ಚಾಮರಾಜನಗರ: ತಾಲೂಕಿನ ಚಿಕ್ಕಹೊಳೆ- ಸುವರ್ಣಾವತಿ ಬಳಿ ಶುಕ್ರವಾರ ಸಂಜೆ 2 ಸಾವಿರ ಮುಖಬೆಲೆಯ 3.16 ಕೋಟಿ ರೂ. ಮೊತ್ತದ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ನಕಲಿ ನೋಟು ಸಾಗಾಣಿಕೆಯಲ್ಲಿ ಬೆಂಗಳೂರು-ತಮಿಳುನಾಡು ಸಂಪರ್ಕ ಹೊಂದಿರುವ ತಂಡ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ: ಬೊಲೆರೋ ಪಿಕಪ್ ವಾಹನದಲ್ಲಿ ನಕಲಿ ನೋಟುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೂರ್ವ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಬಿ. ಪುಟ್ಟಸ್ವಾಮಿ ನೇತೃತ್ವದ ತಂಡ ಶುಕ್ರವಾರ ಮಧ್ಯಾಹ್ನ ಕಾರ್ಯಾಚರಣೆ ನಡೆಸಿತು. ಚಿಕ್ಕಹೊಳೆ ಸುವರ್ಣಾವತಿ ಜಲಾಶಯದ ಹತ್ತಿರ ವಾಹನಗಳ ತಪಾಸಣೆ ಮಾಡಲಾಯಿತು. ಈ ವೇಳೆ ಕೆ.ಎ. 05 ಎಜೆ 0374 ನಂಬರಿನ ಬೊಲೆರೋ ಪಿಕಪ್ ವಾಹನ ತಪಾಸಣೆ ಮಾಡಿದಾಗ ನಕಲಿ ನೋಟುಗಳು ಕಂಡು ಬಂದವು.
ಬೊಲೆರೋ ವಾಹನದಲ್ಲಿ ನೋಟು ಸಾಗಣೆ: ಬೊಲೆರೋ ಪಿಕಪ್‌ನ ಕೆಳಭಾಗದಲ್ಲಿ ರಹಸ್ಯ ಫ್ಲಾಟ್ಫಾರಂ ಮಾಡಿ ಅದರೊಳಗೆ ಸಾಗಿಸಲಾಗುತ್ತಿತ್ತು. ಪೊಲೀಸರು ಕೂಲಂಕಷವಾಗಿ ತಪಾಸಣೆ ಮಾಡಿದಾಗ ನಕಲಿ ನೋಟುಗಳನ್ನು ಇಟ್ಟಿರುವುದು ಪತ್ತೆಯಾಯಿತು. ಎರಡು ಸಾವಿರ ರೂ. ಮುಖಬೆಲೆಯ 3.16 ಕೋಟಿ ರೂ. ಮೌಲ್ಯದ ನೋಟುಗಳನ್ನು ಇದರಲ್ಲಿ ಸಾಗಿಸಲಾಗುತ್ತಿತ್ತು. ಈ ನೋಟುಗಳನ್ನು ತಮಿಳುನಾಡಿಗೆ ಸಾಗಿಸಿ, ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಚಲಾವಣೆಗೆ ಬಿಡುವ ಉದ್ದೇಶವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಒಂದೇ ಸಂಖ್ಯೆಯ ನೋಟುಗಳು!: ಇವು ಮುದ್ರಣ ಮಾಡಿದ ಖೋಟಾ ನೋಟುಗಳಲ್ಲ, ಬದಲಾಗಿ ಕಲರ್ ಜೆರಾಕ್ಸ್ ಮೆಷೀನಿನಲ್ಲಿ ಎರಡು ಸಾವಿರ ರೂ. ನೋಟನ್ನು ಜೆರಾಕ್ಸ್ ಮಾಡಲಾದ ನಕಲಿ ನೋಟುಗಳು. ಹಾಗಾಗಿ ಎಲ್ಲವೂ ಒಂದೇ ಸಂಖ್ಯೆಯನ್ನು ಹೊಂದಿವೆ!
