Advertisement

ಐಪಿಎಸ್‌ ಆಗಿ ಕರ್ನಾಟಕದ 26 ಮಂದಿ ಅಧಿಕಾರಿಗಳಿಗೆ ಭಡ್ತಿ

05:05 AM Jul 22, 2017 | Team Udayavani |

ಬೆಂಗಳೂರು: ರಾಜ್ಯದ 26 ಮಂದಿ ಕೆಎಸ್‌ಪಿಎಸ್‌ ಅಧಿಕಾರಿಗಳಿಗೆ ಐಪಿಎಸ್‌ಗೆ ಮುಂಭಡ್ತಿ ನೀಡಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಇದೇ ವೇಳೆ 26 ಮಂದಿಯ ಪೈಕಿ ಗುರುತರ ಆರೋಪಗಳನ್ನು ಹೊಂದಿರುವ ಮೂವರು ಅಧಿಕಾರಿಗಳ ಮುಂಭಡ್ತಿಯನ್ನು ಕಾಯ್ದಿರಿಸಿದೆ. ವಿಶೇಷವೆಂದರೆ, ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ ರಾಜ್ಯವೊಂದರ 26 ಮಂದಿ ಪೊಲೀಸ್‌ ಅಧಿಕಾರಿಗಳಿಗೆ ಐಪಿಎಸ್‌ ದರ್ಜೆಗೆ ಮುಂಭಡ್ತಿ ನೀಡಿರುವುದು. ಈ ಮೊದಲು ಕೇವಲ ಮೂವರು ಅಥವಾ ಐವರು ಅಧಿಕಾರಿಗಳಿಗೆ ಮಾತ್ರ ಐಪಿಎಸ್‌ಗೆ ಮುಂಭಡ್ತಿ ನೀಡಲಾಗುತ್ತಿತ್ತು. ಆದರೆ, ಈಗ ಕರ್ನಾಟಕವೊಂದರಲ್ಲೇ 1998, 1999 ಹಾಗೂ 2001ನೇ ಬ್ಯಾಚ್‌ 26 ಮಂದಿಗೆ ಏಕಕಾಲದಲ್ಲಿ ಮುಂಭಡ್ತಿ ನೀಡಲಾಗಿದೆ.

Advertisement

1998, 1999 ಹಾಗೂ 2001ನೇ ಬ್ಯಾಚ್‌ಗಳ ಜ್ಯೋತಿ ಶ್ರೀನಾಥ್‌ ಮಹಾದೇವ್‌, ಸಿ.ಬಿ. ವೇದಮೂರ್ತಿ, ಕೆ.ಎಂ. ಶಾಂತರಾಜು, ಹನುಮಂತರಾಯ, ಡಿ. ದೇವರಾಜ್‌, ಡಿ.ಆರ್‌. ಸಿರಿಗೌರಿ, ಡಾ| ಕೆ. ಧರಣಿ ದೇವಿ, ಎಸ್‌. ಸವಿತಾ, ಸಿ.ಕೆ.ಬಾಬಾ, ಎಂ.ಎಲ್‌. ಮಧುರಾ ವೀಣಾ, ಅಬ್ದುಲ್‌ ಅಹ್ಮದ್‌, ಎಸ್‌. ಗಿರೀಶ್‌, ಕೆ. ಪುಟ್ಟಮಾದಯ್ಯ, ಟಿ. ಶ್ರೀಧರ್‌, ಎಂ. ಅಶ್ವಿ‌ನಿ, ಎ.ಎನ್‌. ಪ್ರಕಾಶ್‌ ಗೌಡ, ಜಿನೇಂದ್ರ ಕಣಗಾವಿ, ಜೆ.ಕೆ. ರಶ್ಮಿ, ಟಿ.ಪಿ. ಶಿವಕುಮಾರ್‌, ಎನ್‌. ವಿಷ್ಣುವರ್ಧನ, ಕೆ.ವಿ. ಜಗದೀಶ್‌, ಸಂಜೀವ್‌ ಎಂ. ಪಾಟೀಲ್‌, ಕೆ. ಪುರುಷೋತ್ತಮ್‌, ಎಚ್‌.ಡಿ. ಆನಂದ್‌ ಕುಮಾರ್‌, ಕಲಾ ಕೃಷ್ಣಸ್ವಾಮಿ, ಕೆ.ಜಿ.ದೇವರಾಜ್‌ ಅವರಿಗೆ ಪೊಲೀಸ್‌ ವರಿಷ್ಠಾಧಿಕಾರಿ ದರ್ಜೆಯಿಂದ ಐಪಿಎಸ್‌ ದರ್ಜೆಗೆ ಮುಂಭಡ್ತಿ ನೀಡಿ ಆದೇಶಿಸಲಾಗಿದೆ.

