Advertisement

ಭಾರತದ ಬ್ಯಾಟರ್‌ಗಳಿಗೆ ಅಕ್ಷರ್‌ ಪಾಠ; ಆಸೀಸ್‌ಗೆ ಒಂದೇ ರನ್‌ ಲೀಡ್‌

11:01 PM Feb 18, 2023 | Team Udayavani |

ಹೊಸದಿಲ್ಲಿ: ದ್ವಿತೀಯ ಟೆಸ್ಟ್‌ ಪಂದ್ಯದ ದ್ವಿತೀಯ ದಿನದಾಟ ಸ್ಪಿನ್‌ ಬೌಲರ್‌ಗಳ ಸಾಹಸಕ್ಕೆ ಮೀಸಲಾಯಿತು. ಪರಿಣಾಮ, ಆಸ್ಟ್ರೇಲಿಯ ದೊಡ್ಡ ಮೊತ್ತದ ಮುನ್ನಡೆಯ ಸಾಧ್ಯತೆಯನ್ನು ತೆರೆದಿರಿಸಿತು. ಭಾರತ ತಿರುಗೇಟು ನೀಡಿ ಈ ಮುನ್ನಡೆಯನ್ನು ಒಂದೇ ರನ್ನಿಗೆ ಸೀಮಿತಗೊಳಿಸಿತು. ಎರಡೂ ತಂಡಗಳ ಈ ಹೋರಾಟಕ್ಕೆ ಸ್ಪಿನ್ನರ್‌ಗಳೇ ಕಾರಣರಾದದ್ದು ವಿಶೇಷ.

Advertisement

ಆಸ್ಟ್ರೇಲಿಯದ 263 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಜವಾಬು ನೀಡುವ ಹಾದಿಯಲ್ಲಿ ಭಾರೀ ಕುಸಿತ ಅನುಭವಿಸಿದ ಭಾರತ, ಕೊನೆಗೂ 262ರ ತನಕ ಸಾಗಿಬರಲು ಯಶಸ್ವಿಯಾಯಿತು. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿ ರುವ ಕಾಂಗರೂ ಪಡೆ ಒಂದು ವಿಕೆಟಿಗೆ 61 ರನ್‌ ಗಳಿಸಿದೆ. ಒಟ್ಟು ಮುನ್ನಡೆ 62 ರನ್‌.

ಶತಕದ ಜತೆಯಾಟ
ಶನಿವಾರದ ಮೊದಲ ಸ್ಪಿನ್‌ ಹೀರೋ ನಥನ್‌ ಲಿಯಾನ್‌. ನಾಗ್ಪುರದಲ್ಲಿ ಮಂಕಾಗಿದ್ದ ಅವರು ಇಲ್ಲಿ 5 ವಿಕೆಟ್‌ ಕೆಡವಿ ಭಾರತವನ್ನು ಅಪಾಯಕ್ಕೆ ತಳ್ಳಿದರು. ತಂಡವನ್ನು ಇಲ್ಲಿಂದ ಮೇಲೆತ್ತಿ ಮುನ್ನಡೆಸಿದವರು ಕೂಡ ಇಬ್ಬರು ಸ್ಪಿನ್ನರ್‌ಗಳೇ… ಅಕ್ಷರ್‌ ಪಟೇಲ್‌ ಮತ್ತು ಆರ್‌. ಅಶ್ವಿ‌ನ್‌. 139ಕ್ಕೆ 7 ವಿಕೆಟ್‌ ಉದುರಿ ಹೋದ ವೇಳೆ ಜತೆಗೂಡಿದ ಇವರು 114 ರನ್‌ ಜತೆಯಾಟ ನಡೆಸಿ “ಫೈಟ್‌ ಬ್ಯಾಕ್‌’ ಸಾಹಸಕ್ಕೆ ಸಾಕ್ಷಿಯಾದರು.

ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ಪಾಠ ಮಾಡಿದ ರೀತಿಯಲ್ಲಿತ್ತು ಅಕ್ಷರ್‌-ಅಶ್ವಿ‌ನ್‌ ಜೋಡಿಯ ಆಟ. ತೀವ್ರ ಎಚ್ಚರಿಕೆ, ತಾಳ್ಮೆ, ಸಾವಧಾನಚಿತ್ತ ಹಾಗೂ ಅಲ್ಲಲ್ಲಿ ಬಿರುಸಿನ ಬ್ಯಾಟಿಂಗ್‌ ಮೂಲಕ ಇವರು ಇನ್ನಿಂಗ್ಸ್‌ ಬೆಳೆಸುತ್ತ ಹೋದರು. ನಾಗ್ಪುರದಲ್ಲಿ 84 ರನ್‌ ಬಾರಿಸಿ ಮಿಂಚಿದ್ದ ಅಕ್ಷರ್‌ ಪಟೇಲ್‌ ಇಲ್ಲಿ 74 ರನ್ನುಗಳ ಬಹುಮೂಲ್ಯ ಕೊಡುಗೆ ಸಲ್ಲಿಸಿದರು. ಅವಕಾಶ ಸಿಕ್ಕಾಗಲೆಲ್ಲ ದೊಡ್ಡ ಹೊಡೆತಗಳಿಗೆ ಮುಂದಾದರು. ಪರಿಣಾಮ, 115 ಎಸೆತಗಳ ಈ ಸೊಗಸಾದ ಆಟದಲ್ಲಿ 3 ಸಿಕ್ಸರ್‌, 9 ಬೌಂಡರಿಗಳಿದ್ದವು.

ಅಕ್ಷರ್‌ಗೆ ಅಶ್ವಿ‌ನ್‌ ಅಮೋಘ ಬೆಂಬಲ ನೀಡಿದರು. 71 ಎಸೆತ ನಿಭಾಯಿಸಿ 37 ರನ್‌ ಮಾಡಿದರು (5 ಬೌಂಡರಿ). ಆಸೀಸ್‌ ನಾಯಕ ಪ್ಯಾಟ್‌ ಕಮಿನ್ಸ್‌ ಎರಡನೇ ಹೊಸ ಚೆಂಡನ್ನು ಕೈಗೆತ್ತಿಕೊಂಡವರೇ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಮುಂದಿನ ಓವರ್‌ ಎಸೆಯಲು ಬಂದ ಟಾಡ್‌ ಮರ್ಫಿ ಮತ್ತೂಂದು ದೊಡ್ಡ ಯಶಸ್ಸು ಸಂಪಾದಿಸಿದರು. ಅಕ್ಷರ್‌ ಪಟೇಲ್‌ ಅವರನ್ನು ಕಮಿನ್ಸ್‌ಗೆ ಕ್ಯಾಚ್‌ ಕೊಡಿಸಿದರು.