Advertisement
ಬೆಂಗಳೂರಿನಿಂದ ಚಾಮರಾಜನಗರ ಮಾರ್ಗ ತಮಿಳುನಾಡಿಗೆ ಸಾಗಿಸುತ್ತಿದ್ದ 3.16 ಕೋಟಿ ಮೌಲ್ಯದ, ಕಲರ್ ಜೆರಾಕ್ಸ್ ಮಾಡಿದ 2 ಸಾವಿರ ರೂ. ಮುಖಬೆಲೆಯ, ನಕಲಿ ನೋಟುಗಳನ್ನು ತಾಲಕ್ಕಹೊಳೆ-ಅಟ್ಟುಗುಳಿಪುರದ ಬಳಿ ಶುಕ್ರವಾರ ಸಂಜೆ ಪೂರ್ವ ಠಾಣೆ ಪೊಲೀಸರು ವಶಪಡಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ.
Related Articles
Advertisement
ಬೇರೆ ಬೇರೆ ನಂ. ಪ್ಲೇಟ್‌ಗಳು: ಬೆಂಗಳೂರಿನಿಂದ ತಮಿಳುನಾಡಿಗೆ ಸಾಗಿಸುವಾಗ, ಚೆಕ್ ಪೋಸ್ಟ್ ಗಳಲ್ಲಿ ಅನುಮಾನ ಬಂದು, ಮುಂದಿನ ಚೆಕ್‌ಪೋಸ್ಟ್‌ಗೆ ಮಾಹಿತಿ ನೀಡಿದರೆ ತಪ್ಪಿಸಿಕೊಳ್ಳುವ ಸಲುವಾಗಿ ಬೇರೆ ಬೇರೆ ಸಂಖ್ಯೆಯ ನಂಬರ್ ಪ್ಲೇಟ್‌ಗಳನ್ನು ಈ ಪಿಕಪ್ ವಾಹನದಲ್ಲಿ ಬದಲಿಸಲಾಗುತ್ತಿತ್ತು! ಹೀಗಾಗಿ ವಾಹನದಲ್ಲಿ ಎರಡು ಭಿನ್ನ ಸಂಖ್ಯೆಯ, ಬೇರೆ ವಿನ್ಯಾಸವುಳ್ಳ ಮೂರು ಬಗೆಯ ನೇಮ್ ಪ್ಲೇಟ್‌ಗಳು ದೊರೆತಿವೆ! (ಕೆ.ಎ. 05 ಎಜೆ 0374, ಕೆ.ಎ. 04 ಎಜೆ 0384 ನೇಮ್‌ಪ್ಲೇಟ್‌ಗಳನ್ನು ಬಳಸಲಾಗಿದೆ. ಇದರಲ್ಲಿ 0384 ರಿಂದ ಅಂತ್ಯವಾಗುವ ಪ್ಲೇಟ್ ಅನ್ನು ಎರಡು ಬೇರೆ ವಿನ್ಯಾಸದಲ್ಲಿ ಬರೆಯಲಾಗಿದೆ!
