Advertisement

ಅನಧಿಕೃತ ಸಾಗುವಳಿ ಸಕ್ರಮಕ್ಕೆ ನಮೂನೆ-57 3 ತಾಲೂಕುಗಳಲ್ಲಿ 282 ಅರ್ಜಿ ವಿಲೇವಾರಿ

07:52 PM Jun 24, 2021 | Team Udayavani |

ಪುತ್ತೂರು: ಅನಧಿಕೃತ ಸಾಗುವಳಿ ಸಕ್ರಮಕ್ಕೆ ನಮೂನೆ -57ರಲ್ಲಿ ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದ್ದು ಮೂರು ತಾಲೂಕಿನಲ್ಲಿ ( ಪುತ್ತೂರು, ಸುಳ್ಯ, ಕಡ ಬ) ಕೇವಲ 282 ಅರ್ಜಿಗಳಷ್ಟೇ ವಿಲೇವಾರಿಯಾಗಿದೆ.

Advertisement

ಅರ್ಜಿ ಸ್ವೀಕಾರ ಅವಧಿ ಮುಗಿದು ಎರಡು ವರ್ಷ ಕಳೆದಿದ್ದು ಮೂರು ತಾಲೂಕಿ ನಲ್ಲಿ 70 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿದ್ದರೂ ವಿಲೇವಾರಿ ಮಾತ್ರ ನಿರೀಕ್ಷಿತವಾಗಿ ಸಾಗಿಲ್ಲ ಅನ್ನುತ್ತಿದೆ ಮೂರು ತಾಲೂಕಿನ ಅಂಕಿ ಅಂಶಗಳ ವಿವರ.

ಅರ್ಜಿ ಗರಿಷ್ಠ : ವಿಲೇವಾರಿ ಕನಿಷ್ಠ:

ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ 2.34 ಲಕ್ಷ ಎಕ್ರೆ ಅನಧಿಕೃತ ಸಾಗುವಳಿ ಸಕ್ರಮಕ್ಕೆ 1,26,576 ಅರ್ಜಿ ಸಲ್ಲಿಕೆಯಾಗಿವೆ. ದ.ಕ. ಜಿಲ್ಲೆಯಲ್ಲಿ 1,58,816.89 ಎಕ್ರೆ ಸಾಗುವಳಿ ಸಕ್ರಮಕ್ಕೆ 88,549 ಅರ್ಜಿ ಮತ್ತು ಉಡುಪಿ ಜಿಲ್ಲೆಯಲ್ಲಿ 76,013.36 ಎಕ್ರೆ ಸಕ್ರಮಕ್ಕೆ 38,027 ಅರ್ಜಿ ಸಲ್ಲಿಸಲಾಗಿದೆ.

ಪುತ್ತೂರು ಉಪ ವಿಭಾಗ ವ್ಯಾಪ್ತಿಯ ತಾಲೂಕಿನಲ್ಲಿ ಗರಿಷ್ಠ  ಅರ್ಜಿ ಸಲ್ಲಿಕೆಯಾಗಿದ್ದು  ಆದರೆ ಕನಿಷ್ಠ ಸಂಖ್ಯೆಯಲ್ಲಿ ವಿಲೇವಾರಿ ಆಗಿದೆ. ಕಂದಾಯ ಇಲಾಖೆ ನೀಡಿದ ಮಾಹಿತಿ ಪ್ರಕಾರ ಪುತ್ತೂರಿನಲ್ಲಿ 132, ಸುಳ್ಯದಲ್ಲಿ 86, ಕಡಬದಲ್ಲಿ 64 ಅರ್ಜಿಗಳು ವಿಲೇವಾರಿ ಆಗಿದೆ. ಕೆಲವು ಅರ್ಜಿಗಳು ಭೂ ಸರ್ವೇ ಹಂತದಲ್ಲಿದ್ದರೆ, ಹೆಚ್ಚಿನ ಅರ್ಜಿಗಳು ವಿಲೇವಾರಿಗೆ ಸಿದ್ಧಗೊಂಡಿಲ್ಲ. ಅಂದರೆ ಭೂ ಸರ್ವೇಯೇ ಆಗಿಲ್ಲ ಅನ್ನುತ್ತಿದೆ ಸದ್ಯದ ಚಿತ್ರಣ.

Advertisement

ಅಕ್ರಮ-ಸಕ್ರಮ ಸಮಿತಿ:

ಅಕ್ರಮ-ಸಕ್ರಮ ಅರ್ಜಿ ವಿಲೇವಾರಿಗೆ ಸಂಬಂಧಿಸಿ ಶಾಸಕರ ಅಧ್ಯಕ್ಷತೆಯಲ್ಲಿ ಬಗರ್‌ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಅರ್ಜಿ ವಿಲೇವಾರಿಗೊಳಿಸುವ ಅಧಿಕಾರ ಹೊಂದಿದೆ. ಈಗಾಗಲೇ ಕೆಲವು ತಿಂಗಳ ಹಿಂದೆಯಷ್ಟೇ ಸಮಿತಿ ರಚನೆಗೊಂಡು ವಿಲೇವಾರಿ ಕಾರ್ಯ ಪ್ರಾರಂಭಗೊಂಡಿದೆ. ಆದರೆ ಅರ್ಜಿ ಸ್ವೀಕಾರಗೊಂಡ ಮೂರು ವರ್ಷಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ವಿಲೇವಾರಿ ಪ್ರಗತಿ ದಾಖಲಾಗಿಲ್ಲ. ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ಕೊರೊನಾ ಲಾಕ್‌ಡೌನ್‌ ಕಾರಣದಿಂದ ಭೂ ಸರ್ವೇ, ಸಮಿತಿ ಸಭೆ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ವಿಳಂಬವಾಗಿದೆ ಎನ್ನುವ ಉತ್ತರ ದೊರೆತಿದೆ.

