Advertisement

ಕೃಷಿಪತ್ತಿನ ಸಹಕಾರ ಸಂಘ ಮೂಲಕ 2,917 ರೈತರ ಸಾಲ ಮನ್ನಾ

11:14 PM Jul 20, 2019 | Team Udayavani |

ಗೋಣಿಕೊಪ್ಪಲು: ವಿರಾಜ ಪೇಟೆ ತಾಲ್ಲೂಕಿನ 28 ಕೃಷಿಪತ್ತಿನ ಸಹಕಾರ ಸಂಘದ ಮೂಲಕ ಸುಮಾರು 2,917 ರೈತರ ಒಟ್ಟು 20 ಕೋಟಿ 86 ಲಕ್ಷದ 53 ಸಾವಿರ ರೂಪಾಯಿಗಳು ಸಾಲ ಮನ್ನಾ ಗೊಂಡಿದೆ ಎಂದು ತಾಲ್ಲೂಕು ಸಹಕಾರ ಸಂಘದ ಅಧಿಕಾರಿ ಮೋಹನ್‌ ಮಾಹಿತಿ ನೀಡಿದ್ದಾರೆ. ಪೊನ್ನಂಪೇಟೆ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷ ಬೊಳ್ಳಚಂಡ ಸ್ಮಿತಾ ಪ್ರಕಾಶ್‌ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಚಾರ ಮಂಡಿಸಿದರು. 9,989 ರೈತ ಫ‌ಲಾನುಭವಿಗಳು ಸಾಲ ಮನ್ನಾಕ್ಕೆ ಅರ್ಹರಾಗಿದ್ದು, ಒಟ್ಟು 85 ಕೋಟಿ 46 ಲಕ್ಷದ 77 ಸಾವಿರ ರೂಪಾಯಿಗಳು ಅನುಧಾನ ಸರ್ಕಾರದಿಂದ ಬರಬೇಕು. ಆದರೆ ಮೊದಲ ಹಂತದಲ್ಲಿ 2,917 ರೈತ ಫ‌ಲಾನುಭವಿಗಳ ಸಾಲ ಮನ್ನಾಕ್ಕೆ ಅರ್ಹರಾಗಿದ್ದಾರೆ. ಈ ಪ್ರಕಾರ 20 ಕೋಟಿ 86 ಲಕ್ಷದ 53 ಸಾವಿರ ರೂಪಾಯಿಗಳು ಸಾಲ ಮನ್ನಾವಾಗಿದೆ ಎಂದು ತಿಳಿಸಿದರು.

Advertisement

ಇದರಂತೆ ಒಂದು ಲಕ್ಷ ಒಳಗಿನ ಸಾಲ ಹೊಂದಿದ ರೈತ ಫ‌ಲಾನುಭವಿಗಳು 3,650 ಅರ್ಜಿದಾರರಾಗಿದ್ದು, ಈ ಪ್ರಕಾರ ಸಾಲದ ಮೊತ್ತ 22 ಕೋಟಿ 34 ಲಕ್ಷದ 77 ಸಾವಿರವಾಗಿದೆ. 6,339 ರೈತ ಸದಸ್ಯರು ಒಂದು ಲಕ್ಷ ಮೇಲ್ಪಟ್ಟ ಸಾಲ ಹೊಂದಿರುವ ರೈತರು 63 ಕೋಟಿ 39 ಲಕ್ಷ ಸಾಲ ಮನ್ನಾಕ್ಕೆ ಒಳಪಟ್ಟಿದ್ದಾರೆ ಎಂದು ಹೇಳಿದರು. ಕುಟ್ಟ ಬಾಲಕಿಯರ ವಸತಿ ನಿಲಯದಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. ವಿದ್ಯುತ್‌ ಬೆಳಕು, ಬಿಸಿ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಮಕ್ಕಳಿಗೆ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ವಾರದ ಒಂದು ದಿನ ತಮ್ಮ ಮನೆಗಳಿಗೆ ತೆರಳಿ ಸ್ನಾನ ಮಾಡಿ ಬರುವ ಸ್ಥಿತಿ ಎದುರಾಗಿದೆ. ಈ ಬಗ್ಗೆ ಕ್ರಮ ಕೈಗೊಂಡು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯ ಅಧಿಕಾರಿ ದೇವರಾಜ್‌ ಅವರಿಗೆ ಸೂಚಿಸಿದರು.

