ರಬಕವಿ-ಬನಹಟ್ಟಿ: ನೆರೆಯ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಕೃಷ್ಣಾ ನದಿ ಒಡಲು ಬಿಟ್ಟು ಹೊರಗೆ ಮತ್ತು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.
ಹಿಪ್ಪರಗಿ ಜಲಾಶಯದಿಂದ ಬಂದಷ್ಟೇ ಪ್ರಮಾಣದಲ್ಲಿ ನೀರನ್ನು ಬಿಡುತ್ತಿದ್ದರೂ, ಹಿನ್ನೀರು ಬಹಳಷ್ಟು ಪ್ರಮಾಣದಲ್ಲಿ ವ್ಯಾಪಿಸಿಕೊಂಡಿದೆ.
ಅವಳಿ ನಗರಗಳ ಜಾಕವೆಲ್‌ಗೆ ಹೋಗುವ ಮಾರ್ಗ ಸಂಪೂರ್ಣವಾಗಿ ನಡುಗಡ್ಡೆಯಾಗಿದೆ. ಅದೇ ರೀತಿಯಾಗಿ ಸ್ಥಳೀಯ ಡೆಂಪೊ ಡೈರಿಯ ಮೂಲಕ ಮದನಮಟ್ಟಿ ಹಾಗೂ ಹಳಿಂಗಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅರ್ಧ ಕಿ.ಮೀದಷ್ಟು ನೀರಿನಲ್ಲಿ ನಿಂತಿದ್ದು ಈ ಮಾರ್ಗದ ರಸ್ತೆ ಬಂದಾಗಿದೆ.
ಮದನಮಟ್ಟಿ ಗ್ರಾಮದ ಬೆಟ್ಟ ಪ್ರದೇಶದಲ್ಲಿರುವ ರಬಕವಿ ಬನಹಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೋಗುವ ನೂರಾರು ವಿದ್ಯಾರ್ಥಿಗಳು ಅಪಾಯ ಮಟ್ಟದಲ್ಲಿರುವ ನೀರನ್ನು ದಾಟಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಿಪ್ಪರಗಿ ಜಲಾಶಯಕ್ಕೆ ಭಾನುವಾರ 263133 ಕ್ಯೂಸೆಕ್ ನೀರು ಹರಿದು ಬಂದಿದ್ದು, 262383 ಕ್ಯೂಸೆಕ್ಸ್ ಪ್ರಮಾಣದ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಬಿಡಲಾಗುತ್ತಿದೆ. ಹಿಪ್ಪರಗಿ ಜಲಾಶಯದ ನೀರಿನ ಮಟ್ಟ 525.20 ಮೀ. ನಷ್ಟಾಗಿದೆ.
ಕೃಷ್ಣಾ ಜಲಾನಯನ ಪ್ರದೇಶಗಳಾದ ಕೊಯ್ನಾ 57 ಮಿ.ಮೀ, ನಾವುಜಾ: 89 ಮಿ.ಮೀ, ಮಹಾಬಳೇಶ್ವರ: 105 ಮಿ.ಮೀ, ವಾರಣಾ: 48 ಮಿ.ಮೀ, ರಾಧಾ ನಗರಿ: 98 ಮಿ.ಮೀ, ಮತ್ತು ದೂಧಗಂಗಾ ಪ್ರದೇಶದಲ್ಲಿ 36 ಮಿ.ಮೀ ಮಳೆಯಾದ ವರದಿಯಾಗಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ ತಿಳಿಸಿದರು.
ರಬಕವಿ ಬನಹಟ್ಟ ಜಾಕವೆಲ್‌ಗಳಿಗೆ, ಮದನಮಟ್ಟಿ ಮತ್ತು ಹಳಿಂಗಳಿ ಗ್ರಾಮಕ್ಕೆ ಡೆಂಪೊ ಡೈರಿಯ ಮೂಲಕ ಸಂಕಲ್ಪ ಕಲ್ಪಿಸುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.