ಬೆಂಗಳೂರು: ನಗರದ ಆನೆಪಾಳ್ಯದಿಂದ ಹೊಸೂರು ರಸ್ತೆ ಜಂಕ್ಷನ್ ವರೆಗೆ ನಡೆಸಲಾಗುತ್ತಿರುವ ವೈಟ್‌ಟ್ಯಾಪಿಂಗ್ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಡಿ.28ರಂದು ಸಾರ್ವಜನಿಕರ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಬಿಬಿಎಂಪಿ ವತಿಯಿಂದ ನಗರದ ಹಲವು ಕಡೆಗಳಲ್ಲಿ ನಡೆಸಲಾಗುತ್ತಿರುವ ವೈಟ್‌ಟ್ಯಾಪಿಂಗ್ ಕಾಮಗಾರಿ ಯಿಂದ ತೀವ್ರ ಸಂಚಾರ ದಟ್ಟಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹಾಗೂ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಗುರುವಾರ ಹೊಸೂರು ರಸ್ತೆಯ ಆಡುಗೋಡಿ, ಆನೆಪಾಳ್ಯ, ಕೋರಮಂಗಲಗಳಲ್ಲಿ ನಡೆಯುತ್ತಿ
ರುವ ಕಾಮಗಾರಿ ಪರಿಶೀಲಿಸಿದರು.
ಕಾಮಗಾರಿಯಿಂದ ಸಂಚಾರ ದಟ್ಟಣೆ ಉಂಟಾಗು ತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ರಸ್ತೆಗಳಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕುರಿತು ಯೋಜನೆ ರೂಪಿಸಲಾಗುವುದು ಎಂದು ಹಿತೇಂದ್ರ ಅವರು ತಿಳಿಸಿದ್ದು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಮಂಜುನಾಥ ಪ್ರಸಾದ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಮಾತನಾಡಿದ ಮಂಜುನಾಥ ಪ್ರಸಾದ್, ಹೊಸೂರು ರಸ್ತೆಯಲ್ಲಿ ನಡೆಯುತ್ತಿರುವ ಆನೆಪಾಳ್ಯದಿಂದ ಹೊಸೂರು ಜಂಕ್ಷನ್ ವರೆಗಿನ ಕಾಮಗಾರಿ ಅಂತಿಮ ಹಂತದಲ್ಲಿದೆ.
ಡಿಸೆಂಬರ್ 28ರಂದು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗು ವುದು. ಜತೆಗೆ ಹೊಸೂರು ಜಂಕ್ಷನ್‌ನಿಂದ ಸಿಲ್ಕ್ಬೋರ್ಡ್ ನವರೆಗಿನ ಒಂದು ಕಿ.ಮೀ. ರಸ್ತೆ 15 ದಿನಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದರು. ನಗರದಲ್ಲಿ ಹಲವೆಡೆ ನಡೆಯುತ್ತಿರುವ ವೈಟ್‌ಟ್ಯಾಪಿಂಗ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಾಮಗಾರಿ ಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಅವರು, ಭವಿಷ್ಯದ ದೃಷ್ಟಿಯಿಂದ ಕಾಮಗಾರಿ ಅನಿವಾರ್ಯವಾಗಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದರು. ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಕೆ.ಟಿ.ನಾಗರಾಜ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಇದ್ದರು.
ಸಂಚಾರ ದಟ್ಟಣೆ ಕಡಿಮೆಗೊಳಿಸಲಿರುವ ಸಾಧ್ಯತೆಗಳು ಹಾಗೂ ಪರ್ಯಾಯ ರಸ್ತೆಗಳ ಕುರಿತು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದರಂತೆ ದಟ್ಟಣೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
●ಆರ್.ಹಿತೇಂದ್ರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