Advertisement

26 ಗ್ರಾಮದವರಿಗೆ ತಪ್ಪಿಲ್ಲ ಕುಂದಾಪುರದ ಅಲೆದಾಟ

02:16 AM Mar 06, 2020 | Sriram |

ಬೈಂದೂರು: ಜನಸಾಮಾನ್ಯರಿಗೆ ಅನುಕೂಲ ವಾಗಬೇಕು ಎನ್ನುವ ನೆಲೆಯಲ್ಲಿ ಜನಪ್ರತಿನಿಧಿಗಳು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿ ಕ್ಷೇತ್ರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತರುತ್ತಾರೆ. ಆದರೆ ಅಭಿವೃದ್ಧಿಗೆ ಯೋಜನೆ ರೂಪಿಸಬೇಕಾದ ಅಧಿಕಾರಿಗಳ ನಿಷ್ಕಾಳಜಿ ಹಾಗೂ ಇಚ್ಛಾಶಕ್ತಿ ಕೊರತೆಯಿಂದ ಹಲವು ವರ್ಷಗಳವರೆಗೆ ಯೋಜನೆಗಳು ಸಾಕಾರವಾಗದಿರುವುದು ವ್ಯವಸ್ಥೆಯ ಲೋಪವಾಗಿದೆ. ಈ ನಿಟ್ಟಿನಲ್ಲಿ ತಾಲೂಕು ಘೋಷಣೆಯಾಗಿ ಎರಡು ವರ್ಷ ಕಳೆದರೂ ಬಹುಮುಖ್ಯವಾದ ಭೂನ್ಯಾಯ ಮಂಡಳಿ ಕಚೇರಿ ಬೈಂದೂರಿನಲ್ಲಿ ಆರಂಭವಾಗದೆ ಪ್ರತಿದಿನ 26 ಗ್ರಾಮದ ಜನರು 45 ಕಿ.ಮೀ. ದೂರದ ಕುಂದಾಪುರಕ್ಕೆ ತೆರಳುವಂತಾಗಿದೆ.

Advertisement

ಬೈಂದೂರಿನ 8,000 ಕಡತ
ಕುಂದಾಪುರ ಭೂನ್ಯಾಯ ಮಂಡಳಿಯಲ್ಲಿ ಬೈಂದೂರು ವ್ಯಾಪ್ತಿಯಲ್ಲಿ 8 ಸಾವಿರ ಕಡತಗಳಿವೆ. ಅವುಗಳಲ್ಲಿ 90 ಕಡತ ಪ್ರಕ್ರಿಯೆಯಲ್ಲಿವೆೆ. ಬೈಂದೂರು ಭೂನ್ಯಾಯ ಮಂಡಳಿ ಕಚೇರಿ ಆರಂಭಕ್ಕೆ ಮೊದಲು ಸಮಿತಿ ರಚಿಸಬೇಕು ಎಂದು ಅಧಿಕಾರಿಗಳು ತಿಳಿಸಿದ ಬಳಿಕ ಶಾಸಕರು ಹಾಗೂ ಸಂಸದರ ಮಾರ್ಗದರ್ಶನದಲ್ಲಿ ಕೊಲ್ಲೂರಿಗೆ ಕಂದಾಯ ಸಚಿವರು ಭೇಟಿ ನೀಡಿದ ಸಂದರ್ಭ ಈ ವಿಷಯ ಪ್ರಸ್ತಾಪಿಸಿದಾಗ ಕೇವಲ 15 ದಿನದಲ್ಲಿ ಹೊಸ ಸಮಿತಿ ಅಧಿಕೃತಗೊಳಿಸಿದ್ದರು. ಆದರೆ ಅಧಿಕಾರಿಗಳು ಮಾತ್ರ ಬೈಂದೂರಿನಲ್ಲಿ ಭೂನ್ಯಾಯ ಮಂಡಳಿ ಆರಂಭಿಸಲು ಮೀನಮೇಷ ಎಣಿಸುತ್ತಿದ್ದಾರೆ. ಹೀಗಾಗಿ ತತ್‌ಕ್ಷಣ ಆರಂಭವಾದರೆ ತಾಲೂಕು ಕೇಂದ್ರದ ಘನತೆ ಹೆಚ್ಚುವ ಜತೆಗೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಇದರ ಜತೆಗೆ ಪಡಿತರ ಆಹಾರ ವಿಭಾಗ ಕೂಡ ಆದಷ್ಟು ಬೇಗ ಕಾರ್ಯಾರಂಭಿಸಬೇಕಿದೆ.

