ಜೈಪುರ:ಸುಮಾರು ಹತ್ತು ವರ್ಷಗಳಲ್ಲಿ ರಣಥಂಬೋರ್ ನ್ಯಾಷನಲ್ ಪಾರ್ಕ್(ರಾಜಸ್ಥಾನ್)ನಲ್ಲಿ 26 ಹುಲಿಗಳು ನಾಪತ್ತೆಯಾಗಿರುವ ಅಂಶ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ(ಎನ್ ಟಿಸಿಎ) ಸದಸ್ಯೆ ದಿಯಾ ಕುಮಾರಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಪ್ರಕಾಶ್ ಜಾವ್ಡೇಕರ್ ಗೆ ಪತ್ರ ಬರೆಯುವ ಮೂಲಕ ವಿಷಯ ಬಹಿರಂಗವಾಗಿದೆ.
ನಾಪತ್ತೆಯಾದ ಹುಲಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ದಿಯಾ ಕುಮಾರಿ ವಿನಂತಿಸಿಕೊಂಡಿದ್ದಾರೆ.
ಫೆಬ್ರವರಿ 19ರಂದು ಕೇಂದ್ರ ಸಚಿವರಿಗೆ ಬರೆದಿರುವ ಪತ್ರದಲ್ಲಿ, ರಾಜ್ಯ ಸರ್ಕಾರಕ್ಕೆ ಇತ್ತೀಚೆಗೆ ಸಲ್ಲಿಸಲಾಗಿರುವ ಗೌಪ್ಯ ವರದಿಯಲ್ಲಿ, ರಣಥಂಭೋರ್ ನ್ಯಾಷನಲ್ ಪಾರ್ಕ್ ನಲ್ಲಿ 116 ಹುಲಿಗಳಿವೆ. ಇದರಲ್ಲಿ 26 ಹುಲಿಗಳು ಪಾರ್ಕ್ ನಿಂದ ನಾಪತ್ತೆಯಾಗಿರುವುದಾಗಿ ತಿಳಿಸಿದೆ.
ಈ ನ್ಯಾಷನಲ್ ಪಾರ್ಕ್ ಹುಲಿಗಳ ಸಂರಕ್ಷಣೆಗೆ ಇದ್ದಿರುವುದು ವಿನಃ, ಹುಲಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಅಲ್ಲ. ಅಧಿಕಾರಿಗಳು ಕೂಡಾ ಅರೆಮನಸ್ಸಿನಿಂದ, ಬೇಜವಾಬ್ದಾರಿತನದಿಂದ ಕಾರ್ಯ ನಿರ್ವಹಿಸಿದ್ದರ ಪರಿಣಾಮ ಇದಾಗಿದೆ ಎಂದು ಪತ್ರದಲ್ಲಿ ದಿಯಾ ಉಲ್ಲೇಖಿಸಿದ್ದಾರೆ.
ಹುಲಿಗಳ ನಾಪತ್ತೆ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ಇನ್ಮುಂದೆ ಇಂತಹ ಘಟನೆ ನಡೆಯದಂತೆ ತಡೆಯಬೇಕಾಗಿದೆ ಎಂದು ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.