ಮಂಡ್ಯ: ರಾಜ್ಯದಲ್ಲಿ ಹಣ್ಣು, ಹಾಲು, ಆಹಾರ ಉತ್ಪಾದನೆ ಸಮೃದ್ಧವಾಗಿದೆ. ಆದರೆ ಅದನ್ನು ಬೆಳೆದ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಕೃಷಿ ಆರ್ಥಿಕ ತಜ್ಞ ಡಾ| ಪ್ರಕಾಶ್ ಕಮ್ಮರಡಿ ಹೇಳಿದರು.
ನಗರದ ಕೆವಿಎಸ್ ಭವನದಲ್ಲಿ ಕರ್ನಾಟಕ ಸಂಘ ವತಿಯಿಂದ ನಡೆದ ವೈ.ಕೆ.ರಾಮಯ್ಯ ಕೃಷಿ ತಜ್ಞ, ಕೃಷಿ ಪ್ರಶಸ್ತಿ ಹಾಗೂ ಎನ್.ಆರ್.ರಂಗಯ್ಯ ಸಹಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ರಾಜ್ಯದಲ್ಲಿ ತೋಟಗಾರಿಕೆ ಬೆಳೆಗಳಿಗೆ ಯಾವುದೇ ಕೊರತೆ ಇಲ್ಲ. ಕೋವಿಡ್ ಸಂದರ್ಭದಲ್ಲಿ ರೈತರು ಬೆಳೆ ಬೆಳೆಯದೆ ಮನೆಯಲ್ಲಿಯೇ ಕುಳಿತಿದ್ದರೆ ಆಹಾರಕ್ಕೆ ಹಾಹಾಕಾರ ಉಂಟಾಗುತ್ತಿತ್ತು. ರೈತ ಬೆಳೆ ಬೆಳೆದಿದ್ದರಿಂದ ಆಹಾರ, ಹಣ್ಣು, ಹಾಲು, ತರಕಾರಿ ಲಭ್ಯವಾಯಿತು. ದೇಶಕ್ಕೆ ಅನ್ನ ನೀಡುವ ರೈತನ ಜೀವನ ಸಂಕಷ್ಟದಲ್ಲಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರಕಾರದ ಯೋಜನೆಗಳು ಹಾಗೂ ನಮ್ಮ ಸಂಶೋಧನೆಗಳು ಉತ್ಪಾದನೆಯ ಕೇಂದ್ರೀಕೃತವಾಗಿದ್ದವೇ ಹೊರತು, ರೈತರ ಕೇಂದ್ರೀಕೃತವಾಗಿರಲಿಲ್ಲ. ರೈತರ ಕೇಂದ್ರೀಕೃತ ಎನ್ನುವುದಕ್ಕಿಂತ ಮನುಷ್ಯತ್ವ ಆಧಾರದ ಮೇಲೆ ಸರಕಾರದ ಯೋಜನೆಗಳು ಹಾಗೂ ಸಂಶೋಧನೆಗಳು ನಡೆದರೆ ರೈತರ ಆರ್ಥಿಕತೆ ಸುಧಾರಿಸುವ ಮೂಲಕ ರೈತರ ಆತ್ಮಹತ್ಯೆ ಕಡಿಮೆ ಮಾಡಬಹುದಾಗಿದೆ ಎಂದರು.
ಪ್ರಶಸ್ತಿ ಪ್ರದಾನ
ಸಮಾರಂಭದಲ್ಲಿ ವೈ.ಕೆ.ರಾಮಯ್ಯ ಕೃಷಿ ತಜ್ಞ ಪ್ರಶಸ್ತಿಯನ್ನು ಲಾಲ್‌ಬಾಗ್ ಉದ್ಯಾನದ ಜಂಟಿ ನಿರ್ದೇಶಕ ಡಾ| ಎಂ.ಜಗದೀಶ್, ವೈ.ಕೆ.ರಾಮಯ್ಯ ಕೃಷಿ ಪ್ರಶಸ್ತಿಯನ್ನು ಪ್ರಗತಿಪರ ಕೃಷಿಕ ದೇವಯ್ಯ ಹಾಗೂ ಎನ್.ಆರ್.ರಂಗಯ್ಯ ಸಹಕಾರ ಪ್ರಶಸ್ತಿಯನ್ನು ಹಿರಿಯ ಸಹಕಾರಿ ಜಿ.ಟಿ.ಪುಟ್ಟಸ್ವಾಮಿ ಅವರಿಗೆ ನೀಡಿ ಅಭಿನಂದಿಸಲಾಯಿತು.