Advertisement

ಬಾಡಿಗೆ ಕಟ್ಟಡದಲ್ಲೇ 294 ಅಂಗನವಾಡಿ

01:27 PM Dec 24, 2019 | Team Udayavani |

ಯಾದಗಿರಿ : ಮಕ್ಕಳಿಗೆ ಸರಿಯಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವಲ್ಲಿ ಅಂಗನವಾಡಿ ಕೇಂದ್ರಗಳು ಪ್ರಮುಖ ಪಾತ್ರವಹಿಸಿದ್ದು, ಜಿಲ್ಲೆಯ 294 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಮುಖವಾಗಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಎಸ್‌ಸಿ, ಎಸ್‌ಟಿ ಬಡಾವಣೆಯಲ್ಲಿ ನಿರ್ಮಿಸಬೇಕಿರುವ 98 ಅಂಗನವಾಡಿ ಕೇಂದ್ರಗಳಿಗೆ ನಿವೇಶನದ ಕೊರತೆ ಎದುರಾಗಿದೆ.

Advertisement

ಜಿಲ್ಲೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಖಾತೆ ಸಚಿವೆ ಶಶಿಕಲಾ ಅ. ಜೊಲ್ಲೆ ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಜಿಲ್ಲೆ ಯಾದಗಿರಿ ಅಂಗನವಾಡಿ ಕೇಂದ್ರಗಳ ಸ್ಥಿತಿಗತಿ ಆಲಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಜಿಲ್ಲೆಯಲ್ಲಿ ಕಳೆದ 16 ತಿಂಗಳಿನಲ್ಲಿ ಕೇವಲ 37 ಅಂಗನವಾಡಿ ಕೇಂದ್ರಗಳ ಸ್ವಂತ ಕಟ್ಟಡ ಹೆಚ್ಚಳವಾಗಿದೆ. ಸರ್ಕಾರದಿಂದ ನಿರ್ಮಿತಿ ಕೇಂದ್ರ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ನಿರ್ಮಾಣಕ್ಕೆ ಟೆಂಡರ್‌ ಆಗಿರುವ ಕಾಮಗಾರಿ ತ್ವರಿತಗತಿಯಲ್ಲಿ ನಡೆದರೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎನ್ನುವ ಮಾತು ಕೇಳಿ ಬಂದಿದೆ.

ಜಿಲ್ಲೆಯಲ್ಲಿ ಜೂನ್‌ 2018ರ ವೇಳೆಗೆ 1386 ಅಂಗನವಾಡಿ ಕೇಂದ್ರಗಳ ಪೈಕಿ 944 ಕೇಂದ್ರಗಳಿಗೆ ಸ್ವಂತ ಕಟ್ಟಡ ಸೌಕರ್ಯವಿತ್ತು. ಸದ್ಯ 2019ರ ನವೆಂಬರ್‌ ಅಂತ್ಯಕ್ಕೆ ಸ್ವಂತ ಕಟ್ಟಡಗಳ ಸಂಖ್ಯೆ 981ಕ್ಕೆ ಏರಿಕೆಯಾಗಿದೆ ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ. ಸ್ವಂತ ಕಟ್ಟಡಗಳ ಕೊರತೆಯಿಂದ ಇಲಾಖೆ ತಿಂಗಳಿಗೆ ಲಕ್ಷಾಂತರ ರೂ. ಬಾಡಿಗೆ ಪಾವತಿಸುತ್ತಿದೆ. ಯಾದಗಿರಿ ತಾಲೂಕಿಗೆ 243 ಅಂಗನವಾಡಿ ಕೇಂದ್ರಗಳು ಮಂಜೂರಾಗಿವೆ. 162 ಸ್ವಂತ ಕಟ್ಟಡ ಹೊಂದಿದ್ದರೆ ಪಂಚಾಯಿತಿ ಕಟ್ಟಡದಲ್ಲಿ 2, ಸಮುದಾಯ ಭವನದಲ್ಲಿ 4, ಶಾಲಾ ಕಟ್ಟಡದಲ್ಲಿ 9 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದೆ. ಇನ್ನೂ 66 ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಬೇಕಿದೆ.

