ಶಿರಸಿ: ಜ್ಞಾನ ಪೀಠ ಪುರಸ್ಕ್ರತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಕಲಿತ ಶತಮಾನ ಕಂಡ ನಗರದ ಎರಡು ಶಾಲೆಗಳಿಗೆ ಒಟ್ಟು 3.12 ಕೋ.ರೂ. ಅನುದಾನ ಬಿಡುಗಡೆ ಆಗಿದೆ ಎಂದು ವಿಧಾನ ಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಗಿರೀಶ್ ಕಾರ್ನಾಡ್ ಅವರು ಕಲಿತ ಶಾಲೆಗಳ ಸಮಗ್ರ ಅಭಿವೃದ್ದಿಗೆ ಯೋಚಿಸಿ ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡಿದ್ದು, ಅದರ ಭಾಗವಾಗಿ ಸ್ಪೀಕರ್ ಕಾಗೇರಿ ಅವರ ಆಡಳಿತ ಸಮಿತಿಯ ಅಧ್ಯಕ್ಷತೆಯ ಜವಬ್ದಾರಿಯೂ ಇರುವ ಇಲ್ಲಿನ ರಾಯಪ್ಪ ಹುಲೇಕಲ್ ಶಾಲೆ ಹಾಗೂ ಮಾರಿಕಾಂಬಾ ಪ್ರೌಢಶಾಲೆ ಅಭಿವೃದ್ಧಿ ಗೆ ಅನುದಾನ ಬಿಡುಗಡೆ ಆಗಿದೆ.
ಪ್ರಸಕ್ತ 2021_22 ನೇ ಸಾಲಿನ ಆಯವ್ಯಯ ದಲ್ಲಿ ಕರ್ನಾಟಕ ಸರಕಾರ ಘೋಷಿಸಿದಂತೆ ನನ್ನ ಶಿಫಾರಸ್ಸು ಕೂಡ ಪಡೆದು ಗಿರೀಶ ಕಾರ್ನಾಡ್ ಅವರು ಓದಿದ ರಾಯಪ್ಪ ಹುಲೇಕಲ್ ಸರಕಾರಿ ಹಿ.ಪ್ರಾ ಶಾಲೆಗೆ
91.25 ಲಕ್ಷ ರೂ. ಹಾಗೂ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣ ಪಡೆಯುತ್ತಿರುವ ಶ್ರೀ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಗೆ
221.09 ಲಕ್ಷ ರೂ. ಮಂಜೂರಾಗಿದೆ ಎಂದು ಸ್ಪೀಕರ್ ಕಾಗೇರಿ ವಿವರಿಸಿದರು.
ಪ್ರತಿನಿತ್ಯ ಎರಡೂ ಶಾಲೆಗಳಲ್ಲಿ ಕನಿಷ್ಠ ಒಂದು ಸಾವಿರದ ಏಳನೂರಕ್ಕೂ ಅಧಿಕ ಮಕ್ಕಳು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆಯುತ್ತಿದ್ದಾರೆ. ಈ ಶಾಲೆ ಆರಂಭಗೊಂಡು ಶತಮಾನೋತ್ತರ ಆಗಿದ್ದು, ಶಾಲಾ ಕಟ್ಟಡಗಳೂ ಶಿಥಿಲಗೊಂಡಿವೆ . ಈಗ ನೀಡುವ ಅನುದಾನದಿಂದ ಶಾಲೆಗೆ ಹೊಸ ಕಟ್ಟಡ, ಪೀಠೋಪಕರಣ, ಪ್ರಯೋಗಾಲಯ, ಆಧುನಿಕ ಕಲಿಕಾ ಉಪಕರಣಗಳು ದೊರಕಿ ವಿದ್ಯಾರ್ಥಿಗಳಿಗೆ ನೆರವಾಗಲಿದೆ.
”ರಾಜ್ಯದ ಬೆರಳೆಣಿಕೆ ಶಾಲೆಗಳ ಪಟ್ಟಿಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಎರಡು ಶಾಲೆಗಳು ಒಳಗೊಂಡಿದೆ ಎನ್ನುವುದು ಹೆಮ್ಮೆಯಾಗಿದೆ” ಎಂದು ಸ್ಪೀಕರ್ ಕಾಗೇರಿ ಅವರ ಆಪ್ತ ಕಾರ್ಯದರ್ಶಿ ಸುಬ್ರಾಯ ಹೆಗಡೆ ಹಲಸಿನಳ್ಳಿ ತಿಳಸಿದ್ದಾರೆ.