ಕಾಸರಗೋಡು: ಕಳೆದ ಎರಡು ತಿಂಗಳಲ್ಲಿ ಕಾಸರಗೋಡು ಸಹಿತ ಕೇರಳದ ಆರು ಜಿಲ್ಲೆಗಳಿಗೆ 264 ಕೋಟಿ ರೂ. ಹವಾಲಾ ಹಣ ಹರಿದು ಬಂದಿರುವುದಾಗಿ ಗುಪ್ತಚರ ವಿಭಾಗಕ್ಕೆ ಮಾಹಿತಿ ಲಭಿಸಿದೆ.
ಕಾಸರಗೋಡು, ಕಣ್ಣೂರು, ಮಲಪ್ಪುರಂ, ತೃಶ್ಶೂರ್, ಕೋಯಿ ಕ್ಕೋಡ್ ಮತ್ತು ಕೊಲ್ಲಂ ಜಿಲ್ಲೆ ಗಳಲ್ಲಿ ಹವಾಲಾ ಹಣ ವ್ಯವಹಾರ ನಡೆದಿದೆ ಎಂಬ ಕಳವಳಕಾರಿ ಮಾಹಿತಿ ಹೊರ ಬಿದ್ದಿದೆ. ಇಲ್ಲಿಗೆ ಹರಿದು ಬಂದಿರುವ ಹವಾಲಾ ಹಣಕ್ಕೆ ವಿವಿಧ ರಾಜ್ಯಗಳ ನಂಟು ಇದೆ ಎಂಬ ಮಾಹಿತಿಯೂ ಲಭಿಸಿದೆ. ಈ ಬಗ್ಗೆ ಕೇಂದ್ರ ಗುಪ್ತಚರ ವಿಭಾಗ ತನಿಖೆ ನಡೆಸುತ್ತಿದೆ.
ಹವಾಲಾ ಹಣ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ತಲಪಾಡಿ ಯಲ್ಲಿ ಕರ್ನಾಟಕ ಪೊಲೀಸರು ವಾಹನ ತಪಾಸಣೆ ಬಿಗು ಗೊಳಿಸಿ ದ್ದಾರೆ. ಕೇರಳದಿಂದ ಹಾದು ಹೋಗುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.
ಕಾಸರಗೋಡು ಸಹಿತ ರಾಜ್ಯದ ವಿವಿಧೆಡೆಗಳಿಗೆ ವಾಹನಗಳಲ್ಲೇ ಹವಾಲಾ ಹಣ ಹರಿದು ಬರುತ್ತಿದೆ. ಸಮುದ್ರ ಮಾರ್ಗವಾಗಿಯೂ ಹರಿದು ಬರುತ್ತಿದೆ ಎಂಬ ಮಾಹಿತಿಯಿದೆ. ಸಮುದ್ರ ಮಾರ್ಗವಾಗಿ ಬರುವ ಹವಾಲಾ ಹಣಕ್ಕೆ ವಿದೇಶಿ ಹಾಗೂ ಉಗ್ರರ ನಂಟು ಇದೆ ಎಂಬ ಮಾಹಿತಿಯೂ ಲಭಿಸಿದೆ.
ಗ್ರಾಮೀಣ ಪ್ರದೇಶಗಳನ್ನು ಕೇಂದ್ರೀಕರಿಸಿ ಕಾರ್ಯವೆಸಗುವ ವ್ಯಕ್ತಿಗಳನ್ನು ಗುರುತಿಸಿ ಅವರ ಬ್ಯಾಂಕ್ ಖಾತೆಗಳಿಗೂ ಹಣ ರವಾನಿಸಲಾಗುತ್ತಿದೆ ಎಂದು ತನಿಖಾ ತಂಡ ಪತ್ತೆಹಚ್ಚಿದೆ. ಸಮುದ್ರ ಮಾರ್ಗವಾಗಿ ಹಣ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್‌ಗಳ ಸಹಾಯದಿಂದ ಸಮುದ್ರದಲ್ಲಿ ಬೋಟುಗಳನ್ನು ತಪಾಸಣೆ ಮಾಡಲಾಗುತ್ತಿದೆ.