ಇನ್ನೂ ಯಾದಗಿರಿ ತಾಲೂಕಿನಿಂದ ವಿಭಜನೆಯಾದ ನೂತನ ಗುರುಮಠಕಲ್‌ ಕೂಡ ಇಂತಹದ್ದೇ ಸಮಸ್ಯೆಯಿಂದ ಹೊರತಾಗಿಲ್ಲ. 274 ಅಂಗನವಾಡಿ ಕೇಂದ್ರಗಳು ಮಂಜೂರಾಗಿದ್ದು, 201 ಕೇಂದ್ರಗಳು ಸ್ವಂತ ಕಟ್ಟಡದಲ್ಲಿದೆ. 3 ಪಂಚಾಯಿತಿ ಕಟ್ಟಡದಲ್ಲಿ, 4 ಸಮುದಾಯ ಭವನಗಳಲ್ಲಿ ಹಾಗೂ 10 ಶಾಲಾ ಕಟ್ಟಡಗಳಲ್ಲಿ ಮಕ್ಕಳಿಗೆ ಪೂರ್ವ ಪ್ರಾಥಮಿಕ ಅಕ್ಷರ ಜ್ಞಾನ ನೀಡಲಾಗುತ್ತಿದೆ. 506 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿದೆ.

Advertisement

ಶಹಾಪುರ ತಾಲೂಕಿನಲ್ಲಿ 395 ಅಂಗನವಾಡಿ ಕೇಂದ್ರಗಳು ಮಂಜೂರಾಗಿದ್ದು, 289 ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದರೆ, ಪಂಚಾಯಿತಿ ಕಟ್ಟಡದಲ್ಲಿ 10, ಸಮುದಾಯ ಭವನದಲ್ಲಿ 12 ಹಾಗೂ ಶಾಲೆ ಕಟ್ಟಡದಲ್ಲಿ 15 ಕೇಂದ್ರಗಳನ್ನು ತೆರೆಯಲಾಗಿದೆ. 69 ಕೇಂದ್ರಗಳು ಬಾಡಿಗೆ ಕಟ್ಟಡ ಅವಲಂಭಿಸಿದೆ.

ಸುರಪುರ ತಾಲೂಕಿಗೆ 474 ಅಂಗನವಾಡಿ ಕೇಂದ್ರಗಳು ಮಂಜೂರಾಗಿವೆ. 329 ಸ್ವಂತ ಕಟ್ಟದಲ್ಲಿ ನಡೆಯುತ್ತಿವೆ. ಸಮುದಾಯ ಭವನದಲ್ಲಿ 13, ಶಾಲಾ ಕಟ್ಟಡದಲ್ಲಿ 29 ಕೇಂದ್ರಗಳಿದ್ದರೆ 103 ಅಂಗನವಾಡಿಗಳಿಗೆ ಬಾಡಿಗೆ ಕಟ್ಟಡಗಳೇ ದಿಕ್ಕು ಎನ್ನುವಂತಿದೆ. ಸರ್ಕಾರ ಮಹಿಳೆಯರು ಮತ್ತು ಮಕ್ಕಳಿಗಾಗಿ ಜಾರಿಗೆ ತರುವ ಹಲವು ಯೋಜನೆಗಳ ಅನುಷ್ಠಾನಕ್ಕೆ ಅಂಗನವಾಡಿ ಕೇಂದ್ರಗಳು ಪ್ರಮುಖ ಪಾತ್ರವಹಿಸುತ್ತವೆ. ಅಂಗನವಾಡಿ ಕೇಂದ್ರಗಳ ಕಟ್ಟಡಗಳ ನಿರ್ಮಾಣದಲ್ಲಿ ಜಿಲ್ಲಾಡಳಿತವೂ ಆಸಕ್ತಿವಹಿಸಬೇಕು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. 2020ರ ವರೆಗೆ ಜಿಲ್ಲೆಗೆ ಮಂಜೂರಾಗಿರುವ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಿಸುವ ಗುರಿ ಹೊಂದಲಾಗಿದೆ ಎನ್ನುವ ವಿಷಯ ಈ ಹಿಂದಿನ ಅಧಿಕಾರಿ ಹೇಳಿದ್ದರು.