Advertisement

ಲಿಯಾನ್‌ಗೆ 5 ವಿಕೆಟ್‌
ನಥನ್‌ ಲಿಯಾನ್‌ ಪಡೆದ ಐದೂ ವಿಕೆಟ್‌ಗಳು ಬಹುಮೂಲ್ಯವಾಗಿದ್ದವು. ಅಗ್ರ ಕ್ರಮಾಂಕದ ಮೊದಲ ಮೂವರಾದ ರೋಹಿತ್‌ ಶರ್ಮ (32), ಕೆ.ಎಲ್‌. ರಾಹುಲ್‌ (17), ಚೇತೇಶ್ವರ್‌ ಪೂಜಾರ (0); ಬಳಿಕ ಶ್ರೇಯಸ್‌ ಅಯ್ಯರ್‌ (4) ಮತ್ತು ಶ್ರೀಕರ್‌ ಭರತ್‌ (6) ಆಸೀಸ್‌ ಸ್ಪಿನ್‌ ಮೋಡಿಗಾರನ ಬಲೆಗೆ ಬಿದ್ದರು. ಯಾರಿಗೂ ಇವರು ಬೇರೂರಲು ಅವಕಾಶ ಕೊಡಲಿಲ್ಲ. ಅದರಲ್ಲೂ ರೋಹಿತ್‌ ಮತ್ತು ಪೂಜಾರ ಅವರನ್ನು ಒಂದೇ ಓವರ್‌ನಲ್ಲಿ ವಾಪಸ್‌ ಅಟ್ಟಿದ್ದು ಅಸಾಮಾನ್ಯ ಸಾಹಸವೆನಿಸಿತು. ಪೂಜಾರ ಸೊನ್ನೆ ಸುತ್ತಿ ತಮ್ಮ 100ನೇ ಟೆಸ್ಟ್‌ ಪಂದ್ಯದಲ್ಲಿ ಕಹಿ ಅನುಭವಿಸಿದರು.
ಮೊದಲ ಟೆಸ್ಟ್‌ ಆಡುತ್ತಿದ್ದ ಮ್ಯಾಥ್ಯೂಸ್‌ ಕನೇಮನ್‌ ತಮ್ಮ ವಿಕೆಟ್‌ ಬೇಟೆಯನ್ನು ವಿವಾದಾತ್ಮಕವಾಗಿಯೇ ಆರಂಭಿಸಿದರು. ವಿರಾಟ್‌ ಕೊಹ್ಲಿ ವಿರುದ್ಧ ಬಂದ ಲೆಗ್‌ ಬಿಫೋರ್‌ ತೀರ್ಪು ಸಾಕಷ್ಟು ಅನುಮಾನಕ್ಕೆಡೆ ಮಾಡಿತ್ತು.

ಚೆಂಡು ಬ್ಯಾಟನ್ನು ಸವರಿ
ಹೋದದ್ದು ಗೋಚರಿಸುವಂತಿದ್ದರೂ ಸಂಶಯದ ಲಾಭ ಬೌಲರ್‌ ಪರವಾಗಿಯೇ ಬಂತು. ಕೊಹ್ಲಿ ಕೊಡುಗೆ 44 ರನ್‌ (84 ಎಸೆತ, 4 ಬೌಂಡರಿ). ಭಾರತ ನೋಲಾಸ್‌ 31 ರನ್‌ ಮಾಡಿದಲ್ಲಿಂದ ದಿನದಾಟ ಮುಂದುವರಿ ಸಿತ್ತು. ರಾಹುಲ್‌ ಮೊದಲಿಗರಾಗಿ ನಿರ್ಗಮಿಸಿದರು. ಬೆನ್ನಲೇ ರೋಹಿತ್‌, ಪೂಜಾರ ವಾಪಸಾದರು. ಕೊಹ್ಲಿ-ಜಡೇಜ 5ನೇ ವಿಕೆಟಿಗೆ 59 ರನ್‌ ಜತೆಯಾಟ ನಡೆಸಿ ಪರಿಸ್ಥಿತಿಯನ್ನು ಸುಧಾರಿಸಿದರು. ಜಡೇಜ ಗಳಿಕೆ 74 ಎಸೆತಗಳಿಂದ 26 ರನ್‌ (4 ಬೌಂಡರಿ).

ಹೆಡ್‌ ಬಿರುಸಿನ ಆಟ
ಗಾಯಾಳು ಡೇವಿಡ್‌ ವಾರ್ನರ್‌ ಬದಲು ಇನ್ನಿಂಗ್ಸ್‌ ಆರಂಭಿಸಲು ಬಂದ ಟ್ರ್ಯಾವಿಸ್‌ ಹೆಡ್‌ ಬಿರುಸಿನ ಆಟಕ್ಕಿಳಿದರು. 40 ಎಸೆತಗಳಿಂದ 39 ರನ್‌ ಮಾಡಿ ಆಡುತ್ತಿದ್ದಾರೆ (5 ಬೌಂಡರಿ, 1 ಸಿಕ್ಸರ್‌). ಇವರೊಂದಿಗೆ ಕ್ರೀಸ್‌ನಲ್ಲಿರುವವರು ಲಬುಶೇನ್‌ (16). ಖ್ವಾಜಾ (6) ಅವರನ್ನು ಜಡೇಜ ಬೇಗನೇ ಔಟ್‌ ಮಾಡಿದರು.

