ಕೋಸ್ಟಲ್‌ವುಡ್‌ನ ಕೆಲವು ಸಿನೆಮಾಗಳನ್ನು ಬಿಟ್ಟರೆ ಉಳಿದ ಸಿನೆಮಾಗಳಿಗೆ 2019 ನಿರೀಕ್ಷೆಯಷ್ಟು ಫಲ ನೀಡಿರಲಿಲ್ಲ. ಅದರಲ್ಲಿಯೂ 12 ತಿಂಗಳಲ್ಲಿ 10 ಸಿನೆಮಾ ಬಿಡುಗಡೆಯಾಗುವ ಮುಖೇನ ಈ ಹಿಂದಿನ ಎಲ್ಲ ವರ್ಷಕ್ಕಿಂತ ಕಡಿಮೆ ಸಿನೆಮಾ ಬಿಡುಗಡೆಯಾದಂತಾಗಿದೆ. ಹಾಗೆಂದು ನಿರಾಸೆ ಪಡುವಂತೆಯೂ ಇಲ್ಲ; ಯಾಕೆಂದರೆ 2020 ತುಳುಚಿತ್ರರಂಗದ ಪಾಲಿಗೆ ಹಲವು ಹೊಸತನಗಳನ್ನು ನೀಡಬಹುದು ಎಂಬ ಆಶಾಭಾವನೆಯಲ್ಲಿದೆ. ಯಾಕೆಂದರೆ ಈ ವರ್ಷ ತೆರೆಗೆ ಬರಲಿರುವ ಸಿನೆಮಾಗಳ ಸಂಖ್ಯೆ ಸದ್ಯದ ಪ್ರಕಾರ 27.
ಸದ್ಯ ಎರಡು ಸಿನೆಮಾಗಳು ಇದೇ ತಿಂಗಳಿನಲ್ಲಿ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೋಸ್ಟಲ್‌ವುಡ್‌ಗೆ ಹೊಸ ವರ್ಷ ಹೊಸ ನಿರೀಕ್ಷೆಯನ್ನು ತರಲಿದೆ. ಆ ಪೈಕಿ ನಾಳೆ ಬಿಡುಗಡೆಯಾಗಲಿರುವ “ಕುದ್ಕನ ಮದೆ’¾ ಒಂದೆಡೆಯಾದರೆ; ಜ. 10ರಂದು ಬಿಡುಗಡೆಯಾಗಲಿರುವ “ರಡ್ಡ್ ಎಕ್ರೆ’ ಕೋಸ್ಟಲ್‌ವುಡ್‌ಗೆ ಹೊಸ ದಾರಿ ತಂದುಕೊಡಲಿದೆ.
ಕೋಡಿಕಲ್ ವಿಶ್ವನಾಥ್ ನಿರ್ದೇಶನದ “ಎನ್ನ’ ಸಿನೆಮಾ ಪ್ರೇಮಿಗಳ ದಿನಾಚರಣೆಯಾಗಿರುವ ಫೆ. 14ರಂದು ಕರಾವಳಿಯಾದ್ಯಂತ ತೆರೆ ಕಾಣಲಿದೆ. ಎ. 3ಕ್ಕೆ ಸೂರಜ್ ಶೆಟ್ಟಿ ನಿರ್ದೇಶನದ “ಇಂಗ್ಲೀಷ್’ ಸಿನೆಮಾ ಬಿಡುಗಡೆಯಾಗುವುದು ಬಹುತೇಕ ಪಕ್ಕಾ ಆಗಿದೆ. ಅದಾದ ಬಳಿಕ ರಾಮ್ ಶೆಟ್ಟಿ ನಿರ್ದೇಶನದ “ಏರೆಗಾವುಯೆ ಕಿರಿಕಿರಿ’ ಬರಲಿದೆ. ಬಳಿಕ ಡಾ| ಸುರೇಶ್ ಚಿತ್ರಾಪುರ ನಿರ್ದೇಶನದ “ಇಲ್ಲೊಕ್ಕೆಲ್’ ಸಿನೆಮಾ, ಶೋಭರಾಜ್ ಪಾವೂರು ನಿರ್ದೇಶನದ “ಪೆಪ್ಪೆರೆರೆ ಪೆರೆರೆರೆ’, ಮಹೇಂದ್ರ ಕುಮಾರ್ ಅವರ “ಕಾರ್ನಿಕೆದ ಕಲ್ಲುರ್ಟಿ’ ಸಿನೆಮಾಗಳು ಬಿಡುಗಡೆಯ ತವಕದಲ್ಲಿವೆ. ಇವಿಷ್ಟೇ ಅಲ್ಲ; ಚಿತ್ರೀಕರಣ ಮುಗಿಸಿರುವ ರಾಹುಕಾಲ ಗುಳಿಗಕಾಲ, ಗಂಟ್ ಕಲ್ವೆರ್, ಪ್ರವೇಶ, ತಂಬಿಲ ಸೇರಿದಂತೆ ಹಲವು ಸಿನೆಮಾಗಳು ಕೂಡ ಬಿಡುಗಡೆಯ ನಿರೀಕ್ಷೆಯಲ್ಲಿವೆ. ಉಳಿದಂತೆ ಗಬ್ಬರ್ ಸಿಂಗ್, ಜೈ ಮಾರುತಿ ಯುವಕ ಮಂಡಲ, ತುಳುನಾಡ್‌ದ ಮಟ್ಟೆಲ್, ಭೋಜರಾಜ್ ಎಂಬಿಬಿಎಸ್, ಬಲಿಪೆ, ಕಟ್ಟದ ಕೋರಿ, ಲಾಸ್ಟ್ ಬೆಂಚ್, ರಾ..ರಾ.., ವಿಕ್ರಾಂತ್, ಮಾಜಿ ಮುಖ್ಯಮಂತ್ರಿ, ನಂಬುಗೆದ ಕೊರಗಜ್ಜ, ಜ್ಯೋತಿ ಸರ್ಕಲ್, ಕುಂಟಿಬೈಲ್ ಕುಂಟಮ್ಮ, ರಾಮ ಕೃಷ್ಣ ಗೋವಿಂದ, 3+3=ಆಯಿಜಿ ಸೇರಿದಂತೆ ಹಲವು ಹೊಸ ಹೊಸ ಹೆಸರು ಕೇಳಿಬರುತ್ತಿವೆ.