ಚಾಲಕನ ಬಂಧನ: ಪ್ರಕರಣದ ಸಂಬಂಧ ಬೊಲೆರೋ ಚಾಲಕ ಕಾರ್ತಿಕ್ (23) ಅಲಿಯಾಸ್ ಕರಡಿ ಎಂಬಾತನನ್ನು ಬಂಧಿಸಲಾಗಿದೆ. ವಾಹನದಲ್ಲಿದ್ದ ಇನ್ನೋರ್ವ ಪರಾರಿಯಾಗಿದ್ಧಾನೆ. ಈತ ಮೂಲತಃ ಮೈಸೂರು ಜಿಲ್ಲೆಯ ಸರಗೂರು ಪಟ್ಟಣದವನು. ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದಲ್ಲಿ ಕ್ಷೌರಿಕ ವೃತ್ತಿ ನಡೆಸುತ್ತಿದ್ಧಾನೆ. ತಾನು ಡ್ರೈವಿಂಗ್ ಕಲಿತಿದ್ದು, ಬೆಂಗಳೂರಿನಿಂದ ವಾಹನ ಮಾಲೀಕರು ಕರೆದಾಗ ಚಾಲಕನಾಗಿ ಬಾಡಿಗೆಗೆ ಹೋಗುತ್ತಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಕಾರ್ಯಾಚರಣೆಯಲ್ಲಿ ಪೂರ್ವ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಬಿ. ಪುಟ್ಟಸ್ವಾಮಿ, ಎಎಸ್‌ಐ ಮಾದೇಗೌಡ, ಮುಖ್ಯಪೇದೆಗಳಾದ ನಾಗನಾಯ್ಕ, ಶಾಂತರಾಜು, ಚಂದ್ರ, ಪೇದೆಗಳಾದ ಬಂಟಪ್ಪ, ನಿಂಗರಾಜು, ಅಶೋಕ್, ವೆಂಕಟೇಶ್, ಸುರೇಶ, ಮಹೇಶ್ ಮತ್ತು ಚಾಲಕ ಮಹೇಶ್ ಪಾಲ್ಗೊಂಡಿದ್ದರು.
ನಕಲಿ ನೋಟು ಜಾಲದ ಶಂಕೆ:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ್ ಮಾತನಾಡಿ, ಈ ದೊರೆತಿರು ಪ್ರತಿ ನೋಟು ಕೂಡ ಕಲರ್ ಜೆರಾಕ್ಸ್ ಮಾಡಿದವಾಗಿವೆ. ಪ್ರಕರಣದಿಂದಾಗಿ ನಕಲಿ ನೋಟುಗಳನ್ನು ತಯಾರಿಸುವ ಜಾಲ ಇದರ ಹಿನ್ನೆಲೆಯಲ್ಲಿ ಇರಬಹುದೆಂಬ ಶಂಕೆಯಿದೆ. ಬಂಧಿತ ಚಾಲಕನಿಂದ ನಮಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ. ವಾಹನದ ಬಾಡಿಗೆಗೆ ಕರೆದಿದ್ದರು ಹೋಗಿದ್ದೆ. ವಾಹನದಲ್ಲೇನಿದೆ ಎಂದು ನನಗೆ ಗೊತ್ತಿರಲಿಲ್ಲ ಎನ್ನುತ್ತಿದ್ದಾನೆ. ಜೊತೆಯಲ್ಲಿದ್ದಾತನ ಬಗ್ಗೆಯೂ ನನಗೆ ಗೊತ್ತಿಲ್ಲ ಎನ್ನುತ್ತಿದ್ದಾನೆ. ನಾನಾ ಬಗೆಯ ತನಿಖೆಗಳನ್ನು ನಡೆಸಿ ಇದರ ಹಿಂದಿರುವ ವ್ಯಕ್ತಿಗಳನ್ನು ಜಾಲವನ್ನು ಪತ್ತೆ ಹಚ್ಚಲಾಗುವುದು ಎಂದರು. ನಕಲಿ ನೋಟಿನ ಹಿಂದೆ ದೊಡ್ಡ ಜಾಲದ ಶಂಕೆಯಿದೆ. ತನಿಖೆ ಚುರುಕುಗೊಳಿಸಿ ಹಿಂದಿರುವ ಜಾಲವನ್ನು ಭೇದಿಸಿ, ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಲಾಗುವುದು ಎಂದು ಹೇಳಿದರು.
● ಕೆ.ಎಸ್. ಬನಶಂಕರ ಆರಾಧ್ಯ