Advertisement

ಹುಲಿ ಗಣತಿಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ

09:32 PM Jul 29, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೆಮರಾ ಕಣ್ಣಿಗೆ ಸೆರೆ ಸಿಕ್ಕಿದ್ದ 435 ಹುಲಿಗಳೂ ಸಹಿತ 563 ಹುಲಿಗಳ ಕುರುಹು ಪತ್ತೆಯಾಗಿದ್ದು, ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ 2ನೇ ರಾಜ್ಯವಾಗಿ ಹೊರಹೊಮ್ಮಿದೆ.

Advertisement

ಅಂತಾರಾಷ್ಟ್ರೀಯ ಹುಲಿ ದಿನದ ಅಂಗವಾಗಿ ಭಾರತೀಯ ವನ್ಯಜೀವಿ ಸಂಸ್ಥೆ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ (ಎನ್‌ಸಿಟಿಎ) ಬಿಡುಗಡೆಗೊಳಿಸಿರುವ 2022ರ ಹುಲಿ ಗಣತಿಯ ಅಂಕಿಅಂಶಗಳು ಹೊರಬಿದ್ದಿದ್ದು, ದೇಶಾದ್ಯಂತ 3,080 ಹುಲಿಗಳು ಕೆಮರಾ ಕಣ್ಣಿಗೆ ಬಿದ್ದಿದ್ದು, ಇವೂ ಸಹಿತ ಒಟ್ಟು 3,167 ಹುಲಿಗಳ ಕುರುಹು ಪತ್ತೆಯಾಗಿವೆ.
ಈ ಪೈಕಿ ಬಿಹಾರ, ಉತ್ತರಾಖಂಡ, ಉತ್ತರ ಪ್ರದೇಶ ಒಳಗೊಂಡ ಶಿವಾಲಿಕ್‌ ಬೆಟ್ಟಗಳಲ್ಲಿ 819 ಹುಲಿಗಳ ಕುರುಹು ಸಿಕ್ಕಿದ್ದು, ಮಧ್ಯ ಭಾರತ ಹಾಗೂ ಪೂರ್ವಘಟ್ಟಗಳಲ್ಲಿ 1,439 ಹುಲಿಗಳು ಪತ್ತೆಯಾಗಿವೆ. ಪಶ್ಚಿಮಘಟ್ಟಗಳಲ್ಲಿ 1,087 ಹುಲಿಗಳು ಸಿಕ್ಕರೆ, ಈಶಾನ್ಯ ರಾಜ್ಯಗಳಲ್ಲಿ 236 ಹುಲಿಗಳು ಪ್ರತ್ಯಕ್ಷವಾಗಿವೆ. ದೇಶಾದ್ಯಂತ ಸರಾಸರಿ 3,167ರಿಂದ 3,925 ಹುಲಿಗಳಿರಬಹುದು ಎಂದು ಅಂದಾಜಿಸಲಾಗಿದೆ.

ಬರೋಬ್ಬರಿ 785 ಹುಲಿಗಳನ್ನು ಹೊಂದಿರುವ ಮಧ್ಯಪ್ರದೇಶವು ಮತ್ತೆ ಮೊದಲ ಸ್ಥಾನ ಪಡೆದುಕೊಂಡಿದ್ದರೆ, 563 ಹುಲಿಗಳನ್ನು ಹೊಂದಿರುವ ಕರ್ನಾಟಕ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. 2018ರ ಗಣತಿ ಪ್ರಕಾರ ಮಧ್ಯಪ್ರದೇಶದಲ್ಲಿ 526 ಹುಲಿಗಳು ಪತ್ತೆಯಾಗಿದ್ದರೆ, ಕರ್ನಾಟಕದಲ್ಲಿ 524 ಹುಲಿಗಳು ಗಣತಿಗೆ ಸಿಕ್ಕಿದ್ದವು. ಕೇವಲ 2 ಹುಲಿಗಳ ಅಂತರದಲ್ಲಿದ್ದ ಮಧ್ಯಪ್ರದೇಶ ಹಾಗೂ ಕರ್ನಾಟಕದ ನಡುವಿನ ಅಂತರ ಈ ಬಾರಿ 222ಕ್ಕೆ ಜಿಗಿದಿದೆ.

ಪಶ್ಚಿಮ ಘಟ್ಟಗಳಲ್ಲಿ ಬೇಕಿದೆ ಇನ್ನಷ್ಟು ಸಂರಕ್ಷಣೆ
ದೇಶದಲ್ಲೇ ಅತಿ ಹೆಚ್ಚು ಜೀವವೈವಿಧ್ಯವುಳ್ಳ ಪಶ್ಚಿಮಘಟ್ಟಗಳಲ್ಲಿ ಅಭಿವೃದ್ಧಿ ಕಾರ್ಯಗಳು ಹೆಚ್ಚುತ್ತಿರುವುದರಿಂದ ವನ್ಯಜೀವಿ ಹಾಗೂ ಮಾನವರ ಬದುಕು ಪರಸ್ಪರ ಅತಿಕ್ರಮಿಸಿಕೊಳ್ಳುತ್ತಿದೆ ಎಂಬುದನ್ನು ಉಲ್ಲೇಖೀಸಿರುವ ವರದಿಯು, 2018ರ ಹುಲಿಗಣತಿ ವೇಳೆ 981 ಹುಲಿಗಳಿದ್ದ ಪಶ್ಚಿಮ ಘಟ್ಟಗಳಲ್ಲಿ ಪ್ರಸ್ತುತ 1,087 ಹುಲಿಗಳಿರಬಹುದೆಂದು ಅಂದಾಜಿಸಲಾಗಿದೆ. ಆದರೆ 824 ಹುಲಿಗಳು ಮಾತ್ರವೇ ಕೆಮರಾ ಕಣ್ಣಿಗೆ ಬಿದ್ದಿವೆ.