ಏನಿದು ಭೂನ್ಯಾಯ ಮಂಡಳಿ ಸಮಸ್ಯೆ?
ಕರ್ನಾಟಕ ಸರಕಾರ ಅಕ್ರಮ -ಸಕ್ರಮ 94/ಸಿ ಸೇರಿದಂತೆ ಭೂ ಸುಧಾರಣಾ ಕಾಯ್ದೆಯ ಪ್ರಕರಣಗಳನ್ನು ಭೂನ್ಯಾಯ ಮಂಡಳಿಯಲ್ಲಿ ಇತ್ಯರ್ಥಗೊಳಿಸುವ ಅವಕಾಶ ನೀಡಿದೆ.ಕರ್ನಾಟಕ ಭೂಸುಧಾರಣೆ ಕಾಯ್ದೆ 1961ರ ಕಲಂ 48(1)ರ ಅನುಸಾರ ಕರ್ನಾಟಕ ಸರಕಾರ ನಾಲ್ಕು ಜನ ಅಧಿಕಾರೇತರ ಸದಸ್ಯರನ್ನೊಳಗೊಂಡ ಭೂನ್ಯಾಯ ಮಂಡಳಿಗಳನ್ನು ಪ್ರತಿ ತಾಲೂಕಿಗೆ ಒಂದರಂತೆ ರಚಿಸಬಹುದಾಗಿದೆ. ಅದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬ ವ್ಯಕ್ತಿ ಇರಬೇಕು. ರಾಜ್ಯದಲ್ಲಿ 176 ಭೂನ್ಯಾಯ ಮಂಡಳಿ ರಚಿಸಲಾಗಿದೆ. ಉಡುಪಿ, ದ.ಕ., ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣ ಬಾಕಿ ಇರುವುದರಿಂದ ಈ ಜಿಲ್ಲೆಗಳಲ್ಲಿ 12 ಹೆಚ್ಚುವರಿ ಭೂನ್ಯಾಯ ಮಂಡಳಿ ರಚಿಸಲಾಗಿದೆ. ಬೈಂದೂರು ತಾಲೂಕು ಅಧಿಕೃತ ಘೋಷಣೆಯಾಗುವ ಮೊದಲಿನಿಂದಲೂ ಕುಂದಾಪುರ ತಾಲೂಕಿಗೆ ಒಂದು ಭೂನ್ಯಾಯ ಮಂಡಳಿ ಇದೆ. ಈ ಮಂಡಳಿಯಿಂದ ಬೈಂದೂರಿನಲ್ಲಿ ನಿಗದಿಪಡಿಸಿದ ಕೆಲವು ದಿನಗಳಂದು ಸಿಟ್ಟಿಂಗ್‌ ನಡೆಸಲಾಗುತಿತ್ತು. ಆದರೆ ಭೂನ್ಯಾಯ ಮಂಡಳಿ ಕಡತ ವಿಲೇವಾರಿಗೆ ಕುಂದಾಪುರಕ್ಕೆ ತೆರಳಬೇಕಾಗಿದೆ. ಪ್ರಸ್ತುತ ಬೈಂದೂರು ತಾಲೂಕು ಘೋಷಣೆಯಾಗಿದೆ. ಆದರೆ ಭೂನ್ಯಾಯ ಮಂಡಳಿ ಪ್ರತಿನಿಧಿಗಳಿಗೆ ಬೈಂದೂರಿಗೆ ಪ್ರಾಧಾನ್ಯ ನೀಡಿದ್ದರೂ ಕಡತ ವಿಲೇವಾರಿಗೆ ಕುಂದಾಪುರಕ್ಕೆ ತೆರಳಬೇಕಾಗಿರುವುದರಿಂದ ಇಲ್ಲಿನ ಜನರಿಗೆ ಸಮಸ್ಯೆಯಾಗಿ ಕಾಡುತ್ತಿದೆ.

ಶಾಸಕರು, ಸಂಸದರ ನಿರಂತರ ಪ್ರಯತ್ನ
ಬೈಂದೂರು ತಾಲೂಕು ಘೋಷಣೆಯಾದ ಬಳಿಕ ಮಾದರಿ ತಾಲೂಕು ರಚನೆಗೆ ಸಂಸದರು ಹಾಗೂ ಶಾಸಕರು ನಿರಂತರ ಪ್ರಯತ್ನವನ್ನು ಈ ಸಂದರ್ಭದಲ್ಲಿ ಉಲ್ಲೇಖೀಸಬೇಕಾಗುತ್ತದೆ. ಈಗಾಗಲೇ ತಾಲೂಕಿಗೆ ಅಗತ್ಯ ಇರುತ್ತದೆ. ಈಗಿರುವ ಮಿನಿ ವಿಧಾನಸೌಧ, ಬಸ್‌ ನಿಲ್ದಾಣ, ಅಗ್ನಿಶಾಮಕ ದಳ ಮುಂತಾದ ಕಚೇರಿ ಆರಂಭಕ್ಕೆ ಹಸಿರು ನಿಶಾನೆ ದೊರೆತಿದೆ. ಇದರಲ್ಲಿ ಬಹುಮುಖ್ಯವಾಗಿರುವುದು ನ್ಯಾಯಾಲಯ ಸಂಕೀರ್ಣ ಹಾಗೂ ಭೂನ್ಯಾಯ ಮಂಡಳಿ ಕಚೇರಿ ಸ್ಥಾಪನೆಯಾಗಿದೆ.

