Advertisement

IND V/s SA: 2ನೇ ಏಕದಿನ- 211ಕ್ಕೆ ಕುಸಿದ ಭಾರತ- ದಕ್ಷಿಣ ಆಫ್ರಿಕಾಕ್ಕೆ 8 ವಿಕೆಟ್‌ ಗೆಲುವು

12:44 AM Dec 20, 2023 | Team Udayavani |

ಕೆಬೆರಾ (ದಕ್ಷಿಣ ಆಫ್ರಿಕಾ): ಆರಂಭಿಕ ಆಟಗಾರ ಟೋನಿ ಡಿ ಝೋರ್ಝಿ ಅವರ ಅಜೇಯ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಪ್ರವಾಸಿ ಭಾರತ ತಂಡದೆದುರಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

Advertisement

ಗೆಲ್ಲಲು 212 ರನ್‌ ಗಳಿಸುವ ಸುಲಭ ಸವಾಲು ಪಡೆದ ದಕ್ಷಿಣ ಆಫ್ರಿಕಾ ತಂಡವು ಝೋರ್ಝಿ ಅವರ ಅಮೋಘ ಆಟದ ನೆರವಿನಿಂದ 42.3 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್‌ ನಷ್ಟದಲ್ಲಿ ಗುರಿ ತಲುಪಿ ಸಂಭ್ರಮಿಸಿತು. ಈ ಮೊದಲು ನಾಂಡ್ರೆ ಬರ್ಗರ್‌ ಸಹಿತ ಹರಿಣಗಳ ಬಿಗು ದಾಳಿಯೆದುರು ರನ್‌ ಗಳಿಸಲು ಒದ್ದಾಡಿದ ಭಾರತ 46.2 ಓವರ್‌ಗಳಲ್ಲಿ 211 ರನ್ನಿಗೆ ಆಲೌಟಾಗಿತ್ತು.

ಝೋರ್ಝಿ ಅವರ ಅಜೇಯ ಶತಕ ಈ ಪಂದ್ಯದ ಆಕರ್ಷಣೆಯಾಗಿತ್ತು. ಭಾರತೀಯ ದಾಳಿಯನ್ನು ತೀವ್ರವಾಗಿ ದಂಡಿಸಿದ ಅವರು 122 ಎಸೆತ ಎದುರಿಸಿ 119 ರನ್‌ ಗಳಿಸಿ ಅಜೇಯರಾಗಿ ಉಳಿದರು. ತನ್ನ ನಾಲ್ಕನೇ ಏಕದಿನ ಪಂದ್ಯವನ್ನಾಡಿದ ಅವರು 9 ಬೌಂಡರಿ ಮತ್ತು ಆರು ಸಿಕ್ಸರ್‌ ಬಾರಿಸಿ ರಂಜಿಸಿದರು. ಮೊದಲ ವಿಕೆಟಿಗೆ ರೀಜಾ ಹೆಂಡ್ರಿಕ್ಸ್‌ ಜತೆ 130 ರನ್ನುಗಳ ಜತೆಯಾಟದಲ್ಲಿ ಅವರು ಪಾಲ್ಗೊಂಡಿದ್ದರು.

ದಕ್ಷಿಣ ಆಫ್ರಿಕಾ ಮೇಲುಗೈ
ನಾಂಡ್ರೆ ಬರ್ಗರ್‌, ಬ್ಯೂರನ್‌ ಹೆಂಡ್ರಿಕ್ಸ್‌ ಮತ್ತು ಕೇಶವ್‌ ಮಹಾರಾಜ್‌ ಸೇರಿಕೊಂಡು ದಕ್ಷಿಣ ಆಫ್ರಿಕಾಕ್ಕೆ ಮೇಲುಗೈ ಒದಗಿಸಿದರು. ಒಂದು ಹಂತದಲ್ಲಿ 2ಕ್ಕೆ 114 ರನ್‌ ಮಾಡಿ ಸುಸ್ಥಿತಿಯಲ್ಲಿದ್ದ ಭಾರತ, 97 ರನ್‌ ಅಂತರದಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡಿತು.

62 ರನ್‌ ಮಾಡಿದ ಸಾಯಿ ಸುದರ್ಶನ್‌ ಭಾರತ ಸರದಿಯ ಟಾಪ್‌ ಸ್ಕೋರರ್‌. 83 ಎಸೆತ ಎದುರಿಸಿದ ಅವರು ಅತ್ಯಂತ ಜವಾಬ್ದಾರಿಯುತ ಆಟವಾಡಿದರು. ಇದರಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿತ್ತು.

Advertisement

ಸಂಕ್ಷಿಪ್ತ ಸ್ಕೋರ್‌: ಭಾರತ-46.2 ಓವರ್‌ಗಳಲ್ಲಿ 211 (ಸಾಯಿ ಸುದರ್ಶನ್‌ 62, ರಾಹುಲ್‌ 56, ಬರ್ಗರ್‌ 30ಕ್ಕೆ 2, ಹೆಂಡ್ರಿಕ್ಸ್‌ 34ಕ್ಕೆ 2, ಮಹಾರಾಜ್‌ 51ಕ್ಕೆ 2); ದಕ್ಷಿಣ ಆಫ್ರಿಕಾ 42.3 ಓವರ್‌ಗಳಲ್ಲಿ 2 ವಿಕೆಟಿಗೆ 215 (ರೀಜಾ ಹೆಂಡ್ರಿಕ್ಸ್‌ 52, ಟೋನಿ ಡಿ ಝೋರ್ಝಿ 119 ಔಟಾಗದೆ, ಡುಸನ್‌ 36).

Advertisement

Udayavani is now on Telegram. Click here to join our channel and stay updated with the latest news.

Next