ಒಂದರಿಂದ ಮೂರು ಸಾವಿರ ಬಾಡಿಗೆ: ಜಿಲ್ಲೆಯಲ್ಲಿ ಬಾಡಿಗೆಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಗ್ರಾಮೀಣ ಭಾಗದಲ್ಲಿ 1 ಸಾವಿರ ರೂ. ಮತ್ತು ನಗರ ಪ್ರದೇಶದಲ್ಲಿ 3 ಸಾವಿರ ರೂ. ಬಾಡಿಗೆ ನಿಗದಿ ಮಾಡಲಾಗಿದೆ. 2018ರ ಜೂನ್‌ನಲ್ಲಿ 944 ಸ್ವಂತ ಕಟ್ಟಡಗಳಲ್ಲಿ 155 ಕಟ್ಟಡಗಳು ವಿವಿಧ ಹಂತದಲ್ಲಿ ಶಿಥಿಲಾವಸ್ಥೆಯಲ್ಲಿದ್ದವು. 200 ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿತ್ತು. ಇವುಗಳಲ್ಲಿ 130 ಕಾಮಗಾರಿ ಪೂರ್ಣಗೊಂಡಿವೆ. 944 ಇದ್ದ ಸ್ವಂತ ಕಟ್ಟಡಗಳು 16 ತಿಂಗಳಲ್ಲಿ ಕೇವಲ 37 ಹೆಚ್ಚಳವಾಗಿದ್ದು ಪ್ರಸ್ತುತ 981 ಸ್ವಂತ ಕಟ್ಟಡಗಳಿವೆ.

ಜಿಲ್ಲೆಯ ಪ್ರಮುಖ ಬೇಡಿಕೆಗಳು: ಜಿಲ್ಲೆಗೆ ಜನಸಂಖ್ಯೆಗನುಗುಣವಾಗಿ ಇನ್ನು 114 ಹೊಸ ಅಂಗನವಾಡಿ ಕೇಂದ್ರಗಳ ಅವಶ್ಯಕತೆಯಿದೆ. 98 ಎಸ್‌ಸಿ, ಎಸ್‌ಟಿ ಬಡವಣೆಗೆ ಮೀಸಲಿರುವ ಕಾಮಗಾರಿಗೆ ನಿವೇಶನಗಳ ಕೊರತೆಯಿದ್ದು, ಸಮರ್ಪಕ ನಿವೇಶನ ಹುಡುಕಬೇಕಾಗಿದೆ. ಸದ್ಯ ಬಾಲಕಿಯರ ಬಾಲ ಮಂದಿರದಲ್ಲಿ 50 ಮಕ್ಕಳ ದಾಖಲೆ ಸಾಮರ್ಥ್ಯ 75ಕ್ಕೆ ಏರಿಸುವ ಬೇಡಿಕೆಯಿದೆ. ಬಾಲಕರ ಬಾಲ ಮಂದಿರ ಇಲ್ಲದಿರುವುದು ಅನಾಥ ಮಕ್ಕಳನ್ನು ಕಲಬುರಗಿ ಇಲ್ಲವೇ ರಾಯಚೂರಿಗೆ ದಾಖಲು ಮಾಡುವ ಅನಿವಾರ್ಯತೆ ಎದುರಾಗಿದೆ.

 

-ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next