Advertisement

3 ದಿನದಲ್ಲಿ 2ನೇ ಹಂತದ ಸಮೀಕ್ಷಾ ವರದಿ

06:40 PM Sep 24, 2020 | Team Udayavani |

ರಾಯಚೂರು: ಈಗಾಗಲೇ ಜಿಲ್ಲೆಯಲ್ಲಿ ಮಳೆಯಿಂದಾದ ಹಾನಿ ಸಮೀಕ್ಷೆ ನಡೆಸಿದ್ದು, 79 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈಗ ಸುರಿದ ಮಳೆಯ ಸಮೀಕ್ಷೆ ಕಾರ್ಯ ನಡೆದಿದ್ದು, ಮೂರು ದಿನದಲ್ಲಿ ಕೈ ಸೇರಲಿದೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ್‌ ತಿಳಿಸಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸತತ ಮಳೆ ಸುರಿದ ಪರಿಣಾಮ ಸಾಕಷ್ಟು ಹಾನಿಯಾಗಿದೆ. ಬೆಳೆ, ಮನೆ ಹಾನಿಗಳ ಕುರಿತು ವಿವಿಧ ಇಲಾಖೆಗಳ ನೇತೃತ್ವದಲ್ಲಿ ಸಮೀಕ್ಷೆ ನಡೆದಿದೆ. ಮೂರು ದಿನಗಳಲ್ಲಿ ಅಂತಿಮ ವರದಿ ಕೈ ಸೇರಲಿದೆ. ಹಿಂದೆ ಉಂಟಾದ 79 ಕೋಟಿ ಹಾನಿಗೆ ಪರಿಹಾರ ಕೋರಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಈಗಿನ ಹಾನಿ ಸೇರಿಸಿ ಪುನಃ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಮಿಡಲಗದಿನ್ನಿ, ಇಡಪನೂರು ಸೇರಿದಂತೆ ಜಲಾವೃತವಾದ ಗ್ರಾಮಗಳ ಜನರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. ಮನೆ ಬಿದ್ದಲ್ಲಿ, ಮನೆಗಳಿಗೆ ನೀರು ನುಗ್ಗಿದಲ್ಲಿ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಜಹೀರಬಾದ್‌, ಸಿಯಾತಲಾಬ್‌, ಜಲಾಲ ನಗರ, ನೀರಭಾವಿ ಕುಂಟಾ ಸೇರಿದಂತೆ ಅನೇಕ ಬಡಾವಣೆಗಳಿಗೆ ಮಳೆ ನೀರು ನುಗ್ಗಿತ್ತು. ಮಳೆ ನೀರು ಸರಾಗವಾಗಿ ಹರಿಯಲು ಇರುವ ಸಮಸ್ಯೆಗಳನ್ನು ಗುರುತಿಸಲಾಗಿದೆ. ರಾಜಕಾಲುವೆ ಸ್ವತ್ಛತೆಗೆ ಅಂದಾಜು ಪಟ್ಟಿ ಸಲ್ಲಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಆರ್‌ಟಿಒ ಕಚೇರಿಯಿಂದ ನೀರು ಹರಿದು ಬರಲು ಸರಿಯಾದ ವ್ಯವಸ್ಥೆಯಿಲ್ಲ. ಮಾವಿನಕೆರೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಚರಂಡಿಗಳಲ್ಲಿ ಮಣ್ಣು ತುಂಬಿದೆ. ಏಕಾಏಕಿ ಹೆಚ್ಚು ನೀರು ಬಂದಿರುವುದರಿಂದ ಚರಂಡಿ ಮೇಲೆ ನೀರು ಹರಿದು ಮನೆಗಳಿಗೆ ನುಗ್ಗಿದೆ. ನೀರು ಹರಿಯುವಿಕೆಯ ಮೂಲಗಳನ್ನು ಪತ್ತೆ ಮಾಡಿ, ಸರಾಗವಾಗಿ ನೀರು ಹರಿಯುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಇಎಸ್‌ಐ ಆಸ್ಪತ್ರೆ ಸ್ಥಳಾಂತರಕ್ಕೆ ಸೂಚಿಸಲಾಗಿದೆ. ನಿವೇಶನ ಗುರುತಿಸಿ ಪ್ರಸ್ತಾವನೆ ಸಲ್ಲಿಸಿದರೆ ಭೂಮಿ ನೀಡಲು ಜಿಲ್ಲಾಡಳಿತ ಸಿದ್ಧ. ಇನ್ನು ಐತಿಹಾಸಿಕ ಪಂಚಬೀಬಿ ಪಹಡ್‌ ಕಟ್ಟಡ ಕುಸಿದು ಬಿದ್ದಿರುವ ಕುರಿತು ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಕುಕುನೂರು ರಸ್ತೆ ದುರಸ್ತಿ ಕ್ರಮ: ತಾಲೂಕಿನ ಕುಕುನೂರು ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಪಿಆರ್‌ ಇಡಿ ವಿಭಾಗದಿಂದ ಮೂರು ಕಿಮಿ ರಸ್ತೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸಿ ಒಂದು ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ವೈಟಿಪಿಎಸ್‌ ದತ್ತು ಗ್ರಾಮಗಳ ವ್ಯಾಪ್ತಿಗೆ ಬರುವುದರಿಂದ ಅಧಿಕಾರಿಗಳ ಜತೆ ಚರ್ಚಿಸಿ ರಸ್ತೆ ದುರಸ್ತಿ ಹಾಗೂ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.

ವಿಮಾನ ನಿಲ್ದಾಣ ಅಡೆತಡೆಗಳಿಲ್ಲ :  ಸಮೀಪದ ಯರಮರಸ್‌ ಬಳಿ ನಿರ್ಮಿಸುತ್ತಿರುವ ವಿಮಾನ ನಿಲ್ದಾಣಕ್ಕೆ ಯಾವುದೇ ಅಡೆತಡೆಗಳಿಲ್ಲ ಎಂದು ಓಎಲ್‌ಎಕ್ಸ್‌ ಸಂಸ್ಥೆ ತಜ್ಞರು ತಿಳಿಸಿದ್ದಾರೆ. 44 ಸಣ್ಣ ಪುಟ್ಟ ಅಡೆತಡೆಗಳನ್ನು ಗುರುತಿಸಿದ್ದಾರೆ. ಎರಡೂ¾ರು ವಿದ್ಯುತ್‌ ಕಂಬಗಳನ್ನು ತೆರವು ಮಾಡಬೇಕಿದ್ದು, ಅದಕ್ಕೆ ತಗುಲುವ ಖರ್ಚಿನ ಅಂದಾಜು ಪಟ್ಟಿ ಸಿದ್ಧಪಡಿಸಿ ಸಲ್ಲಿಸಲಾಗಿದೆ. ಹೆಚ್ಚುವರಿ ಭೂಮಿ ಖರೀದಿ ಮಾಡಬೇಕಾಗುವ ಸಾಧ್ಯತೆ ಇದ್ದು, ಅದಕ್ಕೆ ಯಾವುದೇ ಸಮಸ್ಯೆ ಇಲ್ಲ. ಭೂ ದಾಖಲೆಗಳಲ್ಲಿಯೂ ಯರಮರಸ್‌ ವಿಮಾನ ನಿಲ್ದಾಣವೆಂದು ನಮೂದಿಸಲಾಗಿದೆ. ಜಮೀನು ಸರ್ವೇ ನಂತರ ಒತ್ತುವರಿ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next