ವಿಶ್ವದ ಅತಿ ದೊಡ್ಡ ಹುಲಿಗಳ ತವರು ಎಂದೇ ಕರೆಯಿಸಿಕೊಳ್ಳುವ ನೀಲಗಿರಿ ಕ್ಲಸ್ಟರ್‌ನಲ್ಲೂ ಹುಲಿಗಳ ಸಂತತಿ ಕ್ಷೀಣಿಸಿದೆ. ಅಣಶಿ-ದಾಂಡೇಲಿ ಸುತ್ತಮುತ್ತಲ ಕಾಳಿ ಹುಲಿ ಸಂರಕ್ಷಿತ ಪ್ರದೇಶವನ್ನು ಹೊರತುಪಡಿಸಿ ಉಳಿದೆಡೆ ಇದೇ ಪರಿಸ್ಥಿತಿ ಇದೆ. ನಿರೀಕ್ಷಿತ ಪ್ರಮಾಣದ ಹುಲಿ ಸಂರಕ್ಷಣೆಯಾಗಿಲ್ಲ. ಬಂಡೀಪುರ (150), ನಾಗರಹೊಳೆ (141) ಪ್ರದೇಶದಲ್ಲಿ ಕೊಂಚ ಪ್ರಮಾಣದ ಸುಧಾರಣೆಯಾಗಿದ್ದರೆ, ಬಿಆರ್‌ಟಿ, ಮೂಕಾಂಬಿಕಾ, ಶರಾವತಿ, ಭದ್ರಾ, ಶಿರಸಿ ಸುತ್ತಮುತ್ತಲ ಪ್ರದೇಶಗಳಲ್ಲಿ ಗಣನೀಯ ಇಳಿಕೆ ಕಂಡಿದೆ. ಶಿರಸಿ ಸುತ್ತಮುತ್ತಲ ಪ್ರದೇಶಗಳಲ್ಲಂತೂ ಹುಲಿಗಳ ಸಂತತಿ ಅಳಿವಿನಂಚಿನಲ್ಲಿವೆ ಎಂಬುದನ್ನು ವರದಿಯು ಬೊಟ್ಟು ಮಾಡಿದೆ.

Advertisement

ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ 5 ರಾಜ್ಯಗಳು
ರಾಜ್ಯ                          2006      2010        2014       2018        2022
ಮಧ್ಯಪ್ರದೇಶ                 300          257          308        526          785
ಕರ್ನಾಟಕ                     290            300        406         524          563
ಉತ್ತರಾಖಂಡ               178             227         340        442           560
ಮಹಾರಾಷ್ಟ್ರ                103            168         190         312           444
ತಮಿಳುನಾಡು               76              163         229         264          306

ಅತಿ ಕಡಿಮೆ ಹುಲಿಗಳನ್ನು ಹೊಂದಿರುವ 5 ರಾಜ್ಯಗಳು
ರಾಜ್ಯ                            2006  2010  2014  2018  2022
ಮಿಜೋರಾಂ                    06        05      03      00      00
ಝಾರ್ಖಂಡ್‌                     00        10      03      05      01
ಗೋವಾ                             00       00       05      03      05
ಅರುಣಾಚಲ ಪ್ರದೇಶ       14       00       28      29       09
ಒಡಿಶಾ                               45       32       28      28      20

ಹುಲಿಗಳ ಗಣತಿ ಅತ್ಯಂತ ಕ್ಲಷ್ಟದ ಕೆಲಸ. ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕವು 2ನೇ ಸ್ಥಾನ ಪಡೆದಿರುವುದು ಸಂತಸದ ವಿಷಯವಾಗಿದೆ. 2018ರಲ್ಲಿ 404 ಹುಲಿಗಳು ಕೆಮರಾ ಟ್ರ್ಯಾಪ್‌ಗೆ ಸಿಕ್ಕಿದ್ದರೆ, 524 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು. ಈಗಿನ ವರದಿ ಪ್ರಕಾರ ಕೆಮರಾ ಟ್ರ್ಯಾಪ್‌ನಲ್ಲಿ 435 ಹುಲಿಗಳು ಪತ್ತೆಯಾಗಿದ್ದರೆ, ಒಟ್ಟು 563 ಹುಲಿಗಳಿರುವ ಅಂದಾಜಿದೆ.
-ಈಶ್ವರ ಖಂಡ್ರೆ, ಅರಣ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next