Advertisement

ಸುರತ್ಕಲ್‌: ಒಳಚರಂಡಿ ಕಾಮಗಾರಿಗೆ 28 ಕೋ.ರೂ.; ದುರಸ್ತಿಗೆ 33 ಕೋಟಿ!

01:07 PM May 06, 2022 | Team Udayavani |

ಸುರತ್ಕಲ್‌: ಸುರತ್ಕಲ್‌ ಪ್ರದೇಶದಲ್ಲಿ 2006ರಲ್ಲಿ ಆರಂಭವಾದ ಒಳಚರಂಡಿ ಕಾಮಗಾರಿಗೆ 28 ಕೋ. ರೂ. ಖರ್ಚು ಮಾಡಲಾಗಿತ್ತು. ಆದರೆ ಬಳಿಕ ಇದೀಗ ಅಮೃತ್‌ ಯೋಜನೆಯಲ್ಲಿ ದುರಸ್ತಿಗೆ 33 ಕೋ.ರೂ. ಖರ್ಚು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ವಿಧಾನ ಪರಿಷತ್‌ನ ಭರವಸೆ ಸಮಿತಿಗಳ ಅಧ್ಯಕ್ಷ ಬಿ.ಎಂ. ಫಾರೂಕ್‌ ಅವರಿಗೆ ಮಾಹಿತಿ ನೀಡಿದರು.

Advertisement

ಸುರತ್ಕಲ್‌ ಇಡ್ಯಾ ವೆಟ್‌ವೆಲ್‌ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭ ಮಾಹಿತಿ ನೀಡಿದ ಅಧಿಕಾರಿ ಗಳು, ಒಟ್ಟು ನಾಲ್ಕು ವೆಟ್‌ವೆಲ್‌ ಗಳಲ್ಲಿ ಮೂರು ಕಾರ್ಯಾಚರಿಸುತ್ತಿದೆ. ಸುರತ್ಕಲ್‌ ವೆಟ್‌ವೆಲ್‌ ನಿರ್ವಹಣೆಯಿಲ್ಲದೆ ಉಳಿದ ಪರಿಣಾಮ ನೀರು ಚರಂಡಿ ಸೇರಿ ಬಾವಿ ನೀರು ಹಾಳಾಗಿದೆ ಎಂದರು.

ಈ ಸಂದರ್ಭ ಆಕ್ರೋಶ ವ್ಯಕ್ತಪಡಿಸಿದ ಗುಡ್ಡೆಕೊಪ್ಲ ನಾಗರಿಕರು ಕಳಪೆ ಕಾಮಗಾರಿಯಿಂದ ನಾವು ಸುತ್ತಮುತ್ತಲಿನ 27 ಬಾವಿಗಳನ್ನು ಕಳೆದುಕೊಂಡಿದ್ದೇವೆ. ನುಸಿ, ದುರ್ವಾಸನೆಯಿಂದ ಮನೆಯಲ್ಲಿ ನೆಮ್ಮದಿಯಾಗಿ ಊಟ ಮಾಡಲು ಸಾಧ್ಯವಿಲ್ಲದಂತಾಗಿದೆ. ಈ ವೆಟ್‌ವೆಲ್‌ ಸ್ಥಳಾಂತರಿಸಿ ದುರಸ್ತಿ ಮಾಡಿ ಮತ್ತೆ ಆರಂಭಕ್ಕೆ ನಾವು ಬಿಡುವುದಿಲ್ಲ ಎಂದು ಹೇಳಿದರು.

ಸಮಗ್ರವಾಗಿ ಮಾಹಿತಿ ಪಡೆದ ಭರವಸೆ ಸಮಿತಿ ಸದಸ್ಯರು ಬಳಿಕ ಸುರತ್ಕಲ್‌ ಮಾರುಕಟ್ಟೆ ವಿಳಂಬ ಕಾಮಗಾರಿಯನ್ನು ವೀಕ್ಷಿಸಿದರು.

ಉದ್ಯೋಗಕ್ಕಾಗಿ ಮನವಿ

Advertisement

ಎಂಆರ್‌ಪಿಎಲ್‌ ಸಂಯುಕ್ತ ನಾಗರಿಕ ಹಿತರಕ್ಷಣೆ ಸಮಿತಿಯಿಂದ ಉದ್ಯೋಗಕ್ಕಾಗಿ ಮನವಿ ನೀಡಿತು. ಎಂಆರ್‌ಪಿಎಲ್‌ ತೈಲ ಸಂಸ್ಕರಣೆ ಸಂಸ್ಥೆಗೆ ಉದ್ಯೋಗದ ಭರವಸೆಯಿಂದ ಭೂಮಿ ಬಿಟ್ಟುಕೊಟ್ಟು ನಾವು ಇದೀಗ ವಂಚಿತರಾಗಿದ್ದೇವೆ. ಕೊಟ್ಟ ಭರವಸೆ ಉಳಿದಿದೆ. ಇಲ್ಲಿ ಕಲಿತ ಎಂಜಿನಿಯರ್‌, ತಂತ್ರಜ್ಞರು ಪರಿಣಿತರು ಊರಲ್ಲಿ ಅರ್ಹವಾಗಿ ಸಿಗಬೇಕಾದ ಕೆಲಸ ಸಿಗುವ ನಿರೀಕ್ಷೆಯಿಂದ ದಿನ ದೂಡುತ್ತಿದ್ದಾರೆ.

