Advertisement

ಅದೃಷ್ಟ ಬಲದಲ್ಲಿ ಎರಡು ಬಾರಿ ಮಂತ್ರಿ ಸ್ಥಾನ

04:01 PM Aug 21, 2019 | Suhan S |

ಕೋಲಾರ: ಅದೃಷ್ಟ ಬಲದಿಂದ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯಿಂದ ಮುಳಬಾಗಿಲು ಪಕ್ಷೇತರ ಶಾಸಕ ಎಚ್.ನಾಗೇಶ್‌ ಸಂಪುಟ ದರ್ಜೆಯ ಸಚಿವರಾಗಿ ಮಂಗಳವಾರ ಪ್ರಮಾಣ ವಚನ ಸ್ಪೀಕರಿಸಿದ್ದಾರೆ.

Advertisement

ಕೇವಲ ಮೂರು ತಿಂಗಳ ಅವಧಿಯಲ್ಲಿ ಎಚ್.ನಾಗೇಶ್‌ ಎರಡು ಬಾರಿ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ಪೀಕರಿಸಿ ಗಮನ ಸೆಳೆೆದಿದ್ದಾರೆ. ಹಿಂದಿನ ಮೈತ್ರಿ ಸರ್ಕಾರದಲ್ಲಿ ಕಾಡಿ ಬೇಡಿ ಮಂತ್ರಿ ಸ್ಥಾನ ಪಡೆದುಕೊಂಡಿದ್ದ ಎಚ್.ನಾಗೇಶ್‌, ಹದಿನೈದು ದಿನ ಕಳೆದರೂ ಖಾತೆ ಸಿಗದೆ ಮುಜುಗರ ಕ್ಕೊಳಗಾಗಿದ್ದರು. ಕಾಡಿಬೇಡಿದರೂ ನಿರೀಕ್ಷಿಸಿದ್ದ ಇಂಧನ ಖಾತೆ ಸಿಗಲಿಲ್ಲ. ಸಣ್ಣ ಕೈಗಾರಿಕೆ ಸಚಿವ ಸ್ಥಾನಕ್ಕೆ ಅವರು ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಆದರೆ, ಖಾತೆ ಖಚಿತವಾದ ಎರಡನೇ ವಾರದಲ್ಲಿ ಎಚ್. ನಾಗೇಶ್‌ ಮೈತ್ರಿ ಸರ್ಕಾರಕ್ಕೆ ಘೋಷಿಸಿದ್ದ ಬೆಂಬಲ ವಾಪಸ್‌ ಪಡೆದು ವಿಶೇಷ ವಿಮಾನದಲ್ಲಿ ಮುಂಬೈ ಹಾರಿದ್ದರು.

ಅದೃಷ್ಟ ಬಲ: ಬೆಸ್ಕಾಂ ಅಧಿಕಾರಿಯಾಗಿದ್ದ ಎಚ್. ನಾಗೇಶ್‌, ಕೋಲಾರ ಜಿಲ್ಲೆ ಮೂಲದವರಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಚ್.ನಾಗೇಶ್‌ ವಿಧಾನಸಭಾ ಚುನಾವಣಾ ಸಮಯದಲ್ಲಿ ನಾಮಪತ್ರ ಸಲ್ಲಿಸಿದ್ದರು. ಆಗ ನಡೆದ ರಾಜಕೀಯ ಆಟದಲ್ಲಿ ಜಿಲ್ಲೆಯ ಕಾಂಗ್ರೆಸ್‌ನ ಎರಡು ಗುಂಪುಗಳ ಗುದ್ದಾಟ ದಲ್ಲಿ ಎಚ್.ನಾಗೇಶ್‌ ಮುಳಬಾಗಿಲು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿಬಿಟ್ಟಿದ್ದರು. ಚುನಾವಣೆಗೆ ಕೇವಲ ಎರಡು ವಾರ ಉಳಿದಿರುವಾಗ ಅಭ್ಯರ್ಥಿ ಯಾಗಿದ್ದ ಎಚ್.ನಾಗೇಶ್‌ರನ್ನು ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಬೆಂಬಲಿಸಿದ್ದರು. ಎಚ್. ನಾಗೇಶ್‌ ಯಾರೆಂದು ಗೊತ್ತಿಲ್ಲದೆ ಜನ ಮತ ಚಲಾವಣೆ ಮಾಡಿದ್ದರು. ಅದೃಷ್ಟ ಬಲದಲ್ಲಿ ಎಚ್.ನಾಗೇಶ್‌ ಶಾಸಕರಾಗಿಯೂ ಆಯ್ಕೆಯಾಗಿಬಿಟ್ಟಿದ್ದರು.

ಕಾಂಗ್ರೆಸ್‌ನಿಂದ ಜೆಡಿಎಸ್‌- ಬಿಜೆಪಿಯತ್ತ: ಡಿ.ಕೆ.ಶಿವಕುಮಾರ್‌ ಬೆಂಬಲದಿಂದಲೇ ಮುಳಬಾಗಿಲಿನಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿದ್ದ ಎಚ್.ನಾಗೇಶ್‌, ಗೆಲ್ಲುತ್ತಿದ್ದಂತೆಯೇ ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸುವಂತೆ ಮಾಡುವಲ್ಲಿ ಅದೇ ಡಿ.ಕೆ.ಶಿವಕುಮಾರ್‌ ಸಫ‌ಲರಾಗಿದ್ದರು. ಆದರೆ, ಮೈತ್ರಿ ಸರ್ಕಾರದಲ್ಲಿ ಎಚ್.ನಾಗೇಶ್‌ರಿಗೆ ಮಂತ್ರಿಗಿರಿ ಕೊಡಿಸುವಲ್ಲಿ ಶಿವಕುಮಾರ್‌ ವಿಫ‌ಲವಾಗಿದ್ದರು. ಇದಕ್ಕಾಗಿ ಮುನಿಸಿಕೊಂಡಿದ್ದ ಎಚ್.ನಾಗೇಶ್‌ ಬಿಜೆಪಿಯತ್ತ ಮುಖ ಮಾಡಿದ್ದರು.

