ಉಡುಪಿ: “ಧರ್ಮ ಸಂಸದ್’ ವಿಶ್ವ ಹಿಂದೂ ಪರಿಷತ್ತಿನ ಪರಿಕಲ್ಪನೆ. ಹಿಂದೂ ಸಮಾಜದ ವಿವಿಧ ಸಂಪ್ರದಾಯಗಳ ಸ್ವಾಮೀಜಿಯವರು ಒಂದೆಡೆ ಸೇರಿ ಸಮಕಾಲೀನ ಸಮಸ್ಯೆಗಳ ಬಗೆಗೆ ನಿರ್ಣಯ ತಳೆಯುವ ಸಾಧು ಸಂತರ ಸಮ್ಮೇಳನವೇ ಧರ್ಮ ಸಂಸದ್. ಧಾರ್ಮಿಕ ನಾಯಕರ ಲೋಕಸಭೆ ಎಂದು ಹೇಳಬಹುದು.
ಮುಂಬಯಿ ಪೊವಾçಯ ಸಾಂದೀಪನಿ ಸಾಧನಾಲಯದಲ್ಲಿ 1964ರ ಆಗಸ್ಟ್ 29ರಂದು ಶ್ರೀಕೃಷ್ಣ ಜನ್ಮಾಷ್ಟಮಿ ದಿನ ವಿಶ್ವ ಹಿಂದೂ ಪರಿಷದ್ ಜನ್ಮತಳೆಯಿತು. 1984ರ ಎಪ್ರಿಲ್ 7, 8ರಂದು ಹೊಸದಿಲ್ಲಿಯಲ್ಲಿ ಮೊದಲ ಧರ್ಮಸಂಸದ್ ಅಧಿವೇಶನ ನಡೆಯಿತು. ಅಂದಿನಿಂದ ಇದುವರೆಗೆ 14 ಧರ್ಮಸಂಸದ್ ಅಧಿವೇಶನಗಳು ನಡೆದಿವೆ. ಎರಡನೇ ಧರ್ಮಸಂಸದ್ 1985ರಲ್ಲಿ ಉಡುಪಿಯಲ್ಲಿ ನಡೆದರೆ ಈಗ 15ನೇ ಧರ್ಮಸಂಸದ್ ಮತ್ತೆ ಉಡುಪಿಯಲ್ಲಿ ನಡೆಯುತ್ತಿದೆ.
ವಿಶ್ವ ಹಿಂದೂ ಪರಿಷದ್‌ನ ಸ್ಥಾಪನಾ ದಿನದ ಸಮಾವೇಶದಲ್ಲಿ ಪಾಲ್ಗೊಂಡ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು 1969ರಲ್ಲಿ ಪ್ರಥಮ ವಿಶ್ವ ಹಿಂದೂ ಪರಿಷದ್ ಪ್ರಾಂತ ಸಮ್ಮೇಳನ, ಸಂತ ಸಮ್ಮೇಳನ ಮತ್ತು 1985ರಲ್ಲಿ ಎರಡನೇ ಧರ್ಮಸಂಸದ್‌ಗೆ ನೇತೃತ್ವ ಕೊಟ್ಟು ಈಗ 87ರ ಹರೆಯದಲ್ಲಿ 15ನೆಯ ಧರ್ಮಸಂಸದ್‌ಗೆ ಮಾರ್ಗದರ್ಶನ ಕೊಡಲು ಅಣಿಯಾಗಿದ್ದಾರೆ.
1985ರ ಬಳಿಕ ಬಹುತೇಕ ಧರ್ಮಸಂಸದ್ ಅಧಿವೇಶನಗಳು ಉತ್ತರ ಭಾರತದ ಕುಂಭಮೇಳದ ಅವಧಿಯಲ್ಲಿ ನಡೆದಿವೆ. ಗುಜರಾತ್, ಹರಿದ್ವಾರ, ತಮಿಳುನಾಡಿನಲ್ಲಿಯೂ ನಡೆದಿವೆ. ಸಾಮಾನ್ಯವಾಗಿ 2-3 ವರ್ಷಗಳಿಗೊಮ್ಮೆ ನಡೆಯುವ ಧರ್ಮಸಂಸದ್ ಸಮಕಾಲೀನ ಸಮಸ್ಯೆಗಳ ಬಗೆಗೆ ಚರ್ಚಿಸಿ ನಿರ್ಣಯ ತಳೆಯುತ್ತದೆ. ಸಮಸ್ಯೆಗಳು ತೀವ್ರ ಇದ್ದಾಗ ಪ್ರತಿವರ್ಷ ಸಭೆ ಸೇರುವುದೂ ಇದೆ. ಉದಾಹರಣೆಗೆ ರಾಮಜನ್ಮಭೂಮಿ ಸಮಸ್ಯೆ ತೀವ್ರವಿದ್ದಾಗ ಪ್ರತಿವರ್ಷ ಸಭೆ ಸೇರಿದ್ದೂ ಇದೆ.
1985ರ ಧರ್ಮಸಂಸದ್ ಸಭೆ ಅಯೋಧ್ಯಾ ರಾಮಜನ್ಮಭೂಮಿಯ ಬೀಗವನ್ನು ತೆರೆಯಲು ನಿರ್ಣಯ ತಳೆದಿತ್ತು. ಬಳಿಕ ಸರಕಾರವೇ ಬೀಗಮುದ್ರೆಯನ್ನು ತೆರೆಯುವಂತೆ ಆಯಿತು. ಸುಮಾರು ಮೂರು ದಶಕಗಳ ಬಳಿಕವೂ ಅಯೋಧ್ಯೆ ವಿಷಯಕ್ಕೇ ಸಂಬಂಧಿಸಿ ನಿರ್ಣಯ ತಳೆಯುವ ವಾತಾವರಣ ಇದೆ. 1985ರಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಸಂತರು ಪಾಲ್ಗೊಂಡು ನಿರ್ಣಯ ತಳೆದಿದ್ದರೆ ಈ ಬಾರಿ ಜಾಗ ಸಾಲದ ಕಾರಣ ಕಲ್ಸಂಕ ರೋಯಲ್ ಗಾರ್ಡನ್‌ನಲ್ಲಿ ಧರ್ಮಸಂಸದ್ ಅನಾವರಣಗೊಳ್ಳಲಿದೆ.
ಮಟಪಾಡಿ ಕುಮಾರಸ್ವಾಮಿ