ಈಗಾಗಲೇ ಯುವ ಸಮೂಹ ತಾಳ್ಮೆ ಕಳೆದುಕೊಳ್ಳುತ್ತಿದ್ದು ಆತ್ಮಹತ್ಯೆ ಯಂತಹ ಕೃತ್ಯ ಎಸಗಿದರೆ ಯಾರು ಹೊಣೆ ಎಂದು ಡೋನಿ ಸುವಾರಿಸ್‌ ಸಮಿತಿ ಸದಸ್ಯರನ್ನು ಪ್ರಶ್ನಿಸಿದರಲ್ಲದೆ ತತ್‌ಕ್ಷಣ ಜಿಲ್ಲಾಡಳಿತಕ್ಕೆ ಅರ್ಹ ಸ್ಥಳೀಯರ ಮಾಹಿತಿ ಕಲೆ ಹಾಕಿ ಉದ್ಯೋಗ ದೊರಕಿಸಲು ಆದೇಶಿಸಬೇಕು ಎಂದು ಒತ್ತಾಯಿಸಿದರು.

ಭರವಸೆಗಳ ಈಡೇರಿಕೆಗೆ ಮನವಿ

ದ.ಕ. ಜಿಲ್ಲೆ ಸೂಕ್ಷ್ಮ ಜಿಲ್ಲೆಯಾಗಿದ್ದು ಸಮುದ್ರ, ನದಿ ಸಹಿತ ಪರಿಸರಕ್ಕೆ ಹಾನಿಯಾದಲ್ಲಿ ಹವಾಮಾನ ವೈಪರೀತ್ಯ ವಾಗಬಹುದು ಮಾತ್ರವಲ್ಲ, ಇಲ್ಲಿನ ಕೃಷಿ, ಮೀನುಗಾರಿಕೆ, ಕುಲ ಕಸುಬುಗಳಿಗೆ ಭಾರೀ ಹಾನಿ ಯಾಗಲಿದೆ. ಕೈಗಾರಿಕೆಗಳು ಜವಾಬ್ದಾರಿಯುತವಾಗಿ ಪರಿಸರಕ್ಕೆ ಮಾರಕವಾಗದಂತೆ ಉತ್ತಮ ವ್ಯವಸ್ಥೆ ಕೈಗೊಂಡು ದೇಶದ ಆರ್ಥಿಕತೆಗೆ ಕೊಡುಗೆ ನೀಡುವಂತಾಗಬೇಕು. ಸ್ಥಳೀಯರಿಗೆ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು. ಪ್ರವಾಸದ ಸಮಗ್ರ ಮಾಹಿತಿಯನ್ನು ಸರಕಾರಕ್ಕೆ ಸಲ್ಲಿಸಿ ಬಾಕಿ ಉಳಿದ ಭರವಸೆಗಳ ಈಡೇರಿಕೆಗೆ ಮನವಿ ಮಾಡಲಾಗುವುದು ಎಂದು ಭರವಸೆ ಸಮಿತಿಗಳ ಅಧ್ಯಕ್ಷ ಬಿ.ಎಂ ಫಾರೂಕ್‌ ಹೇಳಿದರು.

ದೀಪಕ್‌ ಪೆರ್ಮುದೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿಯವರಲ್ಲಿ ಈ ಬಗ್ಗೆ ಸೂಕ್ತ ಕ್ರಮಕ್ಕೆ ಸೂಚಿಸಿದ್ದು ಕಚೇರಿಯಲ್ಲಿ ಮಾಹಿತಿ ಪಡೆದು ನಿಮ್ಮಲ್ಲಿರುವ ದಾಖಲೆ ಸಲ್ಲಿಸಲು ಸಮಿತಿ ಅಧ್ಯಕ್ಷ ಬಿ.ಎಂ. ಫಾರೂಕ್‌ ಸೂಚಿಸಿದರು. ಸಮಿತಿ ಸದಸ್ಯರಾದ ಯು.ಬಿ. ವೆಂಕಟೇಶ್, ಎಸ್‌.ವಿ. ಸಂಕನೂರು, ಕೆ.ಟಿ. ಶ್ರೀಕಂಠೇಗೌಡ, ಶಶಿಲ್‌ ನಮೋಶಿ, ರುದ್ರೇಗೌಡ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಮೊದೀನ್‌ ಬಾವಾ, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌, ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next