Advertisement

28 ಗ್ರಾಮಗಳು ಕೊಳಚೆ ನೀರು ಮುಕ್ತ ಮಾಡಲು ಯೋಜನೆ

10:02 PM May 10, 2019 | Lakshmi GovindaRaj |

ಶಿಡ್ಲಘಟ್ಟ: ಗ್ರಾಮೀಣಾಭಿವೃದ್ಧಿ ಹಾಗೂ ನೈರ್ಮಲ್ಯ ಕಾಪಾಡಲು ಪೂರಕವಾಗಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನೆರೆ ರಾಜ್ಯ ತೆಲಂಗಾಣ ಮಾದರಿಯಲ್ಲಿ ತಾಲೂಕಿನ 28 ಗ್ರಾಮಗಳನ್ನು ಕೊಳಚೆ ನೀರು ಮುಕ್ತ ಮಾಡಲು ತಾಲೂಕು ಪಂಚಾಯಿತಿ ನಿರ್ಧರಿಸಿದೆ.

Advertisement

ನರೇಗಾ ಯೋಜನೆಯಡಿ ಈಗಾಗಲೇ ಜಲಮೂಲಗಳನ್ನು ಪುನಶ್ಚೇತನಗೊಳಿಸಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಅಧಿಕಾರಿಗಳು ಪ್ರಾಯೋಗಿಕವಾಗಿ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಶಿಡ್ಲಘಟ್ಟ ತಾಲೂಕಿನ 28 ಗ್ರಾಮಗಳನ್ನು ಕೊಳಚೆ ನೀರು ಮುಕ್ತ ಮಾಡಲು ಪಣತೊಟ್ಟು ಕ್ರಮ ಕೈಗೊಳ್ಳಲಾಗಿದೆ.

ಬಹುಕಮಾನ್‌ ಚೆಕ್‌ಡ್ಯಾಂ ನಿರ್ಮಾಣ: ಸತತ ಬರಗಾಲದಿಂದ ತತ್ತರಿಸುತ್ತಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂರ್ತಜಲ ಮಟ್ಟ ವೃದ್ಧಿಗೊಳಿಸಲು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಖ್‌ ಆಸಕ್ತಿ ವಹಿಸಿದ್ದು, ಮಳೆಯ ಅಭಾವ ಎದುರಿಸುತ್ತಿರುವ ಅವಳಿ ಜಿಲ್ಲೆಯಲ್ಲಿ ಜಲ ಮೂಲಗಳಾದ ಕೆರೆ-ಕುಂಟೆ, ಕಲ್ಯಾಣಿಗಳು ಮತ್ತು ರಾಜಕಾಲುವೆಗಳ ಅಭಿವೃದ್ಧಿಗೊಳಿಸುವ ಜೊತೆಗೆ ಮಳೆನೀರು ಸಂರಕ್ಷಣೆ ಮಾಡಲು ಬಹುಕಮಾನ್‌ ಚೆಕ್‌ಡ್ಯಾಂಗಳನ್ನು ನಿರ್ಮಿಸಿ ರಾಜ್ಯದ ಗಮನ ಸೆಳೆಯಲಾಗಿದೆ.

ಯೋಜನೆ ರೂಪಿಸಲು ಕಾರಣ ಯಾರು?: ನೆರೆ ರಾಜ್ಯ ತೆಲಂಗಾಣದ ಇಬ್ರಾಹಿಂಪುರಕ್ಕೆ ತಾಲೂಕಿನ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಶ್ರೀನಾಥ್‌ಗೌಡ ಹಾಗೂ ಚೀಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಳಿನಾ ಮಂಜುನಾಥ್‌ ಒಳಗೊಂಡಂತೆ ನಿಯೋಗ ಭೇಟಿ ನೀಡಿ ಅಲ್ಲಿ ಕೊಳಚೆ ನೀರು ಸದ್ಬಳಕೆ ಮಾಡುತ್ತಿರುವ ವಿಧಾನ ವೀಕ್ಷಿಸಿದ್ದರು.

ಬಳಿಕ ಜಿಲ್ಲೆಯಲ್ಲಿ ಅದೇ ಮಾದರಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿ ಸಬೇಕೆಂದು ಜಿಪಂ ಸಿಇಒ ಗುರುದತ್‌ ಹೆಗಡೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ತಾಲೂಕಿನ 28 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಪ್ರತಿಯೊಂದು ಮನೆಯಲ್ಲಿ ಬಚ್ಚಲು ಮನೆ ಹಾಗೂ ಅಡುಗೆ ಮನೆಯಿಂದ ವ್ಯರ್ಥವಾಗಿ ಹರಿಯುವ ಕೊಳಚೆ ನೀರು ಇಂಗಿಸಲು ನೆನಸು ಗುಂಡಿಗಳನ್ನು ನಿರ್ಮಿಸಲು(ಸೋಕ್‌ ಫಿಟ್‌) ಯೋಜನೆ ರೂಪಿಸಿ ಈಗಾಗಲೇ ಚಾಲನೆ ನೀಡಲಾಗಿದೆ.

Advertisement

ಇಬ್ರಾಹಿಂಪುರ ಮಾದರಿ: ತೆಲಂಗಾಣ ರಾಜ್ಯದ ಇಬ್ರಾಹಿಂಪುರ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ನರೇಗಾ ಯೋಜನೆಯಡಿ ಅನೇಕ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವುದನ್ನು ಪ್ರತ್ಯಕ್ಷವಾಗಿ ಕಂಡ ಅಧಿಕಾರಿಗಳ ನಿಯೋಗ, ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕಿದೆ.