100ನೇ ಟೆಸ್ಟ್‌ನಲ್ಲಿ ಪೂಜಾರ ಝೀರೋ!
100ನೇ “ಲ್ಯಾಂಡ್‌ಮಾರ್ಕ್‌’ ಟೆಸ್ಟ್‌ ಪಂದ್ಯದಲ್ಲಿ ಚೇತೇಶ್ವರ್‌ ಪೂಜಾರ ಸೊನ್ನೆ ಸುತ್ತಿ ನಿರಾಸೆಗೊಳಿಸಿದರು. ನಥನ್‌ ಲಿಯಾನ್‌ ದ್ವಿತೀಯ ದಿನದಾಟದಲ್ಲಿ ಈ ವಿಕೆಟ್‌ ಕಿತ್ತು ಪೂಜಾರ ಅವರ ಸಂಭ್ರಮ ವನ್ನು ಕಮರುವಂತೆ ಮಾಡಿದರು. 7ನೇ ಎಸೆತದಲ್ಲಿ ಅವರನ್ನು ನಥನ್‌ ಲಿಯಾನ್‌ ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು.
ಪೂಜಾರ 100ನೇ ಟೆಸ್ಟ್‌ ಪಂದ್ಯದಲ್ಲಿ ಸೊನ್ನೆಗೆ ಔಟಾದ ವಿಶ್ವದ 8ನೇ, ಭಾರತದ 2ನೇ ಕ್ರಿಕೆಟಿಗನೆನಿಸಿದರು. ಉಳಿದವರೆಂದರೆ ವೆಂಗ್‌ಸರ್ಕಾರ್‌, ಬೋರ್ಡರ್‌, ಕೋರ್ಟ್ನಿ ವಾಲ್ಶ್, ಮಾರ್ಕ್‌ ಟೇಲರ್‌, ಸ್ಟೀಫ‌ನ್‌
ಫ್ಲೆಮಿಂಗ್‌, ಮೆಕಲಮ್‌ ಮತ್ತು ಕುಕ್‌.

ಅಶ್ವಿ‌ನ್‌ ವಿಶಿಷ್ಟ ಡಬಲ್‌
ಆರ್‌. ಅಶ್ವಿ‌ನ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 5 ಸಾವಿರ ರನ್‌ ಹಾಗೂ 700 ವಿಕೆಟ್‌ ಸಂಪಾದಿಸಿದ ವಿಶಿಷ್ಟ ಡಬಲ್‌ ಸಾಧನೆಯಿಂದ ಸುದ್ದಿಯಾದರು. ದ್ವಿತೀಯ ದಿನ ದಾಟದ ಬ್ಯಾಟಿಂಗ್‌ ವೇಳೆ ಅವರು ಈ ಮೈಲುಗಲ್ಲು ನೆಟ್ಟರು. ಅಶ್ವಿ‌ನ್‌ ಈ ಡಬಲ್ಸ್‌ ಸಾಧನೆಗೈದ ಭಾರತದ ಕೇವಲ 5ನೇ ಕ್ರಿಕೆಟಿಗ. ಉಳಿದವರೆಂದರೆ ವಿನೂ ಮಂಕಡ್‌, ಎಸ್‌. ವೆಂಕಟ ರಾಘವನ್‌, ಕಪಿಲ್‌ದೇವ್‌ ಮತ್ತು ಅನಿಲ್‌ ಕುಂಬ್ಳೆ.

