ಬೆಂಗಳೂರು: ಖಾಸಗಿ ಬ್ಯಾಂಕ್ ಮ್ಯಾನೇಜರ್ ಹುದ್ದೆಯ ಸಂದರ್ಶನಕ್ಕೆ ಸಂಬಂಧಿಸಿದ ಪತ್ರ ತಡವಾಗಿ ತಲುಪಿಸಿ, ಉದ್ಯೋಗ ಅವಕಾಶವನ್ನು ವಂಚಿತಗೊಳಿಸಿದ ಪೋಸ್ಟ್ ಮಾಸ್ಟರ್‌ಗೆ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಭಾರಿ ಮೊತ್ತದ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ಕೊಪ್ಪಳ ಜಿಲ್ಲೆಯ 32ವರ್ಷದ ವ್ಯಕ್ತಿಯೊಬ್ಬರು ಖಾಸಗಿ ಬ್ಯಾಂಕ್‌ವೊಂದರ ಮ್ಯಾನೇಜರ್ ಹುದ್ದೆಗೆ ಸಂಬಂಧಿಸಿದಂತೆ 2014ರ ಜುಲೈನಲ್ಲಿ ಪರೀಕ್ಷೆಯನ್ನು ಬರೆದಿದ್ದರು. ಉತ್ತಮ ಅಂಕ ಗಳಿಸಿದ ಹಿನ್ನೆಲೆಯಲ್ಲಿ ಅಭ್ಯರ್ಥಿಗೆ ಮೂಲ ಅಂಕಪಟ್ಟಿ ಹಾಗೂ ಇತರೆ ದಾಖಲೆಯನ್ನು ಆ.13ರೊಳಗೆ ಸಲ್ಲಿಕೆ ಮಾಡಲು ಬ್ಯಾಂಕ್ 2014ರ ಜುಲೈ 24ರಂದು ಪತ್ರವನ್ನು ಭಾರತೀಯ ಅಂಚೆಯ ಮೂಲಕ ಪತ್ರ ರವಾನೆ ಮಾಡಿದೆ. ಆದರೆ ಈ ಪತ್ರವು ಅಭ್ಯರ್ಥಿಗೆ ಆ.28ರಂದು ಕೈ ಸೇರಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಪತ್ರವು 15 ದಿನ ತಡವಾಗಿ ಕೈ ಸೇರಿರುವುದರಿಂದ ಮ್ಯಾನೇಜರ್ ಹುದ್ದೆ ಅವಕಾಶ ಕೈ ತಪ್ಪಿ ಹೋಗಿದೆ. ಭಾರತೀಯ ಅಂಚೆಯಲ್ಲಿ ಸೇವಾ ನ್ಯೂನ್ಯತೆಯಿಂದಾಗಿಯೇ ಬ್ಯಾಂಕ್ ಸಂದರ್ಶನ ಕೈ ತಪ್ಪಿ ಹೋಗಿರುವುದನ್ನು ಪ್ರಶ್ನಿಸಿ ವ್ಯಕ್ತಿಯು ಬಸವಭವನದಲ್ಲಿರುವ ಬೆಂಗಳೂರಿನ ರಾಜ್ಯ ಗ್ರಾಹಕ ವ್ಯಾಜ್ಯ ಆಯೋಗಕ್ಕೆ 2015ರಲ್ಲಿ ದೂರು ನೀಡಿ ವಾದವನ್ನು ಮಂಡಿಸಿದ್ದಾರೆ.
ಪತ್ರದಲ್ಲಿನ ವಿಳಾಸದಲ್ಲಿ ವ್ಯತ್ಯಾಸದಿಂದ ನಿರ್ದಿಷ್ಟ ಅವಧಿಯಲ್ಲಿ ಪತ್ರ ತಲುಪಿಸಲು ಸಾಧ್ಯವಾಗಿಲ್ಲ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಪೋಸ್ಟ್ ಮಾಸ್ಟರ್ ಈ ಸಂದರ್ಭದಲ್ಲಿ ಇಲಾಖಾ ತರಬೇತಿಯಲ್ಲಿದ್ದರು. ಈ ವೇಳೆ ಹೊಸದಾಗಿ ತಾತ್ಕಾಲಿಕವಾಗಿ ಕರ್ತವ್ಯ ನಿಯೋಜನೆಗೊಂಡವರಿಗೆ ವಿಳಾಸದಲ್ಲಿನ ವ್ಯತ್ಯಾಸದಿಂದ ನಿರ್ದಿಷ್ಟ ಅವಧಿಯಲ್ಲಿ ಪತ್ರ ತಲುಪಿಸಲು ಸಾಧ್ಯವಾಗಿಲ್ಲ ಎಂದು ಅಂಚೆ ಇಲಾಖೆ ವಾದವನ್ನು ಮಂಡಿಸಿದೆ.
ಎರಡು ಕಡೆಯ ವಾದಗಳನ್ನು ಆಲಿಸಿದ ಆಯೋಗ ಗ್ರಾಹಕ ಸೇವೆಯಲ್ಲಿ ವ್ಯತ್ಯಯವಾಗಿರುವುದನ್ನು ಮನಗೊಂಡು ದೂರುದಾರನಿಗೆ 2ಲಕ್ಷ ರೂ. ಪರಿಹಾರಕ್ಕೆ ಶೇ.6ರ ಬಡ್ಡಿದರದಲ್ಲಿ ಒಟ್ಟು 8ವರ್ಷಕ್ಕೆ 90,000 ರೂ. ಹಾಗೂ ನ್ಯಾಯಾಲಯದ ಪರಿಹಾರ ವೆಚ್ಚ 20,000 ರೂ. ನಂತೆ ಒಟ್ಟು 3.10 ಲಕ್ಷ ರೂ. ಪರಿಹಾರ ನೀಡುವಂತೆ ಅಂಚೆ ಇಲಾಖೆಗೆ ಆದೇಶ ಹೊರಡಿಸಿದೆ.