ಟಿಲು ಏರಿರುವ ಕುರಿತು ಗ್ರಂಥಾಲಯಾಧಿಕಾರಿ ಸಭೆಯ ಗಮನಕ್ಕೆ ತಂದರು.

Advertisement

ಈ ಹಿಂದಿನ ಸಭೆಗಳಲ್ಲಿ ಪ್ರಸ್ತಾಪವಾಗಿರುವಂತೆ ಮನೆ ಬಾಗಿಲಿಗೆ ಗ್ರಂಥಾಲಯ ಪುಸ್ತಕ ತಲುಪಿಸುವ ಕುರಿತು ಹಾಗೂ ಓದುಗರ ಸಂಖ್ಯೆ ಹೆಚ್ಚಿಸುವ ಕುರಿತು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಅನುಮೋದನೆ: ಹಿಂದಿನ ಸಾಲಿನ ಆಯವ್ಯಯಕ್ಕೆ ಅನುಸಮರ್ಥನೆ, ಪ್ರಾಧಿಕಾರ ಕೋಟಾದಲ್ಲಿ ಖರೀದಿಸಿರುವ ಪುಸ್ತಕಗಳಿಗೆ ಅನುಸಮರ್ಥನೆ, ಜಯನಗರ ಸಮುದಾಯ ಮಕ್ಕಳ ಗ್ರಂಥಾಲಯ ಕಟ್ಟಡ ನಿರ್ಮಿಸಲು, ಮಾಲೂರು ತಾಲೂಕಿನ ಲಕ್ಕೂರು ಗ್ರಾಪಂ ಗ್ರಂಥಾಲಯದ 1 ನೇ ಮಹಡಿಯಲ್ಲಿ ಜಿಪಂ ಅನುದಾನದಿಂದ ಕಟ್ಟಡ ನಿರ್ಮಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಸಭೆಯಲ್ಲಿ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಉಪ ನಿರ್ದೇಶಕ ದಿವಾಕರ್‌, ಗ್ರಂಥಾಲಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next