ಹೊಸದಿಲ್ಲಿ : “ಈ ವರ್ಷದ ದೀಪಾವಳಿ ಮತ್ತು ಮುಂಬರುವ ಚುನಾವಣೆಯನ್ನು ಕಾಣುವ ಆಸೆ ನಿಮಗಿದ್ದರೆ ತತ್‌ಕ್ಷಣವೇ ಇಲ್ಲಿರುವ ವಿಳಾಸಕ್ಕೆ 60 ಲಕ್ಷ ರೂ. ಕಳುಹಿಸಿ’ ಎಂಬ ವಾಟ್ಸಾಪ್ ಸಂದೇಶ ರಾಜಸ್ಥಾನದ 28 ಶಾಸಕರಿಗೆ ಬಂದಿರುವುದನ್ನು ಅನುಸರಿಸಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಅಜ್‌ಮೇರ್ ದರ್ಗಾ ಮಾರ್ಕೆಟ್ ಪ್ರದೇಶದ ಹೊಟೇಲೊಂದರಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ ಮಹಾರಾಷ್ಟ್ರದ ನಾಶಿಕ್ ನಿವಾಸಿ, ಯೂಸುಫ್ ಹುಸೇನ್ ಮೊಹಮ್ಮದ್ ಎಂಬ ಅರೋಪಿಯನ್ನು ಬಂಧಿಸಿದ್ದಾರೆ.
ಜೀವ ಬೆದರಿಕೆ ಮತ್ತು ಹಣ ವಸೂಲಿಯ ಈ ವಾಟ್ಸಾಪ್ ಸಂದೇಶ ರಾಜಸ್ಥಾನದ 28 ಶಾಸಕರಿಗೆ ಬಂದಿತ್ತಾದರೂ ಪೊಲೀಸರಿಗೆ ದೂರು ಕೊಟ್ಟವರು ಶಾಸಕ ತರುಣ್ ರಾಯ್ ಕಾಕಾ ಮಾತ್ರ. ಇದಕ್ಕೆ ಮೊದಲು ಶಾಸಕರೊಬ್ಬರ ಆಪ್ತ ಸಹಾಯಕಿ ಕಳೆದ ಶನಿವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಮಾನಕ್ ಚೌಕ್ ಪೊಲೀಸ್ ಠಾಣೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು.
ಶಾಸಕ ಕಾಕಾ ಅವರ ದೂರನ್ನು ದಾಖಲಿಸಿಕೊಂಡ ಬಾರ್‌ವೆುàರ್‌ನ ಚೌಹಾಣ್ ಪೊಲೀಸ್ ಠಾಣೆಯ ಅಧಿಕಾರಿಗಳು ಇಂದು ಸೋಮವಾರ ಬೆಳಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಅಜ್‌ಮೇರ್ ದರ್ಗಾ ಮಾರ್ಕೆಟ್ ಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು.
ಆರೋಪಿಯನ್ನು ಬಂಧಿಸಿ ಆತನ ಮೊಬೈಲ್ ಫೋನ್ ಸೆಟ್ ವಶಪಡಿಸಿಕೊಂಡ ಪೊಲೀಸರಿಗೆ ಅದರಲ್ಲಿ ಜೀವ ಬೆದರಿಕೆ ಸಂದೇಶ ಕಳುಹಿಸಲಾದ 28 ಶಾಸಕರ ಫೋನ್ ನಂಬರ್‌ಗಳು ಕಂಡು ಬಂದವು.
Related Articles
ಜೀವ ಬೆದರಿಕೆ ಮತ್ತು ಹಣ ವಸೂಲಿಯ ವಾಟ್ಸಾಪ್ ಸಂದೇಶವನ್ನು ಆರೋಪಿಯು ಲೋಕೇಶ್ ಅಜ್‌ಮೇರ್ ದರ್ಗಾ ಮಾರ್ಕೆಟ್ ಪ್ರದೇಶದಿಂದ ಕಳುಹಿಸಿದ್ದುದು ಪತ್ತೆಯಾಗಿತ್ತು.
ಆರೋಪಿಯು ಕಳುಹಿಸಿದ್ದ ವಾಟ್ಸಾಪ್ ಸಂದೇಶ ಈ ರೀತಿ ಇತ್ತು : ನಿಮ್ಮನ್ನು ಕೊಲ್ಲುವ ಡೀಲ್ ನನಗೆ ಸಿಕ್ಕಿದೆ. ನೀವು ಜೀವ ಸಹಿತ ಇರಲು ಬಯಸುವಿರಾದರೆ ನನಗೆ 60 ಲಕ್ಷ ರೂ. ಗಳನ್ನು ಇಲ್ಲಿ ಕೊಟ್ಟಿರುವ ವಿಳಾಸಕ್ಕೆ ತಲುಪಿಸಬೇಕು. ಹಣ ಕೊಡದಿದ್ದರೆ ಪರಿಣಾಮ ಬಹಳ ಕೆಟ್ಟದಾಗುವುದು. ನೀವು ಚಾಣಾಕ್ಷತನ ತೋರಲು ಪ್ರಯತ್ನಿಸಿದರೆ, ನಿಮ್ಮಲ್ಲಿ ಯಾರೂ ಈ ಬಾರಿ ದೀಪಾವಳಿಯನ್ನಾಗಲೀ ಮುಂಬರುವ ಚುನಾವಣೆಗಳನ್ನಾಗಲೀ ನೋಡಲಾರಿರಿ. ವಿಳಾಸ ಹೀಗಿದೆ : ಕುರೇಶಿ ಹೊಟೇಲ್ ಸಮೀಪದ ಸಿದ್ದಿ ಸ್ವೀಟ್ಸ್; ರೂಬಿ ಶೇಖ್ ಎಂಬ ಹೆಸರಿನ ಹುಡುಗಿಯು ನಿಮ್ಮನ್ನು ದರ್ಗಾ ಬಜಾರ್ ನಲ್ಲಿ ಭೇಟಿಯಾಗುತ್ತಾಳೆ. ನಿಮ್ಮ ಹಣ ನನ್ನ ಕೈ ಸೇರಿದಾಕ್ಷಣ ಹಂತಕನ ಹೆಸರು ನಿಮಗೆ ಗೊತ್ತಾಗಲಿದೆ.