Advertisement

ಏತ ನೀರಾವರಿ 2ನೇ ಯೋಜನೆಗೆ ಪರ್ವಕಾಲ

03:28 PM Mar 12, 2022 | Team Udayavani |

ಸುರಪುರ: ಕಳೆದ 4 ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬೂದಿಹಾಳ-ಪೀರಾಪುರ ಏತ ನೀರಾವರಿ ಎರಡನೇ ಯೋಜನೆ ಆರಂಭಕ್ಕೆ ಪರ್ವಕಾಲ ಕೂಡಿ ಬಂದಿದೆ. ಮಾ.19ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 2012ರಲ್ಲಿ ಈ ಯೋಜನೆಯ ಮೊದಲನೇ ಹಂತದಲ್ಲಿ 5.50 ಕೋಟಿ ಅನುದಾನ ನೀಡಿತ್ತು. ಮೊದಲ ಹಂತದ ಯೋಜನೆಯಲ್ಲಿ ತಾಳಿಕೋಟಿ ಮತ್ತು ಮುದ್ದೇಬಿಹಾಳ ತಾಲೂಕಿನ 42 ಸಾವಿರ ಎಕರೆ ಜಮೀನಿಗೆ ನೀರು ಹರಿಸಲಾಗಿದೆ.
ನಾರಾಯಣಪುರದ ಪಕ್ಕದ ಮೂರ್‍ನಾಲ್ಕು ಹಳ್ಳಿಗಳಿಗೆ ಮಾತ್ರ ಯೋಜನೆ ಲಾಭ ತಟ್ಟಿತ್ತು. ಜಲಾಶಯ ಸುರಪುರ ಕ್ಷೇತ್ರದಲ್ಲಿದ್ದರೂ ನಮ್ಮ ರೈತರಿಗೆ ಈ ಯೋಜನೆಯಿಂದ ಲಾಭ ತಟ್ಟಿರಲಿಲ್ಲ. ಇದನ್ನು ಮನಗಂಡ ಶಾಸಕ ರಾಜುಗೌಡ ಎರಡನೇ ಹಂತದ ಯೋಜನೆಗೆ 705 ಕೋಟಿ ರೂ. ಹಣ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಕ್ಷೇತ್ರದಲ್ಲಿಯೇ ಜಲಾಶಯವಿದ್ದರೂ ತಾಲೂಕಿನ ಸಾವಿರಾರು ಹೆಕ್ಟೇರ್‌ ಜಮೀನು ನೀರಾವರಿಯಿಂದ ವಂಚಿತವಾಗಿತ್ತು. ಫಲವತ್ತಾಗಿದ್ದ ಕೃಷಿ ಭೂಮಿ ನೀರು ಕಾಣದೆ ಬಂಜರು ಭೂಮಿಯಾಗಿತ್ತು.

ತಾಲೂಕಿನ ಎರಡು ಲಕ್ಷ ಹೆಕ್ಟೇರ್‌ ಜಮೀನಿಗೆ ನೀರು ಕಲ್ಪಿಸುವ ಗುರಿಯೊಂದಿಗೆ ಜಲಾಶಯ ನಿರ್ಮಿಸಲಾಗಿದೆ. 1982ರಲ್ಲಿ ಜಲಾಶಯದ ಕಾಮಗಾರಿ ಸಂಪೂರ್ಣ ಮುಗಿದಿತ್ತು. 1984ರಲ್ಲಿ ಅಂದಿನ ಮುಖ್ಯಮಂತ್ರಿ ಆರ್‌. ಗುಂಡೂರಾವ್‌ ಇದನ್ನು ಲೋಕಾರ್ಪಣೆಗೊಳಿಸಿದ್ದರು. ಆದರೆ ತರಾತುರಿ ಕಾಮಗಾರಿಯಿಂದ ತಾಲೂಕಿನ ಅರ್ಧದಷ್ಟು ಭೂಮಿ ನೀರಾವರಿಯಿಂದ ವಂಚಿತಗೊಂಡಿತ್ತು.

ನೀರಾವರಿ ವಂಚಿತ ಭೂಮಿಗಳಿಗೆ ನೀರು ಕಲ್ಪಿಸಲು 1994ರಲ್ಲಿಯೇ ಏತ ನೀರಾವರಿ ಯೋಜನೆ ಪ್ರಸ್ತಾವ ಸಲ್ಲಿಸಲಾಗಿತ್ತು. ಒತ್ತಡ ತಂದು ಯೋಜನೆಗೆ ಮಂಜೂರಾತಿ ಪಡೆಯಬಹುದಾಗಿತ್ತು. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ನನೆಗುದಿಗೆ ಬಿದ್ದಿತ್ತು.

