Advertisement
ಪಾವಗಡ(ಸೋಲಾರ್ ಪಾರ್ಕ್): ಅಂದುಕೊಂಡಂತೆ ಎಲ್ಲವೂ ನಡೆದರೆ, ರಾಜ್ಯದ ಪ್ರಸ್ತುತ ಒಟ್ಟಾರೆ ಬೇಡಿಕೆಯಲ್ಲಿನ ಶೇ.35ರಷ್ಟು ವಿದ್ಯುತ್ ಮುಂಬರುವ ದಿನಗಳಲ್ಲಿ ಪಾವಗಡವೊಂದರಿಂದಲೇ ಪೂರೈಕೆ ಆಗಲಿದೆ. ಈ ಮೂಲಕ ಅತಿ ಹಿಂದುಳಿದ ತಾಲೂಕು, ರಾಜ್ಯದ ಕಾಲುಭಾಗಕ್ಕೆ ಬೆಳಕಾಗಲಿದೆ!
ವಿಸ್ತರಿಸಿದ ಯೋಜನೆಯನ್ನು 3 ಹಂತಗಳಲ್ಲಿ ಕೈಗೆತ್ತಿಕೊಳ್ಳಲು ಕರ್ನಾಟಕ ಸೌರವಿದ್ಯುತ್ ಅಭಿವೃದ್ಧಿ ನಿಗಮ (ಕೆಎಸ್‌ಪಿಡಿಸಿಎಲ್) ಉದ್ದೇಶಿಸಿದ್ದು, ಮೊದಲಿಗೆ 300 ಮೆ.ವಾ. ಸೇರ್ಪಡೆಗೊಳಿಸಲು ಸಿದ್ಧತೆ ನಡೆದಿದೆ. ಇದಕ್ಕೆ ಈಗಾಗಲೇ 1,200 ಎಕರೆ ಭೂಮಿ ನಿಗಮದ ಬಳಿ ಲಭ್ಯವಿದ್ದು, ಅದರಲ್ಲಿ ಈ 300 ಮೆ.ವಾ. ವಿದ್ಯುತ್‌ನ ಸೋಲಾರ್ ಪ್ಯಾನೆಲ್‌ಗಳು ತಲೆಯೆತ್ತಲಿವೆ. ಇದನ್ನು 2025ರ ಡಿಸೆಂಬರ್ ಅಂತ್ಯದೊಳಗೆ ಕಾರ್ಯಾರಂಭ ಮಾಡುವ ಗುರಿ ಹೊಂದಿದೆ ಎಂದು ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಎನ್. ಅಮರನಾಥ್ ಮಾಹಿತಿ ನೀಡಿದರು. ಇಂಧನ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪಾವಗಡಕ್ಕೆ ಮಾಧ್ಯಮ ನಿಯೋಗ ಭೇಟಿ ವೇಳೆ ಮಾತನಾಡಿದ ಅವರು, ಪಾವಗಡ ಸೋಲಾರ್ ಪಾರ್ಕ್ ಪ್ರಸ್ತುತ ವಿಶ್ವದ ಮೂರನೇ ಅತಿದೊಡ್ಡ ಪಾರ್ಕ್ ಆಗಿದೆ. ರಾಜಸ್ಥಾನದ ಭಾದ್ಲಾ ಸೋಲಾರ್ ಪಾರ್ಕ್ 2,245 ಮೆ.ವಾ. ಮೂಲಕ ಮೊದಲ ಸ್ಥಾನ ಮತ್ತು ಚೀನಾದ ಹೈನನ್ 2,200 ಮೆ.ವಾ. ಮೂಲಕ ಎರಡನೇ ಸ್ಥಾನದಲ್ಲಿವೆ. 300 ಮೆ.ವಾ. ಸೇರ್ಪಡೆಯೊಂದಿಗೆ ಮೊದಲ ಸ್ಥಾನಕ್ಕೆ ಏರಲಿದೆ. ಸುಮಾರು 1,200 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು.
Related Articles
Advertisement
ಅದೇ ರೀತಿ, ರಾಷ್ಟ್ರೀಯ ಶಾಖೋತ್ಪನ್ನ ಕೇಂದ್ರ (ಎನ್‌ಟಿಪಿಸಿ), ಭಾರತೀಯ ತೈಲ ನಿಗಮ (ಐಒಸಿ)ದಂತಹ ಕೇಂದ್ರದ ಸಾರ್ವಜನಿಕ ಸಂಸ್ಥೆಗಳಿಂದ ಇದೇ ಪಾವಗಡದಲ್ಲಿ 2,500 ಮೆ.ವಾ. ಸಾಮರ್ಥ್ಯದ ಸೌರವಿದ್ಯುತ್ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ. ಅನ್ನದಾನಪುರ ಮತ್ತು ತಿರುಮಣಿ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಇದಕ್ಕಾಗಿ 10ರಿಂದ 12 ಸಾವಿರ ಎಕರೆ ಭೂಮಿಯ ಅವಶ್ಯಕತೆ ಇದ್ದು, ಅಂದಾಜು 10 ಸಾವಿರ ಕೋಟಿ ಯೋಜನೆ ಇದಾಗಿದೆ. ಖರೀದಿ ಆಸಕ್ತಿ ತಿಳಿಸಲು (ಎಕ್ಸ್‌ಪ್ರೆಷನ್ ಆಫ್ ಇಂಟರೆಸ್ಟ್) ಇದೇ 15 ಕೊನೆಯ ದಿನವಾಗಿದೆ. 2027ರ ಒಳಗೆ ಇದನ್ನು ಕಾರ್ಯರೂಪಕ್ಕೆ ತರುವ ಗುರಿ ಇದೆ ಎಂದು ಅಮರನಾಥ್ ಮಾಹಿತಿ ನೀಡಿದರು.