ಕೃಷಿ ಇಲಾಖೆಯಲ್ಲಿ ಬ್ಯಾಟರಿ ಚಾಲಿತ ಯಂತ್ರದ ಸ್ಪರ್ಶ ಕಂಪೆನಿ ಬಹಳ ಕಳಪೆ ಮಟ್ಟದಾಗಿದೆ. ಈ ಬಗ್ಗೆ ಗಮನ ಹರಿಸಿ ಉತ್ತಮ ಯಂತ್ರಗಳನ್ನು ವಿತರಿಸಲು ಮುಂದಾಗಬೇಕೆಂದು ಸಲಹೆ ನೀಡಿದರು. ಕಂದಾಯ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಿ ಕಡತಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಮತ್ತು ವಸತಿ ರಹಿತರಿಗೆ ಮೀಸಲಿರಿಸಿದ ಸ್ಥಳಗಳು ಒತ್ತುವರಿಯಾಗಿದ್ದರೆ ಅಂತಹ ಸ್ಥಳಗಳನ್ನು ತೆರವುಗೊಳಿಸಿ ನಿವೇಶನರಹಿತರಿಗೆ ಹಂಚಿಕೆ ಮಾಡಲಾಗುವುದು ಎಂದು ತಹಶೀಲ್ದಾರ್‌ ಪುರಂದರ ಸಭೆ ಮಾಹಿತಿ ನೀಡಿದರು. ಮೀನುಗಾರಿಕೆ ಇಲಾಖೆಯಲ್ಲಿ ಫ‌ಲಾನುಭವಿಗಳು ಮೀನು ಮರಿಗಳಿಗೆ ಅರ್ಜಿ ಸಲ್ಲಿಸುವಂತೆ ಸಭೆಗೆ ಅಧಿಕಾರಿ ಪ್ರಿಯ ಮಾಹಿತಿ ನೀಡಿದರು. ತಾಲ್ಲೂಕಿನ ಅಬಕಾರಿ ಇಲಾಖೆಯ ವತಿಯಿಂದ ಕಳೆದ ತಿಂಗಳಿನಲ್ಲಿ ಮೂರು ಕೋಟಿ ಹನ್ನೊಂದು ಲಕ್ಷ ಆದಾಯ ಸರ್ಕಾರಕ್ಕೆ ಸಲ್ಲಿಸಿದೆ ಎಂದು ತಾಲ್ಲೂಕು ಶ್ರೀನಿವಾಸ್‌ ಸಭೆಗೆ ತಿಳಿಸಿದರು. ಇಲಾಖೆಯ ವತಿಯಿಂದ ಅಕ್ರಮ ಮಧ್ಯ ಮಾರಟ ಮಾಡುವವರ ಮೇಲೆ ದಾಳಿ ನಡೆಸಿ 99 ಪ್ರಕರಣಗಳು ದಾಖಲಾಗಿದೆ. 58 ಸೇಂದಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಧಿಕಾರಿಗಳು ತಮ್ಮ ಇಲಾಖೆಗಳ ಪ್ರಗತಿಯ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.

ಸಭೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಜನಿತ್‌, ತಹಶೀಲ್ದಾರ್‌ ಪುರಂದರ, ಕಾರ್ಯ ನಿರ್ವಹಣಾಧಿಕಾರಿ ಹೆಚ್. ಷಣ್ಮುಗಂ ಉಪಸ್ಥಿತರಿದ್ದು ತಾಲ್ಲೂಕು ಮಟ್ಟದ ಅಧಿಕಾರಿಗಳುಉಪಸ್ಥಿತರಿದ್ದರು.‌

ಕೃಷಿ ಅಧಿಕಾರಿಗಳ ವಿರುದ್ದ ತಾ.ಪಂ. ಉಪಾಧ್ಯಕ್ಷ ಕಿಡಿ
ಕೃಷಿ ಇಲಾಖೆಯಲ್ಲಿ ಕಾಟಾಚಾರಕ್ಕೆ ಬೀಜೋಪಚಾರ ಕಾರ್ಯಕ್ರಮವನ್ನು ಹೋಬಳಿ ಮಟ್ಟದಲ್ಲಿ ನಡೆಸಲಾಗುತ್ತಿದೆ. ಜೂನ್‌ ತಿಂಗಳಿನಲ್ಲಿ ಮಾಡಬೇಕಾದ ಈ ಕಾರ್ಯ ಜುಲೈ ಅಂತ್ಯದಲ್ಲಿ ನಡೆಸುತ್ತಿರುವುದು ಯಾವ ಸಾಧನೆಗೆ. ಅಧಿಕಾರಿಗಳಿಗೆ ಈ ಬಗ್ಗೆ ಅಲ್ಪ ಜ್ಞಾನವಾದರೂ ಇರಬಾರದೇ ಎಂದು ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್‌ ಕುಮಾರ್‌ ಕೃಷಿ ಅಧಿಕಾರಿಗಳ ವಿರುದ್ದ ಕಿಡಿಕಾರಿದರು. ತಾಲ್ಲೂಕಿನ ಬಹುತೇಕ ಶಾಲೆಗಳಿಗೆ ಅಂಚೆಯ ಮೂಲಕ ಧರ್ಮ ಗ್ರಂಥಗಳನ್ನು ವಿತರಿಸಲಾಗುತ್ತಿದೆ. ಈ ಬಗ್ಗೆ ಯಾವ ಕ್ರಮ ಕೈಗೊಂಡಿದೀರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಾ ಬೆಳಗಿಯವರನ್ನು ಉಪಾಧ್ಯಕ್ಷ ನೆಲ್ಲೀರ ಚಲನ್‌ ಕುಮಾರ್‌ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ತಾಲ್ಲೂಕಿನ ಸುಮಾರು 26 ಶಾಲೆಯಿಂದ ಈ ಕೃತಿಗಳನ್ನು ಹಿಂಪಡೆದುಕೊಂಡು ಅಂಚೆಯ ಮೂಲಕ ಕಳುಹಿಸಿದ ಅನಾಮಿಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ತನಿಖೆ ನಡೆಸಬೇಕೆಂದು ಪೊಲೀಸ್‌ ಇಲಾಖೆಗೆ ದೂರು ನೀಡಿದ್ದೇವೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next