ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ 7ನೇ ಹಂತದ ಹೋರಾಟಕ್ಕಾಗಿ ಸೆ.22 ರಂದು ಬೆಳಗಾವಿಯಲ್ಲಿ ವಕೀಲರ ಸಭೆ ಆಯೋಜಿಸಲಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು.
ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕಳೆದ ಮೂರುವರೆ ವರ್ಷದಿಂದ ವಿವಿಧ ರೀತಿಯಲ್ಲಿ ಹೋರಾಟ ನಡೆಸಿದ್ದೇವೆ. ಭವಿಷ್ಯದಲ್ಲಿ ನಮ್ಮ ಹೋರಾಟ ತೀವ್ರತೆ ಪಡೆಯಲಿದೆ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ನಮ್ಮ ಸಮುದಾಯದ ಶಾಸಕರು ಎರಡು ಬಾರಿ ಮಾತನಾಡಿದ್ದರೂ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ನಮಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸಿಲ್ಲ, ಸಮುದಾಯದ ಶಾಸಕರು ಸದನದಲ್ಲಿ ಪ್ರಶ್ನೆ ಕೇಳಲು ಮುಂದಾದಾಗ ಸಭಾಧ್ಯಕ್ಷರು ಅವಕಾಶ ನೀಡಿಲ್ಲ. ಶಾಸಕಾಂಗ ಸಭೆಯಲ್ಲಿ ಚರ್ಚಿಸಿ ಒತ್ತಾಯ ಮಾಡಿದರೂ ಸ್ಪಂದಿಸಿಲ್ಲ ಎಂದು ಹರಿಹಾಯ್ದರು.
ಹೀಗಾಗಿ ಹೋರಾಟದ ಮುಂದಿನ ನಡೆಗಾಗಿ ಸೆ. 22 ರಂದು ಸಮುದಾಯದ ವಕೀಲರ ಸಭೆ ನಡೆಸುತ್ತಿದ್ದೇವೆ. ಸಮುದಾಯದ ವಕೀಲರ ಮೂಲಕ ಬಿಸಿ ಮುಟ್ಟಿಸಿ, ಸರ್ಕಾರದ ಕಣ್ಣು ತೆರೆಸುವ ಹೋರಾಟಕ್ಕೆ ಅಣಿಯಾಗಿದ್ದೇವೆ ಎಂದರು.
ನಮ್ಮ ಹೋರಾಟ ಬಿಜೆಪಿ ಸರ್ಕಾರದಲ್ಲಿ ಹೆಚ್ಚು, ಕಾಂಗ್ರೆಸ್ ಸರ್ಕಾರದಲ್ಲಿ ಕಡಿಮೆ ಎಂದೇನೂ ಇಲ್ಲ. ಬೊಮ್ಮಾಯಿ ಅವರಿಗೆ ನಮ್ಮ ಸಮಾಜದ ಬಗ್ಗೆ ಹೆಮ್ಮೆ ಇದ್ದ ಕಾರಣವೇ ಸ್ಪಂದಿಸಿದ್ದರು. ಕಾಂಗ್ರೆಸ್ ಸರ್ಕಾರದ ಹೊಸದಾಗಿ ಬಂದಿರುವ ಕಾರಣ ಏಕಾಏಕಿ ಹೋರಾಟ ಮಾಡದೇ ಕಾಲಾವಕಾಶ ನೀಡಿದ್ದೇವೆ ಎಂದರು.
ಹೋರಾಟಕ್ಕೆ ಸಮಾಜದ ಕಾಂಗ್ರೆಸ್ ಶಾಸಕರು ಬೆಂಬಲ ನೀಡುವಲ್ಲಿ ಈ ಹಿಂದೆ ಬೆಂಬಲ ನೀಡಿದವು ಈಗ ನೀಡುತ್ತಿಲ್ಲ, ಕಾರಣ ಏನೆಂದು ಗೊತ್ತಿಲ್ಲ. ಇದೀಗ ಶಾಸಕರು ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೂ ಆಗಿರುವ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧವೂ ಹೆಸರು ಪ್ರಸ್ತಾಪಿಸದೆ ಹರಿಹಾಯ್ದರು.
ಸಮುದಾಯದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಸಕ್ಕರೆ ಕಾರ್ಖಾನೆ ವಿರುದ್ಧ ಸರ್ಕಾರದ ಕ್ರಮದ ಕುರಿತು ಮಾತನಾಡಿದ ಶ್ರೀಗಳು, ಯತ್ನಾಳ ಅವರ ಸಕ್ಕರೆ ಕಾರ್ಖಾನೆಗೆ ಸರ್ಕಾರ ಅಡಚಣೆ ಉಂಟು ಮಾಡಬಾರದು. ಶಾಸಕ ಯತ್ನಾಳ, ಸಚಿವ ಶಿವಾನಂದ ಪಾಟೀಲ ಇಬ್ಬರೂ ನಮ್ಮ ಸಮುದಾಯದ ನಾಯಕರು. ರೈತರ ಪರವಾಗಿರುವವರಿಗೆ ಸಹಾಯ ಮಾಡಬೇಕು ಎಂದರು.
ಸದನ ಒಳಗೂ, ಹೊರಗೂ ನೇರವಾಗಿ ಮಾತನಾಡುವ ಶಾಸಕ ಬಸನಗೌಡ ಯತ್ನಾಳ ರಾಜಕೀಯವಾಗಿ ಬೆಳೆಯುತ್ತಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ನಾನು ಬಸವಣ್ಣನ ಅನುಯಾಯಿ, ಬಸವ ಸಿದ್ದಾಂತ ಪ್ರತಿಪಾದಿಸುವವನು ಎಂದು ಸ್ಪಷ್ಟಪಡಿಸಿದ ಬಸವಜಯ ಮೃತ್ಯುಂಜಯ ಶ್ರೀಗಳು, ಬಸವ ಪಂಚಮಿ ಆಚರಣೆ, ಸ್ವಾಮೀಜಿ ಟ್ರೋಲ್ ವಿಚಾರದಲ್ಲಿ ಯಾವುದೇ ಉತ್ತರ ನೀಡಿಲ್ಲ ಎಂದರು.