2018ರಲ್ಲಿ ಶಾಸಕ ರಾಜುಗೌಡ ಯೋಜನೆಯ 2ನೇ ಹಂತದ ಕ್ರಿಯಾಯೋಜನೆ ಪ್ರಸ್ತಾವ ಸಲ್ಲಿಸಿದ್ದರು. ಯೋಗಾಯೋಗ ಎಂಬಂತೆ ಬಿಜೆಪಿ ಅ ಧಿಕಾರಕ್ಕೆ ಬಂತು. ರಾಜುಗೌಡ ಅವರು ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಬೆನ್ನು ಬಿದ್ದು ಮಂಜೂರಾತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಹುಣಸಗಿ ತಾಲೂಕಿನ ಕೊಮಾಲಪುರ, ಎಣ್ಣಿವಡಗೇರಾ, ಸಣ್ಣಚಾಪಿ ತಾಂಡಾ, ರಾಜನಕೋಳೂರು, ಬನ್ನೆಟ್ಟಿ, ಹೊರಟ್ಟಿ, ಕರೇಕಲ್‌, ಅಗತೀರ್ಥ, ಇಸ್ಲಾಂಪುರ, ಮುದನೂರು, ಭಪ್ಪರಗಿ, ಹಗರಟಗಿ, ಬಸ್ಸಾಪುರ, ತೀರ್ಥ, ಮಾರಲಭಾವಿ, ಮಾಳನೂರು, ಕೋಳಿಹಾಳ, ಸಾಲಗುಂದಾ, ಗುಂಡ ಲಗೇರಾ, ಅಗ್ನಿ, ಅಮಲಿಹಾಳ, ಆಲ್ಹಾಳ, ಕರಿಬಾವಿ, ಕಾಚಾಪುರ, ಬೊಮ್ಮನಹಳ್ಳಿ ಸೇರಿದಂತೆ ಸುರಪುರ-ಹುಣಸಗಿ ತಾಲೂಕಿನ 49 ಗ್ರಾಮಗಳ 62 ಲಕ್ಷ ಎಕರೆ ಜಮೀನುಗಳಿಗೆ ನೀರು ಒದಗಿಸಲಾಗುತ್ತಿದೆ.

ಇಡೀ ಕ್ಷೇತ್ರಕ್ಕೆ ನೀರೊದಗಿಸುವ ಕನಸು

ಕ್ಷೇತ್ರದಲ್ಲಿ ನೀರಾವರಿ ವಂಚಿತ ಅನೇಕ ಹಳ್ಳಿಗಳಿವೆ. ಸಾವಿರಾರು ಎಕರೆ ಜಮೀನಿಗೆ ನೀರಿಲ್ಲ. ಆ ಭಾಗದ ದೊಡ್ಡ ದೊಡ್ಡ ಹಳ್ಳಗಳಿಗೆ ಪಿಕ್‌ ಅಪ್‌, ಏತ ನೀರಾವರಿ ಯೋಜನೆಗಳಿಂದ ಇಡೀ ಕ್ಷೇತ್ರದ ಜಮೀನುಗಳಿಗೆ ನೀರು ಒದಗಿಸುವ ಕನಸನ್ನು ಶಾಸಕ ರಾಜುಗೌಡ ಹೊಂದಿದ್ದಾರೆ.

ಕಾಮಗಾರಿ ತ್ವರಿತಕ್ಕೆ ಸೂಚನೆ

ಕಾಮಗಾರಿ ಪೂರ್ಣಗೊಳಿಸಲು ಎರಡು ವರ್ಷ ಕಾಲಾವಕಾಶವಿದೆ. ಯೋಜನೆ ವಿಳಂಬ ಆಗಬಾರದೆನ್ನುವ ಉದ್ದೇಶಕ್ಕೆ ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ತ್ವರಿತವಾಗಿ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. 2023ರೊಳಗೆ ಕಾಮಗಾರಿ ಮುಗಿದು ರೈತರ ಹೊಲಗಳಿಗೆ ನೀರು ಹರಿಯಲಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಶಂಕುಸ್ಥಾಪನೆ ವಿಳಂಬವಾಗಿದೆ ಎಂದು ಶಾಸಕ ರಾಜುಗೌಡ ಸ್ಪಷ್ಟ ಪಡಿಸಿದ್ದಾರೆ.

ನಾರಾಯಣಪುರ ಜಲಾಶಯದ ಪಕ್ಕದ ಅನೇಕ ಹಳ್ಳಿಗಳು ನೀರಾವರಿಯಿಂದ ವಂಚಿತಗೊಂಡಿದ್ದವು. ಇದಕ್ಕೆ ಪ್ರಾಮಾಣಿಕ ಪ್ರಯತ್ನ ನಡೆದಿರಲಿಲ್ಲ. ಶಾಸಕನಾಗುವ ಪೂರ್ವದಿಂದಲೂ ಯೋಜನೆ ಕನಸು ಹೊಂದಿದ್ದೆ. 2012ರಲ್ಲಿ ಮಂಜೂರಾದ ಮೊದಲ ಹಂತದ ಯೋಜನೆ ನಮ್ಮ ರೈತರಿಗೆ ಅನುಕೂಲವಾಗಲಿಲ್ಲ. ಹೀಗಾಗಿ 2ನೇ ಹಂತದ ಯೋಜನೆಗೆ ಪ್ರಯತ್ನಿಸಿದ್ದೆ. ಈಗ ಸಾಕಾರಗೊಂಡಿದ್ದು ಸಂತಸವಾಗಿದೆ. -ರಾಜುಗೌಡ, ಶಾಸಕ

-ಸಿದ್ದಯ್ಯ ಪಾಟೀಲ್‌

Advertisement

Udayavani is now on Telegram. Click here to join our channel and stay updated with the latest news.

Next