ಬೆಂಗಳೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಗೆ ಬರೋಬರಿ 28 ಲಕ್ಷ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಹೊಸಪಾಳ್ಯ ನಿವಾಸಿ ಎಚ್. ಕೆ.ರಾಘವೇಂದ್ರ ಎಂಬವರು ನೀಡಿದ ದೂರಿನ ಮೇರೆಗೆ ದಾವಣಗೆರೆ ಮೂಲದ ರಾಘವೇಂದ್ರ, ಮಂಜುನಾಥ್, ಸುನೀತಾ ಬಾಯಿ, ಗಾಯತ್ರಿ, ಸಚಿನ್ ಹಾಗೂ ತಿಲಕ್ ಎಂಬವರ ವಿರುದ್ಧ ಬಂಡೇಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ದೂರುದಾರ ರಾಘವೇಂದ್ರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಈ ಮಧ್ಯೆ ಸ್ನೇಹಿತ ಕಿರಣ್ ಮೂಲಕ ದಾವಣಗೆರೆಯ ರಾಘವೇಂದ್ರ ಎಂಬಾತ ಪರಿಚಯವಾಗಿದ್ದಾನೆ. ಆಗ ಆರೋಪಿ ತನಗೆ ಸರ್ಕಾರದ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳ ಪರಿಚಯವಿದ್ದು, ನಿಮಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ. ಅಲ್ಲದೆ, ತನ್ನ ಸಹೋದರ ಮಂಜುನಾಥ್ ದಾವಣಗೆರೆಯಲ್ಲಿ ಎಇಇ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ನಂಬಿಸಿದ್ದಾನೆ.
ಕೆಲ ದಿನಗಳ ಬಳಿಕ ಸರ್ಕಾರಿ ಕೆಲಸ ಕೊಡಿಸಲು ಮುಂಗಡವಾಗಿ 2021ರ ಫೆ.22ರಂದು 2 ಲಕ್ಷ ರೂ. ಅನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ನಂತರ ಹಂತವಾಗಿ ಅವರ ಸಹೋದರ ಮಂಜುನಾಥ್ ಪತ್ನಿ ಗಾಯಿತ್ರಿ, ತನ್ನ ಪತ್ನಿ ಸುನೀತಾ ಬಾಯಿ, ರಾಘವೇಂದ್ರನ ಪರಿಚಯಸ್ಥ ಸಚಿನ್ ಮತ್ತು ತಿಲಕ್‌ಗೆ ನಗದು ರೂಪದಲ್ಲಿ ಹಣ ಕೊಡಿಸಿದ್ದಾನೆ. ಆ ಬಳಿಕವೂ ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು 28.40 ಲಕ್ಷ ರೂ. ನೀಡಲಾಗಿದೆ. ಆದರೆ, ಇದುವರೆಗೂ ಸರ್ಕಾರಿ ಕೆಲಸ ಕೊಡಿಸಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿಗಳು ಧಮ್ಕಿ ಹಾಕಿ ಪ್ರಾಣ ಬೆದರಿಕೆ ಹಾಕಿದ್ದು ಆರೋಪಿಗಳು ಇತರೆ ಹತ್ತಾರು ಮಂದಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದಾರೆ ಎಂಬುದು ಗೊತ್ತಾಗಿದೆ.
ಹೀಗಾಗಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ ರಾಘವೇಂದ್ರ ಮತ್ತು ಆತನ ಸಂಬಂಧಿಕರು, ಸ್ನೇಹಿತರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ರಾಘವೇಂದ್ರ ದೂರು ನೀಡಿದ್ದಾರೆ.