ಆದರೆ, ಮಧುರಾ ವೀಣಾ, ಕೆ.ವಿ. ಜಗದೀಶ್‌ ಮತ್ತು ಕೆ.ಜಿ. ದೇವರಾಜ್‌ ಅವರ ವಿರುದ್ಧ ಕೆಲವೊಂದು ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ಮೂವರ ಮುಂಭಡ್ತಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಪ್ರಕರಣ ಇತ್ಯರ್ಥವಾಗಿ ಆರೋಪದಿಂದ ಮುಕ್ತರಾದ ಬಳಿಕ ಈ ಮೂವರು ಎಪಿಎಸ್‌ ಮುಂಭಡ್ತಿ ಸೌಲಭ್ಯ ಪಡೆದುಕೊಳ್ಳಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆರೋಪ ಇದ್ದರೂ ಮುಂಭಡ್ತಿ
ವಿವಿಧ ಆರೋಪಗಳಿವೆ ಎಂಬ ಕಾರಣಕ್ಕೆ ಮೂವರು ಅಧಿಕಾರಿಗಳ ಐಪಿಎಸ್‌ ಮುಂಭಡ್ತಿ ತಡೆಹಿಡಿದಿರುವ ಕೇಂದ್ರ ಗೃಹ ಸಚಿವಾಲಯ, ಇದೇ ವೇಳೆ ಆರೋಪ ಹೊತ್ತಿರುವ ಇನ್ನು ಮೂವರು ಅಧಿಕಾರಿಗಳಿಗೆ ಮುಂಭಡ್ತಿ ನೀಡಿದೆ. ಸದ್ಯ ತುಮಕೂರು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಚ್‌.ಡಿ. ಆನಂದಕುಮಾರ್‌ ಅವರು ಸಿಸಿಬಿ ಡಿಸಿಪಿ-2 ಆಗಿದ್ದ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿದ್ದ ಹಿರಿಯ ಐಎಎಸ್‌ ಅಧಿಕಾರಿ ಗಂಗಾರಾವ್‌ ಬಡೇರಿಯಾ ಅವರ ಜಾಮೀನು ವಿಚಾರದಲ್ಲಿ ಸರಕಾರಿ ಅಭಿಯೋಜಕರ ಮೇಲೆ ಒತ್ತಡ ಹೇರಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ಹು-ಧಾರವಾಡದಲ್ಲಿ ಡಿಸಿಪಿಯಾಗಿದ್ದ ಹನುಮಂತರಾಯ ವಿರುದ್ಧ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದ ಮತ್ತು ಡಿ.ದೇವರಾಜ್‌ ವಿರುದ್ಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನೆಪದಲ್ಲಿ ಅಕ್ರಮವಾಗಿ ವ್ಯಕ್ತಿಯೊಬ್ಬರನ್ನು ಬಂಧಿಸಿದ ಆರೋಪವಿದೆ. ಆದರೂ ಇವರಿಗೆ ಮುಂಭಡ್ತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next