ಅಕ್ರಮ-ಸಕ್ರಮ ಸಮಿತಿ:

ಜನರು ಸಲ್ಲಿಸಿದ ಅರ್ಜಿಯನ್ನು ಗ್ರಾಮ ಕರಣಿಕರು, ಕಂದಾಯ ನಿರೀಕ್ಷಕರು ಪರಿಶೀಲಿಸಿ ಬಳಿಕ ತಹಶೀಲ್ದಾರ್‌ಗೆ ಕಳುಹಿಸುತ್ತಾರೆ. ಅವರು ಶಿಪಾರಸು ಮಾಡಿ ಅಕ್ರಮ-ಸಕ್ರಮ ಸಮಿತಿಯ ಮುಂದಿಡುತ್ತಾರೆ. ಅಲ್ಲಿ ಸಮಿತಿ ಅಧ್ಯಕ್ಷರು ಮಂಜೂರಾತಿ ಬರೆಯುತ್ತಾರೆ. ಉಳಿದ ಸದಸ್ಯರು ಸಹಿ ಮಾಡುತ್ತಾರೆ. ಮಂಜೂ ರಾತಿ ಹಂತದಲ್ಲಿ ಅರ್ಜಿ ನಿಯಮ ಬಾಹಿರ ಎಂದು ಖಾತರಿಯಾದರೆ ಅದನ್ನು ತಿರಸ್ಕರಿಸುವ ಅಧಿಕಾರ ತಾಲೂಕು ದಂಡಾಧಿಕಾರಿಗಳಿಗೆ ಇದೆ.

ಏನಿದು ಯೋಜನೆ? :1964ರ ಕಲಂ 94ಎ (4)ಗೆ 2018ರ ಮಾ.17 ರಂದು ತಿದ್ದುಪಡಿ ತಂದು 2018ರ ಅ.25ರಂದು ಮಾರ್ಗಸೂಚಿ ಪ್ರಕಟಿಸಲಾಗಿತ್ತು. 2019 ರ ಮಾ. 16ಕ್ಕೆ ಅರ್ಜಿ ಸಲ್ಲಿಕೆಗೆ ಕೊನೆ ದಿನ ನಿಗದಿಪಡಿಸಿ ಸುತ್ತೋಲೆ ಹೊರಡಿಸಲಾಗಿತ್ತು. 1964ರ ಕರ್ನಾಟಕ ಭೂ ಕಂದಾಯ ಕಾಯ್ದೆಗೆ 1991ರಲ್ಲಿ ತಿದ್ದುಪಡಿ ತಂದು ನಮೂನೆ-50ರಲ್ಲಿ ಆರು ತಿಂಗಳ ಕಾಲ ಅರ್ಜಿ ಸ್ವೀಕಾರ ನಡೆದಿತ್ತು. 1998ರ ನ. 1ರಿಂದ 1999ರ ಎ. 30ರ ವರೆಗೆ ನಮೂನೆ-53ರಲ್ಲಿ ಮತ್ತು 2018ರ ನವೆಂಬರ್‌ನಿಂದ ನಮೂನೆ -57ರಲ್ಲಿ ಅರ್ಜಿ ಸ್ವೀಕರಿಸಲಾಗಿತ್ತು. ಇಲ್ಲಿಯ ತನಕ 50, 53, 57 ನಮೂನೆಗಳಲ್ಲಿ ಮೂರು ಅವಧಿಯಲ್ಲಿ ಅನಧಿಕೃತ ಸಾಗುವಳಿ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಸರಕಾರ ಅವಕಾಶ ನೀಡಿತ್ತು.

ತಾಲೂಕಿನಲ್ಲಿ 132 ಅರ್ಜಿ ವಿಲೇವಾರಿ ಆಗಿದೆ. ಶಾಸಕರ ಅಧ್ಯಕ್ಷತೆಯಲ್ಲಿ ಜು.5 ಕ್ಕೆ ಅಕ್ರಮ-ಸಕ್ರಮ ಬೈಠೆಕ್‌ ನಡೆಸಲು ನಿರ್ಧರಿಸಲಾಗಿದೆ. ಕೋವಿಡ್‌ ಕಾರಣದಿಂದ ಎರಡು ತಿಂಗಳ ಕಾಲ ಸಮಿತಿ ಸಭೆ ನಡೆದಿಲ್ಲ. ಅತ್ಯಂತ ಪಾರದರ್ಶಕ ರೀತಿಯಲ್ಲಿ ಅರ್ಜಿ ವಿಲೇ ಕಾರ್ಯ ನಡೆಯುತ್ತಿದೆ. ರಮೇಶ್‌ ಬಾಬು, ತಹಶೀಲ್ದಾರ್‌, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next