ಇಬ್ರಾಹಿಂಪುರದಲ್ಲಿ ಏನು ವಿಶೇಷ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿಯೊಂದು ಮನೆಯಲ್ಲಿ ಅಡುಗೆ ಮನೆ-ಬಚ್ಚಲು ಮನೆ ನೀರು ವ್ಯರ್ಥವಾಗಿ ಹರಿಯಲು ಬಿಡದೆ ನೆನಸು ಗುಂಡಿಗಳನ್ನು ಮಾಡಲಾಗಿದೆ. ಜೊತೆಗೆ ಗ್ರಾಮದಲ್ಲಿರುವ ಕೊಳವೆ ಬಾವಿಗಳಿಗೆ ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ.

ಗ್ರಾಮದಲ್ಲಿರುವ ಬೀಳುವ ಕಸ ಸಂಗ್ರಹ ಮಾಡಲು ಸೋಲಾರ್‌ ಚಾಲಿತ ವಾಹನವನ್ನು ಬಳಕೆ ಮಾಡಲಾಗುತ್ತಿದೆ. ಜೊತೆಗೆ ಗ್ರಾಮದಲ್ಲಿ ಸಂಗ್ರಹವಾಗುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಗೊಬ್ಬರ ಘಟಕದಲ್ಲಿ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಮೂಲಕ ಪಂಚಾಯಿತಿಯ ಆದಾಯವನ್ನು ಹೆಚ್ಚಿಸಿಕೊಳ್ಳಲಾಗಿದೆ.

ಸುಮಾರು 380 ಜನಸಂಖ್ಯೆ ಹೊಂದಿರುವ ಇಬ್ರಾಹಿಂಪುರ ಗ್ರಾಮದಲ್ಲಿ ಕೊಳಚೆ ನೀರು ಸಂರಕ್ಷಣೆ ಮಾಡಿ ಕಸದಿಂದ ರಸ ತಯಾರು ಮಾಡುವ ಜೊತೆಗೆ ಪರಿಸರ ಪ್ರೇಮ ಹೆಚ್ಚಿಸಿಕೊಂಡಿದ್ದಾರೆ. ಗ್ರಾಮದ ಎಲ್ಲಾ ರಸ್ತೆಗಳ ಬದಿಯಲ್ಲಿ ಸಸಿಗಳನ್ನು ನೆಟ್ಟು ಸ್ತ್ರೀಶಕ್ತಿ ಸಂಘಗಳಿಂದ ನಿರ್ವಹಣೆ ಮಾಡುವ ಜೊತೆಗೆ ನರ್ಸರಿ ಮಾಡಿ ಮಾರಾಟ ಮಾಡುವ ಮೂಲಕ ವಿಶೇಷ ಸಾಧನೆ ಮಾಡಲಾಗಿದೆ.

ಗ್ರಾಮವನ್ನು ಮಾದರಿಯಾಗಿ ಪರಿವರ್ತಿಸಲು ಶ್ರಮ ವಹಿಸಿರುವ ಆಡಳಿತ ಮಂಡಳಿಗೆ ಎರಡು ಅವಧಿಯಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಪಂಚಾಯಿತಿ ಆಡಳಿತ ಮಂಡಳಿಯ ಕಾರ್ಯವೈಖರಿ ಮತ್ತು ಸಾಧನೆಯನ್ನು ಕಂಡ ಅಲ್ಲಿನ ಸರ್ಕಾರ 20 ಲಕ್ಷ (10+10) ರೂ.ಗಳ ಸಹಾಯಧನ ನೀಡಿ ಪ್ರೋತ್ಸಾಹಿಸಿದೆ.

ಶಿಡ್ಲಘಟ್ಟ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಿಂದ ಒಂದೊಂದು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಕೊಳಚೆ ನೀರು ಮುಕ್ತ ಗ್ರಾಮಗಳನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ. ಜಲಮೂಲಗಳಾದ ಕೆರೆ-ಕುಂಟೆ-ರಾಜಕಾಲುವೆ ಮತ್ತು ಕಲ್ಯಾಣಿಗಳನ್ನು ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
-ಶಿವಕುಮಾರ್‌ ತಾಪಂ ಇಓ ಶಿಡ್ಲಘಟ್ಟ ತಾಲೂಕು

ನೆರೆಯ ತೆಲಂಗಾಣದ ಇಬ್ರಾಹಿಂಪುರ ಗ್ರಾಮ ಪಂಚಾಯಿತಿ ಮಾದರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ 28 ಗ್ರಾಮಗಳನ್ನು ಕೊಳಚೆ ನೀರು ಮುಕ್ತ ಮಾಡಲು ಪೈಲಟ್‌ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಜಿಪಂ ಸಿಇಒ ಗುರುದತ್‌ ಹೆಗಡೆ ಅವರ ಸಲಹೆ-ಸೂಚನೆ ಮತ್ತು ಮಾರ್ಗದರ್ಶನದಲ್ಲಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಮುಂಬರುವ ಆಗಸ್ಟ್‌15 ರೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ”
-ಶ್ರೀನಾಥ್‌ಗೌಡ, ಸಹಾಯಕ ನಿರ್ದೇಶಕ, ನರೇಗಾ ಯೋಜನೆ ಶಿಡ್ಲಘಟ್ಟ

* ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next