Advertisement

2ನೇ ಪಂದ್ಯ: ಭಾರತ ಎ ತಂಡಕ್ಕೆ ಭರ್ಜರಿ ಜಯ

10:43 AM Jun 09, 2019 | Suhan S |

ಬೆಳಗಾವಿ: ಎರಡು ದಿನಗಳ ಹಿಂದಷ್ಟೆ ಬೆಳಗಾವಿಯ ಕೆಎಸ್‌ಸಿಎ ಮೈದಾನದಲ್ಲಿ ರನ್‌ಗಳ ಸುರಿಮಳೆ ಹರಿಸಿದ್ದ ಭಾರತ ಎ ತಂಡದ ಬ್ಯಾಟ್ಸ್‌ಮನ್‌ಗಳು ಶನಿವಾರ ಶ್ರೀಲಂಕಾ ತಂಡದ ಮೇಲೆ ಮತ್ತೂಮ್ಮೆ ಅಕ್ಷರಶಃ ಸವಾರಿ ಮಾಡಿದರು. ಆರಂಭದ ಜೋಡಿಯ ಅಮೋಘ ಶತಕದ ಜೊತೆಯಾಟದ ನೆರವಿನಿಂದ ಭಾರತ ಎ ತಂಡ ಎರಡನೇ ಪಂದ್ಯದಲ್ಲೂ ಸುಲಭ ಜಯ ಸಾಧಿಸಿತು.

Advertisement

ಇಲ್ಲಿನ ಕೆಎಸ್‌ಸಿಎ ಮೈದಾನದಲ್ಲಿ ಶ್ರೀಲಂಕಾ ಎ ತಂಡದ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಭಾರತ ಎ ತಂಡ 10 ವಿಕೆಟ್‌ಗಳ ಅಮೋಘ ಜಯ ಪಡೆಯಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 2-0ಯಿಂದ ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯ ಸೋಮವಾರ ಇದೇ ಮೈದಾನದಲ್ಲಿ ನಡೆಯಲಿದೆ.

ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಎ ತಂಡ ಶ್ರೀಲಂಕಾ ಎ ತಂಡಕ್ಕೆ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಶ್ರೀಲಂಕಾ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 242 ರನ್‌ಗಳಿಸಿತು. ತಂಡದ ಪರ ಮತ್ತೂಮ್ಮೆ ಉತ್ತಮ ಪ್ರದರ್ಶನ ನೀಡಿದ ಎಸ್‌. ಜಯಸೂರ್ಯ ಆಕರ್ಷಕ ಶತಕ ಬಾರಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಇದಕ್ಕೆ ಉತ್ತರವಾಗಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಭಾರತ ಎ ತಂಡ 33.3 ಓವರ್‌ಗಳಲ್ಲೇ ಯಾವುದೇ ವಿಕೆಟ್ ನಷ್ಟವಿಲ್ಲದೇ ಗೆಲುವಿನ ದಡ ದಾಟಿತು. ಆರಂಭದ ಜೋಡಿ ರುತುರಾಜ ಗಾಯಕವಾಡ (109 ರನ್‌)ಹಾಗೂ ಶುಭನಮ್‌ ಗಿಲ್ (ಅಜೇಯ 125)ಅವರ ಬಿರುಸಿನ ಶತಕ ಬಾರಿಸಿದರು. ಗಾಯಕವಾಡ ಅವರ ಶತಕ 78 ಎಸೆತಗಳಲ್ಲಿ 13 ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರ್‌ಗಳ ಸಹಾಯದಿಂದ ಬಂದಿತು.