ಸ್ಕೋರ್‌ ಪಟ್ಟಿ
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌ 263
ಭಾರತ ಪ್ರಥಮ ಇನ್ನಿಂಗ್ಸ್‌
ರೋಹಿತ್‌ ಶರ್ಮ ಬಿ ಲಿಯಾನ್‌ 32
ಕೆ.ಎಲ್‌. ರಾಹುಲ್‌ ಎಲ್‌ಬಿಡಬ್ಲ್ಯು ಲಿಯಾನ್‌ 17
ಚೇತೇಶ್ವರ್‌ ಪೂಜಾರ ಎಲ್‌ಬಿಡಬ್ಲ್ಯು ಲಿಯಾನ್‌ 0
ವಿರಾಟ್‌ ಕೊಹ್ಲಿ ಎಲ್‌ಬಿಡಬ್ಲ್ಯು ಕನೇಮನ್‌ 44
ಶ್ರೇಯಸ್‌ ಅಯ್ಯರ್‌ ಸಿ ಹ್ಯಾಂಡ್ಸ್‌ಕಾಂಬ್‌ ಬಿ ಲಿಯಾನ್‌ 4
ರವೀಂದ್ರ ಜಡೇಜ ಎಲ್‌ಬಿಡಬ್ಲ್ಯು ಮರ್ಫಿ 26
ಶ್ರೀಕರ್‌ ಭರತ್‌ ಸಿ ಸ್ಮಿತ್‌ ಬಿ ಬಿ ಲಿಯಾನ್‌ 6
ಅಕ್ಷರ್‌ ಪಟೇಲ್‌ ಸಿ ಕಮಿನ್ಸ್‌ ಬಿ ಮರ್ಫಿ 74
ಆರ್‌. ಅಶ್ವಿ‌ನ್‌ ಸಿ ರೆನ್‌ಶಾ ಬಿ ಕಮಿನ್ಸ್‌ 37
ಮೊಹಮ್ಮದ್‌ ಶಮಿ ಬಿ ಕನೇಮನ್‌ 2
ಮೊಹಮ್ಮದ್‌ ಸಿರಾಜ್‌ ಔಟಾಗದೆ 1
ಇತರ 19
ಒಟ್ಟು (ಆಲೌಟ್‌) 262
ಬೌಲಿಂಗ್‌: ಪ್ಯಾಟ್‌ ಕಮಿನ್ಸ್‌ 13-2-41-1
ಮ್ಯಾಥ್ಯೂ ಕನೇಮನ್‌ 21.3-4-72-2
ನಥನ್‌ ಲಿಯಾನ್‌ 29-5-67-5
ಟಾಡ್‌ ಮರ್ಫಿ 18-2-53-2
ಟ್ರ್ಯಾವಿಸ್‌ ಹೆಡ್‌ 2-0-10-0
ಆಸ್ಟ್ರೇಲಿಯ ದ್ವಿತೀಯ ಇನ್ನಿಂಗ್ಸ್‌
ಉಸ್ಮಾನ್‌ ಖ್ವಾಜಾ ಸಿ ಅಯ್ಯರ್‌ ಬಿ ಜಡೇಜ 6
ಟ್ರ್ಯಾವಿಸ್‌ ಹೆಡ್‌ ಬ್ಯಾಟಿಂಗ್‌ 39
ಮಾರ್ನಸ್‌ ಲಬುಶೇನ್‌ ಬ್ಯಾಟಿಂಗ್‌ 16
ಒಟ್ಟು (ಒಂದು ವಿಕೆಟಿಗೆ) 61
ವಿಕೆಟ್‌ ಪತನ: 1-23.
ಬೌಲಿಂಗ್‌: ಆರ್‌. ಅಶ್ವಿ‌ನ್‌ 6-1-26-0
ಮೊಹಮ್ಮದ್‌ ಶಮಿ 2-0-10-0
ರವೀಂದ್ರ ಜಡೇಜ 3-0-23-1
ಅಕ್ಷರ್‌ ಪಟೇಲ್‌ 1-0-2-0

 

 

Advertisement

Udayavani is now on Telegram. Click here to join our channel and stay updated with the latest news.

Next