Advertisement

ಬೀದರನಲ್ಲಿ 2,777 ಹೆಕ್ಟೇರ್‌ ಬೆಳೆಹಾನಿ

06:35 PM Sep 17, 2021 | Team Udayavani |

ಬೀದರ: ಜಿಲ್ಲೆಯಲ್ಲಿ ಕಳೆದ ಜು. ಮತ್ತು ಆಗಸ್ಟ್‌ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ 391 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 2,777 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆಗಳು ಹಾಳಾಗಿದ್ದು, ಒಟ್ಟಾರೆ 244 ಲಕ್ಷ ರೂ. ಹಾನಿಯ ಅಂದಾಜು ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದ್ದಾರೆ.

Advertisement

ಎಂಎಲ್‌ಸಿ ವಿಜಯಸಿಂಗ್‌ ಅವರ ಪ್ರಶ್ನೆಗೆ ಲಿಖೀತ ಉತ್ತರ ನೀಡಿದ್ದಾರೆ. ಮಳೆಹಾನಿ ಕುರಿತು ಕೃಷಿ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಾಗಿದೆ. ಶೇ.33ಕ್ಕಿಂತ ಅಧಿಕ ಬೆಳೆ ಹಾಳಾದ ಪ್ರಕರಣಗಳಲ್ಲಿ ಸಂಬಂಧಿಸಿದ ರೈತರಿಗೆ ಎಸ್‌ಆರ್‌ಡಿಎಫ್‌, ಎನ್‌ಡಿಆರ್‌ ಎಫ್‌ ಮಾರ್ಗಸೂಚಿ ಪ್ರಕಾರ ಗರಿಷ್ಠ 2 ಹೆಕ್ಟೇರ್‌ಗೆ ಸೀಮಿತಗೊಳಿಸಿ ಇನ್‌ಪುಟ್‌ ಸಬ್ಸಿಡಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 6,800, ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 13,500 ಮತ್ತು ಬಹು ವಾರ್ಷಿಕ ಬೆಳೆಗಳಿಗೆ ಹೆಕ್ಟೇರ್‌ಗೆ 18,000 ರೂ. ಪರಿಹಾರ ಸಿಗಲಿದೆ. ಪ್ರವಾಹ ಪರಿಹಾರಕ್ಕಾಗಿ ಆರ್ಥಿಕ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹಾನಿ ವಿವರ: ಔರಾದ ತಾಲೂಕಿನಲ್ಲಿ 9.78 ಹೆಕ್ಟೇರ್‌ ಹೆಸರು, 9 ಹೆಕ್ಟೇರ್‌ ಉದ್ದು, 29.51 ಹೆಕ್ಟೇರ್‌ ತೊಗರಿ ಮತ್ತು 96.08 ಹೆಕ್ಟೇರ್‌ ಸೋಯಾ ಸೇರಿ ಒಟ್ಟು 144.4 ಹೆಕ್ಟೇರ್‌ ಬೆಳೆ ಹಾಳಾಗಿದೆ. ಕಮಲನಗರ ತಾಲೂಕಿನಲ್ಲಿ 8.11 ಹೆಕ್ಟೇರ್‌ ತೊಗರಿ ಮತ್ತು 3.41 ಹೆಕ್ಟೇರ್‌ ಸೋಯಾಬೀನ್‌ ಸೇರಿ 11.52 ಹೆಕ್ಟೇರ್‌ ಬೆಳೆ ಹಾಳಾಗಿದೆ. ಬೀದರ ತಾಲೂಕಿನಲ್ಲಿ ಹೆಸರು, ಉದ್ದು, ತೊಗರಿ, ಸೋಯಾ, ಕಬ್ಬು ಸೇರಿದಂತೆ ಯಾವುದೇ ಬೆಳೆ ಮಳೆಯಿಂದಾಗಿ ಹಾಳಾಗಿಲ್ಲ.