ಮೊದಲ ಹಂತದಲ್ಲಿ ಸುಮಾರು 13 ಸಾವಿರ ಎಕರೆ ಭೂಮಿಯನ್ನು ಅಂದಾಜು ಮೂರು ಸಾವಿರ ರೈತರಿಂದ ಲೀಸ್ ಪಡೆಯಲಾಗಿದೆ. ಇದುವರೆಗೆ ಯಾವೊಬ್ಬ ರೈತರಿಂದ ಒಂದೇ ಒಂದು ಆಕ್ಷೇಪ ವ್ಯಕ್ತವಾಗಿಲ್ಲ. ಬದಲಿಗೆ ಇನ್ನಷ್ಟು ರೈತರು ಯೋಜನೆಗೆ ಭೂಮಿ ನೀಡಲು ಮುಂದೆ ಬಂದಿದ್ದಾರೆ. ಅಂದುಕೊಂಡಂತೆ ಇದೆಲ್ಲವೂ ಸಾಧ್ಯವಾದರೆ, ಉದ್ದೇಶಿತ ಸೋಲಾರ್ ಪಾರ್ಕ್ ಸಾಮರ್ಥ್ಯ ಕೇವಲ ನಾಲ್ಕು ವರ್ಷಗಳಲ್ಲಿ ದುಪ್ಪಟ್ಟಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಎಸ್‌ಪಿಡಿಸಿಎಲ್ ಡಿಜಿಎಂ ಪ್ರಕಾಸ್ ಮತ್ತಿತರರು ಉಪಸ್ಥಿತರಿದ್ದರು.
ಪಾವಗಡವೇ ಯಾಕೆ?ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಪಾವಗಡವನ್ನೇ ಆಯ್ಕೆ ಮಾಡಲು ಹಲವು ಪ್ರಮುಖ ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಇಲ್ಲಿ ಅತಿ ಕಡಿಮೆ ವಾರ್ಷಿಕ 509 ಮಿ.ಮೀ. ಮಳೆ ಬೀಳುತ್ತದೆ. 365 ದಿನಗಳಲ್ಲಿ 300 ಸೂರ್ಯನ ದಿನಗಳಾಗಿವೆ. ಪ್ರತಿ ಚದರ ಮೀಟರ್‌ನಲ್ಲಿ ದಿನಕ್ಕೆ 6 ಕಿ.ವಾ. ವಿದ್ಯುತ್ ಉತ್ಪಾದನೆ ಆಗುತ್ತದೆ. ಇದು ರಾಷ್ಟ್ರೀಯ ಸರಾಸರಿ (4.5 ಕಿ.ವಾ.)ಗಿಂತ ಅಧಿಕವಾಗಿದೆ. ಮಳೆಯಾಶ್ರಿತ ಭೂಮಿಯನ್ನು ಅವಲಂಬಿಸಿದ ರೈತರಿಗೆ ಬರುವ ಆದಾಯವೂ ಅತಿ ಕಡಿಮೆಯಾಗಿದ್ದು, ನಂಜುಂಡಪ್ಪ ಆಯೋಗ ನೀಡಿದ ವರದಿ ಪ್ರಕಾರ ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ಪಾವಗಡವೂ ಒಂದಾಗಿದೆ. * 13 ಸಾವಿರ ಎಕರೆ ಪ್ರದೇಶದಲ್ಲಿ ಒಟ್ಟು 44 ಸೌರವಿದ್ಯುತ್ ಬ್ಲಾಕ್‌ಗಳು
* 28 ಬ್ಲಾಕ್‌ಗಳು ಕೆಆರ್‌ಇಡಿಎಲ್
* 12 ಬ್ಲಾಕ್‌ಗಳು ಎನ್‌ಟಿಪಿಸಿ
* 4 ಬ್ಲಾಕ್‌ಗಳು ಎಸ್‌ಇಸಿಐ * 2,050 ಮೆ.ವಾ. ಒಟ್ಟಾರೆ ಉತ್ಪಾದನೆ
* 1,200 ಮೆ.ವಾ. ಕೆಆರ್‌ಇಡಿಎಲ್‌ಗೆ ಹೋಗುತ್ತದೆ
* 600 ಮೆ.ವಾ. ಎನ್‌ಟಿಪಿಸಿಗೆ
* 200 ಮೆ.ವಾ. ಉತ್ತರ ಪ್ರದೇಶಕ್ಕೆ ಪೂರೈಕೆ * ಒಂದು ಮೆ.ವಾ. ಸೌರವಿದ್ಯುತ್ ಉತ್ಪಾದನೆಗೆ ತಗಲುವ ವೆಚ್ಚ ಅಂದಾಜು 4 ಕೋಟಿ ರೂ.
* 3.50 ರೂ. ಇಲ್ಲಿನ ಪ್ರತಿ ಯೂನಿಟ್‌ಗೆ ಮಾರಾಟವಾಗುವ ವಿದ್ಯುತ್ ದರ
* 14 ಸಾವಿರ ಎಕರೆ ಎರಡನೇ ಹಂತಕ್ಕೆ ಬೇಕಾಗುವ ಭೂಮಿ
* 13,500 ಕೋಟಿ ರೂ. ಎರಡನೇ ಹಂತದ ಅಂದಾಜು ವೆಚ್ಚ ವಿಜಯ ಕುಮಾರ ಚಂದರಗಿ