Advertisement
26 ಕಿ.ಮೀ. – 154 ಕೋ. ರೂ. ವೆಚ್ಚಪ್ರಥಮ ಹಂತದಲ್ಲಿ ಸುಮಾರು 80 ಕೋ.ರೂ. ವೆಚ್ಚದಲ್ಲಿ ಮಾರನಹಳ್ಳಿಯಿಂದ ಕೆಂಪುಹೊಳೆಯ ವರೆಗೆ ಸುಮಾರು 13 ಕಿ.ಮೀ. ಕಾಂಕ್ರೀಟ್ ಕಾಮಗಾರಿ ಕೈಗೊಂಡು ಮೇಲ್ದರ್ಜೆಗೇರಿಸಲಾಗಿತ್ತು. ಈಗ ಎರಡನೇ ಹಂತದಲ್ಲಿ 12.38 ಕಿ.ಮೀ. ಉದ್ದದ ಕೆಂಪುಹೊಳೆಯಿಂದ ಅಡ್ಡಹೊಳೆ ವರೆಗೆ 74 ಕೋ.ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣ ಪೂರ್ಣಗೊಂಡಿದೆ. ಈ ರಸ್ತೆಯಲ್ಲಿ ಒಟ್ಟು 74 ಮೋರಿಗಳ ಗುರಿ ಇರಿಸಲಾಗಿದ್ದು, ಮೂರು ಕಿರು ಸೇತುವೆಗಳ ಕೆಲಸ ಪ್ರಸ್ತುತ ಬಿರುಸಿನಿಂದ ನಡೆಯುತ್ತಿದೆ. ಈ ಸೇತುವೆಗಳ ಎರಡೂ ಭಾಗದ ಕೂಡು ರಸ್ತೆಗಳ ಕಾಂಕ್ರೀಟ್ ಕೆಲಸ ಸದ್ಯ ನಡೆಯುತ್ತಿದೆ. ವಾರದ ಒಳಗೆ ಇದು ಪೂರ್ಣಗೊಂಡು ಜುಲೈ ಮೊದಲ ವಾರದಲ್ಲಿ ಸಂಚಾರಕ್ಕೆ ಲಭ್ಯವಾಗಬಹುದು.
1ನೇ ಹಂತದ ಕಾಮಗಾರಿ ನಡೆದಿದ್ದು 2015ರಲ್ಲಿ. ಇದಕ್ಕಾಗಿ ಆ ವರ್ಷ ಜ. 2ರಿಂದ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ ಕಾಂಕ್ರಿಟ್ ಕಾಮಗಾರಿ ಆರಂಭವಾದದ್ದು ಮಾತ್ರ ಎ. 20ಕ್ಕೆ. ಬಳಿಕ ಆ. 9ರಂದು ಶಿರಾಡಿ ರಸ್ತೆ ಸಂಚಾರಕ್ಕೆ ಮುಕ್ತಗೊಂಡಿತ್ತು. ಈ ಬಾರಿಯ ಕಾಮಗಾರಿ ಆರಂಭಿಸಿದ್ದು ಈ ವರ್ಷದ ಜ. 20ರಂದು. ಅಲ್ಲಿಂದ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಜುಲೈ ಮೊದಲ ವಾರದಿಂದ ಶಿರಾಡಿ ಸಂಚಾರಕ್ಕೆ ಮುಕ್ತವಾಗಬಹುದು. ಹೀಗಾಗಿ 2 ಹಂತಗಳಲ್ಲಿ ಕಾಮಗಾರಿಯು ಒಟ್ಟು 12 ತಿಂಗಳಲ್ಲಿ ಪೂರ್ಣಗೊಳ್ಳುವಂತಾಗಿದೆ. 2ನೇ ಹಂತದ ಕಾಮಗಾರಿ ವಿಳಂಬ ಯಾಕೆ?
2ನೇ ಹಂತದ ಕಾಮಗಾರಿಯನ್ನು ಟೆಂಡರ್ ಪ್ರಕಾರ 85.28 ಕೋ.ರೂ. ವೆಚ್ಚದಲ್ಲಿ 33.38 ಕಿ.ಮೀ.ವರೆಗೆ ನಡೆಸಬೇಕಿತ್ತು. ಇದರಲ್ಲಿ ಗುಳಗಳಲೆಯಿಂದ ಮಾರನಹಳ್ಳಿ ವರೆಗೆ 21 ಕಿ.ಮೀ. ಡಾಮರೀಕರಣ ಮತ್ತು ಕೆಂಪುಹೊಳೆಯಿಂದ ಅಡ್ಡಹೊಳೆ ವರೆಗೆ 63.104 ಕೋ. ರೂ.ಗಳಲ್ಲಿ 12.38 ಕಿ.ಮೀ. ಕಾಂಕೀಟ್ ಕಾಮಗಾರಿ ಎಂದು ಹೇಳಲಾಗಿತ್ತು. 7 ಮೀ. ಅಗಲಕ್ಕೆ ಡಾಮರೀಕರಣ ಮತ್ತು 8.50 ಮೀ. ಅಗಲಕ್ಕೆ ಕಾಂಕ್ರಿಟ್ ಕಾಮಗಾರಿ ನಡೆಸಬೇಕಿತ್ತು. ಆದರೆ ಚೆನ್ನೈನ ಜಿವಿಆರ್ ಇನ್‌ಫ್ರಾ ಪ್ರಾಜೆಕ್ಟ್ ಗುತ್ತಿಗೆ ಸಂಸ್ಥೆಯು ನಿಗದಿತ 2016ರ ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಿಸಿರಲಿಲ್ಲ. ಫೆಬ್ರವರಿ ಕಳೆದರೂ ಕಾಮಗಾರಿ ಆರಂಭವಾಗುವ ಲಕ್ಷಣ ಗೋಚರಿಸಿರಲಿಲ್ಲ. ಈ ಕಾರಣಕ್ಕೆ ಆ ಗುತ್ತಿಗೆಯನ್ನು ರಾ. ಹೆ. ಇಲಾಖೆ ರದ್ದುಪಡಿಸಿತ್ತು. ಬಳಿಕ ಹೊಸ ಗುತ್ತಿಗೆದಾರರ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳುವಂತಾಯಿತು.
Related Articles
ಗುತ್ತಿಗೆದಾರ ಸಂಸ್ಥೆ ಓಷಿಯನ್ ಕನ್‌ಸ್ಟ್ರಕ್ಷನ್‌ನ ಪ್ರಮುಖರು ತಿಳಿಸುವಂತೆ, ಮೊದಲುಹಳೆ ರಸ್ತೆಯನ್ನು ಅಗೆದು ರೋಲ್ ಮಾಡಲಾಗಿತ್ತು. ಅದರ ಮೇಲೆ ಜಿಯೋ ಟೆಕ್ಸ್‌ಟೈಲ್ ಪದರವನ್ನು ಹಾಸಿ, ಮೇಲ್ಗಡೆ 15 ಸೆಂ.ಮೀ. ದಪ್ಪದ ಜಲ್ಲಿಕಲ್ಲು ಪದರ ಹಾಸಲಾಗಿತ್ತು. ಮಳೆ ಮತ್ತು ಒರತೆ ನೀರು ಸೋಸಿ ಇಕ್ಕೆಲಗಳ ಚರಂಡಿಗೆ ಹೋಗಬೇಕು ಎನ್ನುವುದು ಇದರ ಹಿಂದಿನ ತಾಂತ್ರಿಕ ಲೆಕ್ಕಾಚಾರ. ಅದರ ಮೇಲೆ “ಡ್ರೈ ಲೀನ್ ಕಾಂಕ್ರೀಟ್’ ಕಾಂಕ್ರೀಟ್ ಪದರವನ್ನು 15 ಸೆಂ. ಮೀ. ದಪ್ಪಗೆ ಹಾಸಲಾಯಿತು. ಇದು ಗಟ್ಟಿಯಾದ ಬಳಿಕ 30 ಸೆ.ಮೀ. ದಪ್ಪಗೆ ಪೇವ್‌ಮೆಂಟ್ ಕ್ವಾಲಿಟಿ ಕಾಂಕ್ರೀಟ್ ಪದರವನ್ನು “ಸ್ಪಿಪ್‌ಫಾರಂ ಪೇವರ್ ಮಷಿನ್’ ಬಳಸಿ ಹಾಸಲಾಯಿತು. ಈ ಮಧ್ಯೆ ಎರಡು ಸ್ಲಾಬ್‌ಗಳ ಮಧ್ಯೆ ಸಂಪರ್ಕ ಏರ್ಪಡಿಸುವ ಡೊವೆಲ್ ಬಾರ್ ಮತ್ತು ಟೈ ಬಾರ್ ಕಬ್ಬಿಣದ ತುಂಡುಗಳನ್ನು ಸ್ವಯಂಚಾಲಿತವಾಗಿ ಈ ಮಷಿನ್ ಮೂಲಕ ಅಳವಡಿಸಲಾಯಿತು. ಕಾಂಕ್ರೀಟ್ ಬದಿ ಮತ್ತು ಮೇಲ್ಭಾಗಕ್ಕೆ ತೆಳುವಾದ ಕ್ಯೂರಿಂಗ್ ದ್ರಾವಣವನ್ನು ಚಿಮುಕಿಸಲಾಗಿದೆ. ಈ ಮೂಲಕ ಕಾಂಕ್ರೀಟ್‌ನೊಳಗಿರುವ ನೀರಿನ ಮಿಶ್ರಣ ಹೊರಗೆ ಆವಿಯಾಗದೆ ಒಳಗೇ ಇದ್ದು ಶೀಘ್ರ ಕ್ಯೂರಿಂಗ್ ಸುಲಭವಾಗಿದೆ. ಜತೆಗೆ ಯಂತ್ರವು ತನ್ನ ದೊರಗು ಬ್ರಶ್ ಮೂಲಕ ರಸ್ತೆಯ ಮೇಲ್ಪದರವನ್ನು ದೊರಗುಗೊಳಿಸಿದೆ.
Advertisement
ಮುಂದಿನ ತಿಂಗಳ ಮೊದಲ ವಾರ ಸಂಚಾರ ಮುಕ್ತಎರಡನೇ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಕಿರು ಸೇತುವೆ ಕೊನೆಯ ಹಂತದಲ್ಲಿದೆ. ಹೀಗಾಗಿ ಮುಂದಿನ ತಿಂಗಳು ಮೊದಲ ವಾರದಲ್ಲಿ ಶಿರಾಡಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಅತ್ಯಂತ ಪರಿಪೂರ್ಣ ರೀತಿಯಲ್ಲಿ 26 ಕಿ.ಮೀ. ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗಿದೆ.
ನಳಿನ್ ಕುಮಾರ್ ಕಟೀಲು, ಸಂಸದರು