ಶೀಘ್ರ ಕಚೇರಿ ಆರಂಭ
ಈಗಾಗಲೇ ಬೈಂದೂರಿನಲ್ಲಿ ಸಿಟ್ಟಿಂಗ್‌ ನಡೆಸಲು ದಿನ ನಿಗದಿಪಡಿಸಲಾಗಿದೆ. ಅತೀ ಶೀಘ್ರದಲ್ಲಿ ಭೂನ್ಯಾಯ ಮಂಡಳಿ ಕಡತ ಕಚೇರಿ ಆರಂಭಿಸಲು ಜಿಲ್ಲಾಧಿಕಾರಿಗಳ ಜತೆ ಮಾತನಾಡಿದ್ದೇನೆ. ಸಂಬಂಧಪಟ್ಟ ಸ್ಥಳವನ್ನು ಬಳಸಿಕೊಂಡು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೈಂದೂರಿನಲ್ಲಿ ನೂರಕ್ಕೆ ನೂರು ಭೂನ್ಯಾಯ ಮಂಡಳಿ ಕಚೇರಿ ಆರಂಭಿಸುತ್ತೇನೆ.
– ಬಿ.ಎಂ. ಸುಕುಮಾರ್‌ ಶೆಟ್ಟಿ,
ಶಾಸಕರು ಬೈಂದೂರು ವಿಧಾನಸಭಾ ಕ್ಷೇತ್ರ

Advertisement

ಜನರ ಸಂಕಷ್ಟಕ್ಕೆ ಶೀಘ್ರ ತೆರೆ
ಕುಂದಾಪುರ ಸಹಾಯಕ ನಿರೀಕ್ಷಕರಿಗೆ ಹಾಗೂ ಬೈಂದೂರು ತಹಶೀಲ್ದಾರರಿಗೆ ಎರಡು ಮೂರು ಕಡೆ ಭೂ ನ್ಯಾಯಮಂಡಳಿಗೆ ಅನುಕೂಲವಾಗುವ ಸ್ಥಳ ತೋರಿಸಲಾಗಿದೆ. ಒಂದು ಕಡತಗಳಿಗಾಗಿ ಇಲ್ಲಿನ ಜನರು ಕುಂದಾಪುರಕ್ಕೆ ಹೋಗುವುದು ತುಂಬಾ ತ್ರಾಸದಾಯಕವಾಗಿದೆ. ಸಮಿತಿ ವತಿಯಿಂದ ಕೂಡ ಬೈಂದೂರಿನಲ್ಲಿ ಕಚೇರಿ ಆರಂಭಿಸಲು ಒತ್ತಡ ತರಲಾಗಿದೆ. ಶೀಘ್ರ ಆರಂಭವಾಗುವ ಸಾಧ್ಯತೆಗಳಿವೆ.
– ಜೈಸನ್‌ ಎಂ.ಡಿ., ಭೂನ್ಯಾಯ ಮಂಡಳಿ ಸದಸ್ಯ

ಸ್ಥಳದ ಲಭ್ಯತೆ ನೋಡಿ ನಿಗದಿ
ಈಗಾಗಲೇ ಒಂದೆರಡು ಕಡೆ ಅವಕಾಶ ಕಲ್ಪಿಸುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ತಾಲೂಕು ಕಚೇರಿ ಸಮೀಪ ಇರುವ ಸ್ಥಳದ ಲಭ್ಯತೆ ನೋಡಿ ನಿಗದಿಮಾಡಬೇಕಾಗುತ್ತದೆ. ಬೈಂದೂರು ಜನರಿಗೆ ಕಚೇರಿ ಅತ್ಯವಶ್ಯವಾಗಿದೆ. ಹೀಗಾಗಿ ಶೀಘ್ರ ಈ ಬಗ್ಗೆ ಗಮನಹರಿಸಿ ಜನರಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ಮಾಡಲಾಗುತ್ತದೆ.
– ಬಿ.ಪಿ. ಪೂಜಾರ್‌, ತಹಶೀಲ್ದಾರ್‌ ಬೈಂದೂರು.

-ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next