ಭಾಲ್ಕಿಯಲ್ಲಿ 331.82 ಹೆಕ್ಟೇರ್‌ ಹೆಸರು, 355 ಹೆಕ್ಟೇರ್‌ ಉದ್ದು, 405 ಹೆಕ್ಟೇರ್‌ ತೊಗರಿ ಮತ್ತು 827 ಹೆಕ್ಟೇರ್‌ ಸೋಯಾ ಸೇರಿ ಒಟ್ಟು 1919 ಹೆಕ್ಟೇರ್‌ ಬೆಳೆ ಹಾಳಾಗಿದೆ. ಬಸವಕಲ್ಯಾಣದಲ್ಲಿ 22.54 ಹೆಕ್ಟೇರ್‌ ಹೆಸರು, 15.68 ಹೆಕ್ಟೇರ್‌ ಉದ್ದು, 181.52 ಹೆಕ್ಟೇರ್‌ ತೊಗರಿ, 230 ಹೆಕ್ಟೇರ್‌ ಸೋಯಾ ಸೇರಿ ಒಟ್ಟು 450 ಹೆಕ್ಟೇರ್‌ ಗಳಷ್ಟು ಬೆಳೆ ಹಾಳಾಗಿದೆ. ಹುಲಸೂರಿನಲ್ಲಿ 4.68 ಹೆಕ್ಟೇರ್‌ ತೊಗರಿ ಮತ್ತು 41 ಹೆಕ್ಟೇರ್‌ ಸೋಯಾ ಹಾಳಾಗಿದೆ. ಮಳೆಯಿಂದ ಹಾಳಾಗಿರುವ ಕ್ಷೇತ್ರ ಒಟ್ಟು 45 ಹೆಕ್ಟೇರ್‌. ಹುಮನಾಬಾದನಲ್ಲಿ 16 ಹೆಕ್ಟೇರ್‌ ಹೆಸರು, 13 ಹೆಕ್ಟೇರ್‌ ಉದ್ದು, 9 ಹೆಕ್ಟೇರ್‌ ತೊಗರಿ ಮತ್ತು 12 ಹೆಕ್ಟೇರ್‌ ಸೋಯಾ ಸೇರಿ ಒಟ್ಟು 50 ಹೆಕ್ಟೇರ್‌ ಬೆಳೆ ಹಾಳಾಗಿದೆ.

Advertisement

ಚಿಟಗುಪ್ಪದಲ್ಲಿ 10 ಹೆಕ್ಟೇರ್‌ ಹೆಸರು, 10 ಹೆಕ್ಟೇರ್‌ ಉದ್ದು ಸೇರಿ 20 ಹೆಕ್ಟೇರ್‌ ಬೆಳೆ ಹಾಳಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟಾರೆ 390 ಹೆಕ್ಟೇರ್‌ ಹೆಸರು, 402 ಹೆಕ್ಟೇರ್‌ ಉದ್ದು, 638 ಹೆಕ್ಟೇರ್‌ ತೊಗರಿ ಮತ್ತು 1,210 ಹೆಕ್ಟೇರ್‌ ಸೋಯಾ ಸೇರಿ ಒಟ್ಟು 2,641 ಹೆಕ್ಟೇರ್‌ ಬೆಳೆ ಹಾಳಾಗಿದೆ.ಇದನ್ನು ಹೊರತುಪಡಿಸಿ ಔರಾದ್‌ ತಾಲೂಕಿನಲ್ಲಿ 28 ಹೆಕ್ಟೇರ್‌, ಕಮಲನಗರ ತಾಲೂಕಿನಲ್ಲಿ 45 ಹೆಕ್ಟೇರ್‌, ಬಸವಕಲ್ಯಾಣ ತಾಲೂಕಿನಲ್ಲಿ 44 ಹೆಕ್ಟೇರ್‌, ಹುಲಸೂರು ತಾಲೂಕಿನಲ್ಲಿ 7 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳೂ ಹಾಳಾಗಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next