Advertisement

ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಕೊವಿಡ್ ನಿಗ್ರಹ ಔಷಧ ‘2ಡಿಜಿ’ ಇಂದು ಬಿಡುಗಡೆ

07:38 AM May 17, 2021 | Team Udayavani |

ಹೊಸದಿಲ್ಲಿ: ಭಾರತದ ಕೊರೊನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಮೈಲುಗಲ್ಲು ಎಂಬಂತೆ ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ಕೊರೊನಾ ನಿಗ್ರಹ ಔಷಧದ (2ಡಿಜಿ)10  ಸಾವಿರ ಪ್ಯಾಕೆಟ್‌ಗಳು ಸೋಮವಾರ ಬಿಡುಗಡೆಯಾಗಲಿದೆ.

Advertisement

ಔಷಧದ ಮೊದಲ ಬ್ಯಾಚ್‌ ಅನ್ನು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌ ಅನಾವರಣ ಮಾಡಲಿದ್ದಾರೆ.

ಪ್ರಸಕ್ತ ತಿಂಗಳ ಆರಂಭದಲ್ಲಷ್ಟೇ ಇದರ ತುರ್ತು ಬಳಕೆಗೆ ಒಪ್ಪಿಗೆ ಸಿಕ್ಕಿತ್ತು. ಹೈದರಾಬಾದ್‌ನ  ಡಾ|ರೆಡ್ಡೀಸ್‌ ಲ್ಯಾಬೊರೆಟರಿ 2ಡಿಜಿಯನ್ನು ಉತ್ಪಾದಿಸುತ್ತಿದೆ. ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳ ಕ್ಷಿಪ್ರ ಚೇತರಿಕೆಗೆ ಹಾಗೂ ಅವರ ಆಮ್ಲಜನಕದ ಅವಲಂಬನೆ ತಗ್ಗಿಸಲು ಪೌಡರ್‌ ರೂಪದ ಈ ಔಷಧ ನೆರವಾಗಲಿದೆ.

ಔಷಧ ಹೇಗೆ ಕೆಲಸ ಮಾಡುತ್ತದೆ?

2-ಡಿಜಿ ಮಾಲಿಕ್ಯೂಲ್‌ ಅನ್ನು ಟ್ಯೂಮರ್‌, ಕ್ಯಾನ್ಸರ್‌ ಕೋಶಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಇದು ನೋಡಲು ಗ್ಲುಕೋಸ್‌ ರೀತಿ ಇದ್ದರೂ ಗ್ಲುಕೋಸ್‌ ಅಲ್ಲ. ಮಾನವನ ಶರೀರದೊಳಗೆ ಪ್ರವೇಶಿಸಿದ ಕೊರೊನಾ ವೈರಸ್‌ ತನ್ನ ಸಂಖ್ಯೆ ವೃದ್ಧಿಸಿಕೊಳ್ಳಬೇಕೆಂದರೆ ಅದಕ್ಕೆ ಗ್ಲುಕೋಸ್‌ನ ಅಗತ್ಯವಿರುತ್ತದೆ. 2ಡಿಜಿ ಔಷ ಧವು ದೇಹ ಪ್ರವೇಶಿಸುತ್ತಿದ್ದಂತೆ, ಕೊರೊನಾ ವೈರಸ್‌ ಇದನ್ನು ಗ್ಲುಕೋಸ್‌ ಎಂದು ಭಾವಿಸಿ  ಸೇವಿಸುತ್ತದೆ. ಆದರೆ, ಈ ಔಷಧವು ವೈರಸ್‌ನೊಳಗೆ ಹೋಗಿ ಅದರ ಸಂತಾನೋತ್ಪತ್ತಿ ಆಗದಂತೆ ತಡೆಯುತ್ತದೆ.

Advertisement

ಆಕ್ಸಿ ಜನ್‌ ಮಟ್ಟಕ್ಕೂ ಇದಕ್ಕೂ ಏನು ಸಂಬಂಧ?

ವೈರಸ್‌ ಯಾವಾಗ ವೇಗವಾಗಿ ದ್ವಿಗುಣಗೊಳ್ಳುತ್ತಾ ಸಾಗುತ್ತದೋ, ಆ ಸಮಯದಲ್ಲಿ ದೇಹಕ್ಕೆ ಆಮ್ಲಜನಕದ ಅಗತ್ಯತೆ ಹೆಚ್ಚಾಗುತ್ತದೆ. 2ಡಿಜಿ ಔಷಧದಿಂದ ವೈರಸ್‌ನ ಉತ್ಪತ್ತಿ ಪ್ರಕ್ರಿಯೆ ಸ್ಥಗಿತಗೊಳ್ಳುವ ಕಾರಣ, ಆಮ್ಲಜನಕದ ಸಮಸ್ಯೆಯೂ ಇಲ್ಲವಾಗುತ್ತದೆ. ಈ ಔಷಧವು ಎಲ್ಲ ರೀತಿಯ ರೂಪಾಂತರಿಗಳ ಮೇಲೂ ಪರಿಣಾಮಕಾರಿ ಎನ್ನುತ್ತಾರೆ ಇನ್‌ಸ್ಟಿಟ್ಯೂಟ್‌ ಆಫ್ ನ್ಯೂಕ್ಲಿಯರ್‌ ಮೆಡಿಸಿನ್‌ ಆ್ಯಂಡ್‌ ಅಲೈಡ್‌ ಸೈನ್ಸಸ್‌ ನಿರ್ದೇಶಕ ಡಾ| ಅನಿಲ್‌ ಮಿಶ್ರಾ.

ಬಳಕೆ ಹೇಗೆ?

2ಡಿಜಿ ಔಷಧವು ಗ್ಲುಕೋಸ್‌ ಪೌಡರ್‌ನಂತೆಯೇ ಇರುತ್ತದೆ. ದಿನಕ್ಕೆ ಎರಡು ಬಾರಿ ನೀರಿನಲ್ಲಿ ಬೆರೆಸಿ ಇದನ್ನು ಕುಡಿಯಬೇಕು. ಕೊರೊನಾ ಸೋಂಕಿತ ಸಂಪೂರ್ಣ ಗುಣಮುಖನಾಗಲು ಸತತ 5ರಿಂದ 7 ದಿನಗಳ ಕಾಲ ಸೇವಿಸಬೇಕಾಗುತ್ತದೆ. ಈ ಔಷಧದ ಒಂದು ಪ್ಯಾಕೆಟ್‌ನಲ್ಲಿ 5.85  ಗ್ರಾಂ. ಪೌಡರ್‌ ಇರುತ್ತದೆ. ಇದನ್ನು  25 ಡಿ.ಸೆ.ಗಿಂತ ಕಡಿಮೆ ತಾಪಮಾನದಲ್ಲಿ ದಾಸ್ತಾನಿಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next