ರಬಾತ್: ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮ ಕನಿಷ್ಠ 296 ಮಂದಿ ಮೃತಪಟ್ಟಿರುವ ಘಟನೆ ಮೊರಾಕ್ಕೋದ ಮರಕೇಶ್ನ ನೈಋತ್ಯ ಭಾಗದಲ್ಲಿ ಸಂಭವಿಸಿದೆ.
ಶುಕ್ರವಾರ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಈ ಭೂಕಂಪನದಲ್ಲಿ ಕನಿಷ್ಠ 296 ಮಂದಿ ಮೃತಪಟ್ಟಿದ್ದಾರೆ ಎಂದು ಮೊರಾಕೊದ ಆಂತರಿಕ ಸಚಿವಾಲಯ ಶನಿವಾರ (ಸೆ.9 ರಂದು) ಮುಂಜಾನೆ ಹೇಳಿದೆ.
ಇದಲ್ಲದೆ 153 ಮಂದಿಗೆ ಗಾಯಗಳಾಗಿದೆ. ಸದ್ಯ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ನಗರದ ಹೊರಭಾಗದ ಕಟ್ಟಡಗಳಿಗೆ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಆಂತರಿಕ ಸಚಿವಾಲಯ ಹೇಳಿದೆ.
ರಾತ್ರಿ 11:11 ರ ವೇಳೆಯಲ್ಲಿ 43.5 ಮೈಲಿ (70 ಕಿಲೋಮೀಟರ್) ದೂರದಲ್ಲಿ 18.5 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕಾದ ಭೂವಿಜ್ಞಾನ ಇಲಾಖೆ ತಿಳಿಸಿದೆ.
ಕಟ್ಟಡ ಕುಸಿದು ರಸ್ತೆಗಳಲ್ಲಿ ಅವಶೇಷಗಳು ಬಿದ್ದಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನರು ಶಾಪಿಂಗ್ ಸೆಂಟರ್, ರೆಸ್ಟೋರೆಂಟ್‌ಗಳು ಮತ್ತು ಅಪಾರ್ಟ್ಮೆಂಟ್ ಕಟ್ಟಡಗಳಿಂದ ಭಯಭೀತರಾಗಿ ಓಡಿ ಹೋಗುವ ದೃಶ್ಯಗಳನ್ನು ಸ್ಥಳೀಯ ಮಾಧ್ಯಮಗಳು ಬಿತ್ತರಿಸಿವೆ.
ಸದ್ಯ ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿದ್ದು,ಭೂಕಂಪದ ಸಾವು – ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ಭೀಕರ ಭೂಕಂಪಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ದೇಶದ ಪ್ರಮುಖರು ಟ್ವೀಟ್ ಮೂಲಕ ದುಃಖ ವ್ಯಕ್ತಪಡಿಸಿದ್ದು, ಮೃತಪಟ್ಟವರಿಗೆ ಸಂತಾಪವನ್ನು ಸೂಚಿಸಿದ್ದಾರೆ.