Advertisement

ಶಾಸಕ ಕಾಮತ್‌ ಅವಧಿಯಲ್ಲಿ 28 ಕೋಟಿ ರೂ. ವೆಚ್ಚದಲ್ಲಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ

03:33 PM May 06, 2023 | Team Udayavani |

ಮಂಗಳೂರು: ಕಳೆದ ಐದು ವರ್ಷದ ಅವಧಿಯಲ್ಲಿ ಮಂಗಳೂರು ನಗರ ದಕ್ಷಿಣದ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಸುಮಾರು 28 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅನುದಾನ ಹರಿದು ಬಂದಿದ್ದು, ಶಾಸಕ ವೇದವ್ಯಾಸ್‌ ಕಾಮತ್‌ ಕಟಿಬದ್ಧರಾಗಿ ಕೆಲಸ ಮಾಡಿದ್ದಾರೆ ಎಂದು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ ಶೆಟ್ಟಿ ತಿಳಿಸಿದರು.

Advertisement

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೇದವ್ಯಾದ ಕಾಮತ್‌ ಅವರು ಶಾಸಕರಾಗಿ ಆಯ್ಕೆಯಾದ ಬಳಿಕ ನಗರದ ಪ್ರಮುಖ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿ ಅದರಂತೆ ಹಲವು ಕ್ಷೇತ್ರಗಳ ಅಭಿವೃದ್ಧಿ ಮಾಡಿಸಿದ್ದಾರೆ. ಮುಖ್ಯವಾಗಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಪೂರಕವಾಗುವಂತೆ ಯೋಜನೆ ರೂಪಿಸಿ ಅನುದಾನ ತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನಷ್ಟು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದೆ ಎಲ್ಲ ಧಾರ್ಮಿಕ ಕ್ಷೇತ್ರಗಳ ಸಮಗ್ರ ಪ್ರಗತಿಯಾಗಲಿದೆ ಎಂದು ಹೇಳಿದರು.

ಕ್ಷೇತ್ರದ ಎಲ್ಲ ಸಮುದಾಯದವರ ಧಾರ್ಮಿಕ ಕ್ಷೇತ್ರಗಳಿಗೆ ಆದ್ಯತೆ ಮೇರೆಗೆ ಅನುದಾನ ಹಂಚಿಕೆ ಮಾಡಲಾಗಿದೆ. ಹಲವು ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದರೆ, ಇನ್ನು ಕೆಲವು ಕಾಮಗಾರಿಗಳು ಅನುಷ್ಠಾನದ ಹಂತದಲ್ಲಿದೆ. ಇನ್ನು ಕೆಲವು ಕ್ಷೇತ್ರಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಅನುದಾನ ಬಿಡುಗಡೆಯಾಗಲಿದೆ ಎಂದರು.

ಧಾರ್ಮಿಕ ಕ್ಷೇತ್ರಗಳ ವ್ಯಾಪ್ತಿಯ ಸಭಾಂಗಣ, ಮೇಲ್ಛಾವಣಿ ನಿರ್ಮಾಣ, ಆವರಣ ಗೋಡೆ, ನೆಲ ಹಾಸು, ಶೌಚಾಲಯ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಇದರಿಂದ ಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರಿಗೆ ಹೆಚ್ಚಿನ ಮೂಲಭೂತ ಸೌಲಭ್ಯಗಳು ದೊರೆಯುವಂತಾಗಿದೆ ಎಂದು ತಿಳಿಸಿದರು.

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಮಂಗಳಾದೇವಿ ರಸ್ತೆ ಅಭಿವೃದ್ಧಿ, ಹರಿಟೇಜ್‌ ಪರಿಕಲ್ಪನೆಯಡಿಯಲ್ಲಿ ಕಾರ್‌ ಸ್ಟ್ರೀಟ್‌ ಟೆಂಪಲ್‌ ಸ್ಕ್ವೇರ್ ರಸ್ತೆ ಅಭಿವೃದ್ಧಿಯಾಗಿರುವುದು ಧಾರ್ಮಿಕ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಸರ್ಕ್ಯೂಟ್ ಟೂರಿಸಂ ಯೋಜನೆ ಮೂಲಕ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಬರುವಂತೆ ಮಾಡುವುದರ ಜತೆಯಲ್ಲಿ ಅಲ್ಲಿನ ಸಮಗ್ರ ಮೂಲಭೂತ ಸೌಲಭ್ಯವನ್ನು ಅಭಿವೃದ್ಧಿಪಡಿಸುವ ಯೋಜನೆ ಇದೆ ಎಂದರು.
ಹಲವು ಧಾರ್ಮಿಕ ಕ್ಷೇತ್ರಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದ್ದ ಬಗ್ಗೆ ಅಲ್ಲಿನ ಭಕ್ತರು, ಆಡಳಿತ ಸಮಿತಿಗಳು ನೀಡಿದ ಮನವಿ ಮೇರೆಗೆ ಶಾಸಕ ವೇದವ್ಯಾಸ್‌ ಕಾಮತ್‌ ಹೆಚ್ಚಿನ ಮುತುವರ್ಜಿ ವಹಿಸಿ ಅನುದಾನ ತರುವಲ್ಲಿ ಶಕ್ತಿ ಮಿರಿ ಕೆಲಸ ಮಾಡಿದ್ದಾರೆ. ಇದರಿಂದ ಸಾವಿರಾರು ಭಕ್ತರಿಗೆ ಅನುಕೂಲ ಆಗಿದೆ ಎಂದರು.

Advertisement

ದೈವ-ದೇವಸ್ಥಾನಗಳ ಕಾಮಗಾರಿಗಳಿಗೆ ಶಾಸಕ ಕಾಮತ್‌ ಅವರಿಂದ ಕಳೆದ ಐದು ವರ್ಷಗಳಲ್ಲಿ ಸಿಕ್ಕಂತಹಾ ಸ್ಪಂದನೆ ಈ ಹಿಂದೆ ಬೇರೆ ಶಾಸಕರಿಂದ ಸಿಕ್ಕಿರಲಿಲ್ಲ. ಕಾಮತ್‌ ಅವರೇ ಮುತುವರ್ಜಿ ವಹಿಸಿ, ದಾಖಲೆ ಪರಿಶೀಲಿಸಿ ತನ್ನ ಸ್ವಂತ ಜವಾಬ್ದಾರಿಯಂತೆ ಕೆಲಸ ನಿರ್ವಹಿಸಿದ್ದಾರೆ ಎಂದು ವಿವರಿಸಿದರು.

ಸಮಿತಿಯ ಕಾರ್ಯದರ್ಶಿ ದೇವಾನಂದ ಗುಜರನ್‌, ಗೌರವಾಧ್ಯಕ್ಷ ಗಿರಿಧರ್‌, ಉಪಕಾರ್ಯದರ್ಶಿ ಗಂಗಾಧರ ಕೋಟ್ಯಾನ್‌, ಸದಸ್ಯ ಹರೀಶ್‌ ಬೋಳೂರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next