Advertisement

ಎರಡು ತಾಸಲ್ಲಿ ಮೆಟ್ರೋಗೆ 2.70 ಲಕ್ಷ ಆದಾಯ!

12:22 PM Apr 15, 2018 | Team Udayavani |

ಬೆಂಗಳೂರು: ಐಪಿಎಲ್‌ ಪಂದ್ಯದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಮೆಟ್ರೋ ರೈಲುಗಳ ಸಂಚಾರ ಸೇವೆಯನ್ನು ಎರಡು ತಾಸು ವಿಸ್ತರಿಸಿದ ಹಿನ್ನೆಲೆಯಲ್ಲಿ “ನಮ್ಮ ಮೆಟ್ರೋ’ಗೆ ಸುಮಾರು 2.70 ಲಕ್ಷ ರೂ. ಆದಾಯ ಹರಿದುಬಂದಿದೆ. 

Advertisement

ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ವೀಕ್ಷಣೆಗೆ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಶುಕ್ರವಾರ ತಡರಾತ್ರಿ ಮೆಟ್ರೋ ರೈಲು ಎರಡು ತಾಸು ಹೆಚ್ಚುವರಿ ಕಾರ್ಯಾಚರಣೆ ಮಾಡಿತು. ಈ ಅವಧಿಯಲ್ಲಿ 10,218 ಜನ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದು, ಇದರಿಂದ 2.70 ಲಕ್ಷ ರೂ. ಆದಾಯ ಬಂದಿದೆ. ಇದರಿಂದ ಇಡೀ ದಿನದ ಆದಾಯ ಅಂದಾಜು 99 ಲಕ್ಷ ರೂ. ತಲುಪಿತು. 

ಒಟ್ಟಾರೆ 10 ಸಾವಿರ ಪ್ರಯಾಣಿಕರಲ್ಲಿ ನೇರಳೆ ಮಾರ್ಗದಿಂದಲೇ ಅತಿ ಹೆಚ್ಚು, 7,263 ಜನ ಪ್ರಯಾಣಿಸಿದ್ದು, 4,903 ರಿಟರ್ನ್ ಜರ್ನಿ ಪೇಪರ್‌ ಟಿಕೆಟ್‌ಗಳು ಮಾರಾಟವಾಗಿವೆ. ಇದರಿಂದ 2,26,276 ರೂ. ಹೆಚ್ಚುವರಿ ಆದಾಯ ಬಂದಿದೆ. ಅದೇ ರೀತಿ, ಹಸಿರು ಮಾರ್ಗದಲ್ಲಿ 2,955 ಜನ ಪ್ರಯಾಣಿಸಿದ್ದು, 564 ರಿಟರ್ನ್ ಜರ್ನಿ ಪೇಪರ್‌ ಟಿಕೆಟ್‌ಗಳು ಮಾರಾಟವಾಗಿದ್ದು, 44,112 ರೂ. ಸಂಗ್ರಹವಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ತಿಳಿಸಿದೆ.

ತಡರಾತ್ರಿ 12.30ರವರೆಗೂ ಪ್ರತಿ 15 ನಿಮಿಷಕ್ಕೊಂದು ಮೆಟ್ರೋ ರೈಲು ಕಾರ್ಯಾಚರಣೆ ನಡೆಸಿದ್ದು, ಪಂದ್ಯಾವಳಿ ಮುಗಿದ ನಂತರ ಕಬ್ಬನ್‌ ಉದ್ಯಾನ ಮತ್ತು ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣಗಳಿಂದ 50 ರೂ. ಮುಖಬೆಲೆಯ “ರಿಟರ್ನ್ ಜರ್ನಿ ಪೇಪರ್‌ ಟಿಕೆಟ್‌’ ಪರಿಚಯಿಸಲಾಗಿತ್ತು. ಇದರಿಂದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿನ ಯಾವುದೇ ನಿಲ್ದಾಣಗಳಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next