ಶ್ರೀಲಂಕಾದ 242 ರನ್‌ಗಳು ಭಾರತ ತಂಡಕ್ಕೆ ಯಾವ ಹಂತದಲ್ಲೂ ಕಠಿಣ ಸವಾಲಾಗಿ ಕಾಣಲೇ ಇಲ್ಲ. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಭಾರತದ ಆರಂಭಿಕರು ಆರನೇ ಓವರಿನಲ್ಲಿಯೇ ತಂಡದ ಅರ್ಧಶತಕ ಪೂರೈಸಿದರು. ಭಾರತದ ಬ್ಯಾಟ್ಸಮನ್‌ಗಳು ಶ್ರೀಲಂಕಾದ ದುರ್ಬಲ ಬೌಲಿಂಗ್‌ ಹಾಗೂ ಕ್ಷೇತ್ರರಕ್ಷಣೆಯ ಲಾಭ ಪಡೆದುಕೊಂಡರು. ರುತುರಾಜ ಗಾಯಕವಾಡ ಹಾಗೂ ಗಿಲ್ ಜೋಡಿಯನ್ನು ಮುರಿಯಲು ಲಂಕಾ ನಾಯಕ ಮಾಡಿದ ಎಲ್ಲ ತಂತ್ರಗಳು ವಿಫಲವಾದವು. ಭಾರತ ಎ ತಂಡದ ಮೊದಲ 100 ರನ್‌ 13.1 ಓವರಿನಲ್ಲಿ ಬಂದರೆ ದ್ವಿಶತಕ ಕೇವಲ 27.2 ಓವರ್‌ನಲ್ಲಿ ದಾಖಲಾಯಿತು. ತಂಡದ ಮೊತ್ತ 226 ಆಗಿದ್ದಾಗ ಶುಬಮನ್‌ ಗಿಲ್ ಗಾಯಗೊಂಡು ನಿವೃತ್ತರಾದರು. ನಂತರ ನಡೆದಿದ್ದು ಔಪಚಾರಿಕ ಆಟ, ರುತುರಾಜ ಗಾಯಕವಾಡ ಬಾಕಿ ಉಳಿದಿದ್ದ ರನ್‌ಗಳನ್ನು ನಿರಾಂತಕವಾಗಿ ಮುಗಿಸಿ ಭಾರತಕ್ಕೆ ಜಯ ತಂದುಕೊಟ್ಟರು. ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿದ ಗಿಲ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಗಾಯಕವಾಡ 94 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್‌ ಸಹಾಯದಿಂದ ಅಜೇಯ 125 ರನ್‌, ಶುಭಮನ್‌ ಗಿಲ್ 96 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ ಅಜೇಯ 109 ರನ್‌ಗಳಿಸಿದರು.

ಆರಂಭಿಕ ಆಘಾತ: ಟಾಸ್‌ ಸೋತು ಬ್ಯಾಟಿಂಗ್‌ಗೆ ಕಳಿಸಲ್ಪಟ್ಟ ಶ್ರೀಲಂಕಾಗೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ಮೊತ್ತ ಆರು ರನ್‌ ಆಗಿದ್ದಾಗ ನಿರೋಶನ್‌ ಡಿಕ್ವೆಲ್ಲಾ (5) ನಿರ್ಗಮಿಸಿದರು. ನಂತರದ ಬ್ಯಾಟ್ಸಮನ್‌ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿದರು. ತಂಡದ ಮೊತ್ತ ಕೇವಲ 81 ರನ್‌ಗಳಾಗಿದ್ದಾಗ ಆರು ಬ್ಯಾಟ್ಸಮನ್‌ಗಳು ಔಟಾಗಿದ್ದರು. ನಾಯಕ ಅಶನ್‌ ಪ್ರಿಯಂಜನ್‌ (5) ಕೆಟ್ಟ ಹೊಡೆತಕ್ಕೆ ಬೆಲೆತೆತ್ತರು. ನಂತರ ಜೊತೆಗೂಡಿದ ಸೇಹಾನ್‌ ಜಯಸೂರ್ಯ ಹಾಗೂ ಇಶಾನ್‌ ಜಯರತ್ನೆ ತಂಡಕ್ಕೆ ಆಸರೆಯಾದರು. ಜಯಸೂರ್ಯ 28 ರನ್‌ ಗಳಿಸಿದ್ದಾಗ ಅವರ ಕ್ಯಾಚ್ ಕೈಚೆಲ್ಲಿದ್ದು ಭಾರತಕ್ಕೆ ದುಬಾರಿ ಆಯಿತು. ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಜಯಸೂರ್ಯ ಅತ್ಯುತ್ತಮ ಶತಕ ಪೂರೈಸಿ ತಂಡ ಸವಾಲಿನ ಮೊತ್ತ ಗಳಿಸುವಲ್ಲಿ ನೆರವಾದರು. ಜಯಸೂರ್ಯ ಹಾಗೂ ಇಶಾನ್‌ ಜಯರತ್ನೆ (ಅಜೇಯ 79) ಆರನೇ ವಿಕೆಟ್‌ಗೆ ಬಹುಮೂಲ್ಯ 141 ರನ್‌ ಸೇರಿಸಿದರು. ಆಗ ವೈಯಕ್ತಿಕವಾಗಿ 101 ರನ್‌ಗಳಿಸಿದ್ದ ಜಯಸೂರ್ಯ ಅವರು ದೀಪಕ್‌ ಹೂಡಾ ಬೌಲಿಂಗ್‌ನಲ್ಲಿ ಪ್ರಶಾಂತ ಚೋಪ್ರಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 73 ಎಸೆತಗಳಲ್ಲಿ 79 ರನ್‌ಗಳಿಸಿ ಅಜೇಯರಾಗಿ ಉಳಿದ ಇಶಾನ್‌ ಜಯರತ್ನೆ ಎಳು ಬೌಂಡರಿ ಹಾಗೂ ಒಂದು ಸಿಕ್ಸರ್‌ ಹೊಡೆದರು.

Advertisement

•ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next