Advertisement

28 ನೀರಾವರಿ ಯೋಜನೆ ಕಾಮಗಾರಿ ಪ್ರಗತಿ:ಸಿಎಂ

11:45 PM Aug 21, 2020 | mahesh |

ಮಂಡ್ಯ/ಮೈಸೂರು: ನಮ್ಮ ಸರಕಾರ ನೀರಾವರಿ ಯೋಜನೆಗೆ ಪ್ರಥಮ ಆದ್ಯತೆ ನೀಡಿದೆ. ರಾಜ್ಯದಲ್ಲಿ 74 ಸಾವಿರ ಕೋ. ರೂ. ವೆಚ್ಚದಲ್ಲಿ ಕುಡಿಯುವ ನೀರು, ಏತ ನೀರಾವರಿ, ಕೃಷಿ ಚಟುವಟಿಕೆಗೆ ನೀರೊದಗಿಸುವ ಹಾಗೂ ಕೆರೆಕಟ್ಟೆಗಳಿಗೆ ನೀರು ತುಂಬಿಸುವ 28 ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಅವು ಪ್ರಗತಿಯಲ್ಲಿವೆ ಎಂದು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಶ್ರೀರಂಗಪಟ್ಟಣದ ಕೃಷ್ಣರಾಜ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಕಾವೇರಿ ನದಿ ನೀರು ಸಂರಕ್ಷಿಸಿ, ವಿದ್ಯುತ್‌ ಉತ್ಪಾದನೆ, ಕೃಷಿ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕೆ ರೂಪಿಸಲಾಗಿರುವ ಮೇಕೆದಾಟು ಯೋಜನೆ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪ್ರಸ್ತಾವನೆ ಕೇಂದ್ರ ಸರಕಾರದ ಮುಂದಿದ್ದು, ಅನುಮತಿ ಪಡೆದು ಯೋಜನೆ ರೂಪಿಸಲಾಗುವುದು ಎಂದರು.

ಸಚಿವರಾದ ಎಸ್‌.ಟಿ. ಸೋಮ ಶೇಖರ್‌, ರಮೇಶ್‌ ಜಾರಕಿಹೊಳಿ, ಶಾಸಕರಾದ ಅನಿಲ್‌ ಚಿಕ್ಕಮಾದು, ರಾಮದಾಸ್‌ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

5ನೇ ಬಾರಿ ಬಾಗಿನ ಸಮರ್ಪಿಸಿದ ಯಡಿಯೂರಪ್ಪ
ವೈದಿಕರಾದ ಭಾನುಪ್ರಕಾಶ್‌ ಶರ್ಮ ನೇತೃತ್ವದ ತಂಡ ಕಾವೇರಿ ಮಾತೆಗೆ ವಿವಿಧ ಪೂಜೆ ಸಲ್ಲಿಸಿತು. ಮಧ್ಯಾಹ್ನ 12.05ಕ್ಕೆ ಅಭಿಜಿನ್‌ ಮುಹೂರ್ತದಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ಮೂಲಕ 5 ಬಾರಿ ಬಾಗಿನ ಅರ್ಪಿಸಿದ ಹೆಗ್ಗಳಿಕೆಗೆ ಯಡಿಯೂರಪ್ಪ ಪಾತ್ರ ರಾದರು.
ಕಬಿನಿ ಜಲಾಶಯಕ್ಕೂ ಬಾಗಿನ ಎಚ್‌.ಡಿ. ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಸಿಎಂ ಯಡಿಯೂರಪ್ಪ ಶುಕ್ರವಾರ ಬಾಗಿನ ಅರ್ಪಿಸಿದರು. ಬಳಿಕ ಕಬಿನಿ ಜಲಾಶಯದ ಕೆಳಭಾಗದಲ್ಲಿ ಮೇಲ್ಮಟ್ಟದ ಸೇತುವೆ ಹಾಗೂ ಸಂಪರ್ಕ ರಸ್ತೆ ಕಾಂಕ್ರೀಟ್‌ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.

ರೈತರ ಬಂಧನ
ಕಬಿನಿ ಜಲಾಶಯಕ್ಕೆ ತೆರಳಿ ಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸಲು ತೆರಳುತ್ತಿದ್ದ ರೈತರನ್ನು ಬಂಧಿಸಲಾಯಿತು. ಜಲಾಶಯಕ್ಕೆ ಪೂಜೆ ಸಲ್ಲಿಸಲು ಆಗಮಿಸುತ್ತಿದ್ದ ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲು ಕಬಿನಿಗೆ ತೆರಳುತ್ತಿದ್ದ ರೈತರನ್ನು ಪೊಲೀಸರು ಶಿರಮಳ್ಳಿ ವೃತ್ತದಲ್ಲಿ ತಡೆದಾಗ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.

Advertisement

ಸರಳ ದಸರಾ
ಕೊರೊನಾ ಹಿನ್ನೆಲೆಯಲ್ಲಿ ಈ ಸಾಲಿನ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ದಸರಾ ಮಹೋತ್ಸವ ಕುರಿತಂತೆ ಸದ್ಯದಲ್ಲೇ ಉನ್ನತ ಮಟ್ಟದ ಸಮಿತಿ ಸಭೆ ಕರೆದು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next