ಮುಂಬೈಗೆ ಪಯಣ: ಇದನ್ನು ಗ್ರಹಿಸಿ ಮತ್ತೇ ಮೈತ್ರಿ ಸರ್ಕಾರ ಜೆಡಿಎಸ್‌ ಕೋಟಾದಲ್ಲಿ ಎಚ್.ನಾಗೇಶ್‌ರನ್ನು ಮಂತ್ರಿಯಾಗಿಸಿಕೊಂಡಿತ್ತು. ಇದಕ್ಕಾಗಿ ಎಚ್. ನಾಗೇಶ್‌ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಧನ್ಯವಾದಗಳನ್ನು ಸಲ್ಲಿಸಿದ್ದರು. ಆದರೆ, ಖಾತೆ ಹಂಚುವಾಗಿನ ವಿಳಂಬ ಕ್ಯಾತೆಯಿಂದ ಎಚ್.ನಾಗೇಶ್‌ ಬೇಸತ್ತಿದ್ದರು. ಮೈತ್ರಿ ಸರ್ಕಾರಕ್ಕೆ ಕೈಕೊಟ್ಟು ಮಂತ್ರಿಗಿರಿಗೆ ರಾಜೀನಾಮೆ ನೀಡಿ, ನೇರವಾಗಿ ಮುಂಬೈಗೆ ವಿಶೇಷ ವಿಮಾನದಲ್ಲಿ ಹಾರಿಬಿಟ್ಟಿದ್ದರು.

Advertisement

ಮತ್ತೇ ಕೈಹಿಡಿದ ಅದೃಷ್ಟ: ಮೈತ್ರಿ ಸರ್ಕಾರಕ್ಕೆ ಕೈಕೊಟ್ಟು ವಿಶೇಷ ವಿಮಾನದಲ್ಲಿ ಮುಂಬೈ ಹಾರಿದ್ದ ಎಲ್ಲಾ ಶಾಸಕರು ಅನರ್ಹರಾಗಿ ಅಧಿಕಾರ ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ಸುಪ್ರಿಂ ಕೋರ್ಟ್‌ ಅಲೆಯುತ್ತಾ ರಾಜಕೀಯ ಭವಿಷ್ಯ ಅರಸುತ್ತಿದ್ದಾರೆ. ಆದರೆ, ಪಕ್ಷೇತರರಾಗಿ ಗೆಲುವು ಸಂಪಾದಿಸಿದ್ದ ಎಚ್.ನಾಗೇಶ್‌ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರಾಗಿದ್ದಾರೆ. ಈ ಕಾರಣದಿಂದಲೇ ಸ್ಪೀಕರ್‌ ರಮೇಶ್‌ಕುಮಾರ್‌ರ ಅನರ್ಹ ಪ್ರಹಾರದಿಂದ ತಪ್ಪಿಸಿಕೊಂಡಿದ್ದರು. ಇದೀಗ ಎಚ್.ನಾಗೇಶ್‌ ಬಿಜೆಪಿ ಸರ್ಕಾರದಲ್ಲಿ ಮೊದಲ ಹಂತದಲ್ಲಿಯೇ ಸಂಪುಟ ದರ್ಜೆಯ ಮಂತ್ರಿಯಾಗಿ ಮಂಗಳವಾರ ಪ್ರಮಾಣ ವಚನ ಸ್ಪೀಕರಿಸಿ ಗಮನ ಸೆಳೆದಿದ್ದಾರೆ.

ದೊಡ್ಡ ಖಾತೆಗೆ ಲಾಬಿ: ಮೈತ್ರಿ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಖಾತೆಯನ್ನು ಧಿಕ್ಕರಿಸಿ ತೆರಳಿದ್ದ ಎಚ್.ನಾಗೇಶ್‌ ಈಗ ಬಿಜೆಪಿ ಸರ್ಕಾರದಲ್ಲಿ ದೊಡ್ಡ ಖಾತೆಗೆ ಪ್ರಯತ್ನಿಸುತ್ತಿದ್ದಾರೆ. ಅದರಲ್ಲೂ ತಾವು ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಂಧನ ಇಲಾಖೆಯ ಸಚಿವರಾಗಲು ಲಾಬಿ ನಡೆಸುತ್ತಿದ್ದಾರೆ. ಬಿಜೆಪಿ ತನ್ನ ಮಾತನ್ನು ಉಳಿಸಿಕೊಂಡು ಎಚ್.ನಾಗೇಶ್‌ರಿಗೆ ಇಂಧನ ಖಾತೆ ನೀಡುತ್ತದೋ ಇಲ್ಲ, ಮೈತ್ರಿ ಸರ್ಕಾರ ನೀಡಿದಂತೆ ಮತ್ತೇ ಸಣ್ಣ ಕೈಗಾರಿಕೆ ಖಾತೆಗೆ ತೃಪ್ತಿಪಡಿಸುತ್ತದೋ ಕಾದು ನೋಡಬೇಕಾಗಿದೆ.

 

● ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next